ಸಾರಾಂಶ
ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದ ರಾಜ್ಯದ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿರುವ ವೇಳೆಯಲ್ಲಿಯೇ ಸರ್ಕಾರ ಖಜಾನೆ ಖಾಲಿಯಾಗಿದೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಸಾಧನ ಸಮಾವೇಶದಲ್ಲಿ ₹2578 ಕೋಟಿ ವೆಚ್ಚದ ಅನುದಾನಕ್ಕೆ ಸರ್ಕಾರ ಚಾಲನೆ ನೀಡಿ ಉತ್ತರ ನೀಡಿದೆ.
ಮೈಸೂರು : ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದ ರಾಜ್ಯದ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿರುವ ವೇಳೆಯಲ್ಲಿಯೇ ಸರ್ಕಾರ ಖಜಾನೆ ಖಾಲಿಯಾಗಿದೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಸಾಧನ ಸಮಾವೇಶದಲ್ಲಿ ₹2578 ಕೋಟಿ ವೆಚ್ಚದ ಅನುದಾನಕ್ಕೆ ಸರ್ಕಾರ ಚಾಲನೆ ನೀಡಿ ಉತ್ತರ ನೀಡಿದೆ.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಜಿಲ್ಲಾಡಳಿತದ ಜತೆಗೂಡಿ ವಿವಿಧ ಇಲಾಖೆಗಳು ಆಯೋಜಿಸಿದ್ದ ಸಮಾವೇಶದಲ್ಲಿ ಹಲವು ಯೋಜನೆಗಳ ಅನುಷ್ಠಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದರು. ಸಮಾವೇಶದಲ್ಲಿ ಶಂಕು, ಈಗಾಗಲೇ ಕಾಮಗಾರಿ ಪೂರ್ಣಗೊಂಡಿರುವ ಯೋಜನೆಗಳನ್ನು ಉದ್ಘಾಟಿಸಲಾಯಿತು.
ಯಾವ ಕಾಮಗಾರಿಗೆ ಎಷ್ಟು ಖರ್ಚು: ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಅಭಿವೃದ್ಧಿ ಶಕೆ ಆರಂಭವಾಗಿದೆ. ಸಾಧನಾ ಸಮಾವೇಶದಲ್ಲಿ ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ₹163.78 ಕೋಟಿ ವೆಚ್ಚದ 7 ಕಾಮಗಾರಿಗಳ ಉದ್ಘಾಟನೆ ಹಾಗೂ ₹2,414.25ಕೋಟಿ ವೆಚ್ಚದ 67 ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.ಯುನಿಟಿ ಮಾಲ್ ನಿರ್ಮಾಣಕ್ಕೆ ₹192.99 ಕೋಟಿ, ಬನ್ನಿಮಂಟಪದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ₹120ಕೋಟಿ, ವಸ್ತು ಪ್ರದರ್ಶನ ಆವರಣದಲ್ಲಿ ಕಾರಂಜಿ, ಮೂಲ ಸೌಕರ್ಯಕ್ಕಾಗಿ ₹23.59 ಕೋಟಿ, ಸೆಸ್ಕ್‌ನಿಂದ ಯುಜಿಡಿ ಕೇಬಲ್ ಅಳವಡಿಕೆಗೆ ₹408.95 ಕೋಟಿ, ರಸ್ತೆಗಳಿಗೆ ವೈಟ್ ಟಾಪಿಂಗ್‌ಗಾಗಿ ₹502ಕೋಟಿ, ನಗರಪಾಲಿಕೆ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ ₹380 ಕೋಟಿ, ಕ್ರೀಡಾ ವಿಜ್ಞಾನ ಕೇಂದ್ರಕ್ಕಾಗಿ ₹3.5 ಕೋಟಿ, ಜಯದೇವ ಆಸ್ಪತ್ರೆ ಹಿಂಭಾಗ ನೆಪ್ರೊ, ಯುರಾಲಜಿ ಘಟಕ ಸ್ಥಾಪಿಸಲು ₹175. 5 ಕೋಟಿ, ಆಸ್ಪತ್ರೆಗಳ ಮೇಲ್ದರ್ಜೆ ಏರಿಸಲು ₹55.5 ಕೋಟಿ, ಮನುಗನಹಳ್ಳಿ ವಿದ್ಯುತ್ ಉಪಕೇಂದ್ರ ಸ್ಥಾಪಿಸಲು ₹38.73 ಕೋಟಿ, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳ ನಿರ್ಮಾಣಕ್ಕಾಗಿ ₹26.35ಕೋಟಿ, ರಂಗಾಯಣ, ಕಲಾಮಂದಿರ ನವೀಕರಣ ಮಾಡಲು 14.63 ಕೋಟಿ, ಜಿಲ್ಲೆಯಲ್ಲಿ ಚೆಕ್‌ಡ್ಯಾಮ್‌ಗಳ ನಿರ್ಮಾಣ ಮಾಡಲು ₹13 ಕೋಟಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳ ನಿರ್ಮಾಣಕ್ಕಾಗಿ ₹10.8 ಕೋಟಿ, ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಮಾಡಲು ₹84 ಲಕ್ಷ ಹಾಗೂ ಪಶು ಸಂಗೋಪನ ಇಲಾಖೆ ಕಟ್ಟಡ ನಿರ್ಮಾಣಕ್ಕಾಗಿ ₹50 ಲಕ್ಷ, ರೇಷ್ಮೆ ಇಲಾಖೆ ನೂತನ ಸಭಾಂಗಣಕ್ಕೆ ₹50 ಲಕ್ಷ, ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲು ₹50 ಲಕ್ಷ ವ್ಯಯಿಸಲಾಗುತ್ತಿದೆ.
ಇನ್ನು ₹163 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಒಳಚರಂಡಿ, ಘನತ್ಯಾಜ್ಯ ಘಟಕ, ಯುಜಿಡಿಯನ್ನು ಲೋಕಾರ್ಪಣೆಗೊಳಿಸಲಾಯಿತು. ₹19.76 ಕೋಟಿ ವೆಚ್ಚದ ಕಾರ್ಮಿಕ ಭವನ, ₹33 ಕೋಟಿಯ ಗಾಂಧಿ ಭವನ, ₹1.5 ಕೋಟಿ ವೆಚ್ಚ ವಿಜಯನಗರದಲ್ಲಿ ಮಾರುಕಟ್ಟೆ ಮಳಿಗೆಗಳು, ₹1 ಕೋಟಿ ಅರಸು ಭವನವನ್ನು ಉದ್ಘಾಟಿಸಲಾಯಿತು.