ಸಾರಾಂಶ
ಕನ್ನಡಪ್ರಭ ವಾರ್ತೆ ಮೇಲುಕೋಟೆ
ರಥಸಪ್ತಮಿ ಅಂಗವಾಗಿ 25ನೇ ರಾಜ್ಯ ಮಟ್ಟದ ಜಾನಪದಕಲಾ ಮೇಳದಲ್ಲಿ ನೂರಾರು ಕಲಾವಿದರಿಂದ ಮೂಡಿ ಬಂದ ಕಲಾ ಪ್ರದರ್ಶನ ಸಾವಿರಾರು ಮಂದಿ ಭಕ್ತರನ್ನು ಆಕರ್ಷಿಸಿತು.ಮೇಲುಕೋಟೆಯ ಉತ್ಸವ ಬೀದಿಗಳು ಗ್ರಾಮೀಣ ಜನಪದ ಕಲೆಗಳ ಅನಾವರಣಕ್ಕೆ ವೇದಿಕೆಯಾಗಿದ್ದವು. ತಮಟೆ, ಡೊಳ್ಳು, ನಗಾರಿ, ಚಂಡೆ, ಮದ್ದಳೆ, ಚಾರಸಿ ಕರಡಿಮಜಲು ಡೋಲು ಮುಂತಾದ ವಾದ್ಯಗಳ ನೀನಾದ ಝೇಂಕರಿಸುತ್ತಿತ್ತು.
ಮೇಲುಕೋಟೆಯ ಯತಿರಾಜ ದಾಸರ್ ಗುರುಪೀಠದ ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ ಕನ್ನಡಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ಜಾನಪದ ಹಬ್ಬದಲ್ಲಿ 50 ತಂಡಗಳ 7100ಕ್ಕೂ ಹೆಚ್ಚು ಕಲಾವಿದರು ಭಾಗಿಯಾಗಿ ಅಮೋಘ ಪ್ರದರ್ಶನ ನೀಡಿ ಚೆಲುವನಾರಾಯಣನಿಗೆ ಕಲಾರಾಧನೆಯ ಸೇವೆ ಮಾಡಿದರು.ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಧನಲಕ್ಷ್ಮಿ ದಂಪತಿ ಕಲಾ ಮೇಳ ಉದ್ಘಾಟಿಸಿದರು. ನಂತರ ಹಂಗರಹಳ್ಳಿ ವಿದ್ಯಾಚೌಡೇಶ್ವರಿ ಮಹಾ ಸಂಸ್ಥಾನದ ಬಾಲಮಂಜುನಾಥ ಸ್ವಾಮೀಜಿ, ರೈತನಾಯಕಿ ಸುನೀತಾ ಪುಟ್ಟಣ್ಣಯ್ಯ ಸ್ವರ್ಣಲೇಪಿತ ಸೂರ್ಯಮಂಡಲದಲ್ಲಿ ವಿರಾಜಮಾನನಾದ ಚೆಲುವನಾಯಣನ ರಥಕ್ಕೆ ಚಾಲನೆ ನೀಡಿದರು. ಪಾಂಡವಪುರ ಎಸಿ ನಂದೀಶ್, ತಹಸೀಲ್ದಾರ್ ಶ್ರೇಯಸ್, ಪ್ರಭಾರ ಇಒ ಸಂತೋಷ್, ಸಂಘಟಕರಾದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ, ಪತ್ರಕರ್ತೆ ಸೌಮ್ಯಸಂತಾನಂ, ಜನಪದಕಲಾವಿದ ಶಿವಣ್ಣಗೌಡ ಇದ್ದರು.
ಉತ್ಸವಕ್ಕೆ ಮೆರುಗು ತಂದ ಕಲಾತಂಡಗಳು:ಹನುಮ ಮತ್ತು ಘಟೋತ್ಕಚ ಕೇರಳದ ಚಂಡೆ, ಹುಬ್ಬಳ್ಳಿಯ ಜಗ್ಗಲಿಗೆ ಮೇಳ, ಹಗಲುವೇಶ, ಮೈಸೂರು ಜಿಲ್ಲೆಯ ಬ್ರಾಸ್ ಬ್ಯಾಂಡ್, ವಿಶೇಷ ತಮಟೆ ಮೇಳ, ಮೈಸೂರು ನಗಾರಿ, ನವಿಲಿನ ನೃತ್ಯ ತಲಕಾಡಿನ ಬೃಹತ್ ಹನುಮಾನ್, ಸೇರಿದಂತೆ ರಾಜ್ಯದ 50 ಕ್ಕೂ ಹೆಚ್ಚು ಜನಪದ ಕಲಾ ತಂಡಗಳು, ಜಿಲ್ಲೆಯ ಡೊಳ್ಳುಕುಣಿತ, ಪಟಾಕುಣಿತ, ಗಾರುಡಿಗೊಂಬೆ, ಕೋಲಾಟ, ಚಿಲಪಿಲಿ ಗೊಂಬೆ, ಪೂಜಾ ಕುಣಿತ, ಮಂಗಳವಾದ್ಯ, ಬ್ರಾಸ್ ಬ್ಯಾಂಡ್, ಮೈಸೂರು ನಗಾರಿ, ನೃತ್ಯ ತಮಟೆ, ವೀರಮಕ್ಕಳ ಕುಣಿತ, ಜಡೆಕೋಲಾಟ, ದಾಸಯ್ಯರ ದರ್ಶನ, ಬೆಂಕಿ ಭರಾಟೆ, ಖಡ್ಗ ಪವಾಡ, ವೀರಭದ್ರನ ನೃತ್ಯ, ಜಾಂಜ್ ಮೇಳ, ನಾಸಿಕ್ ಡೋಲ್, ಮರಗಾಲು ಕುಣಿತ, ಯಕ್ಷಗಾನ ಗೊಂಬೆಗಳು, ಕರಡಿಮಜಲು, ಗ್ರಾಮೀಣ ಮಂಗಳವಾದ್ಯ ಸ್ಯಾಕ್ಸ್ ಪೋನ್ ತಂಡಗಳು ಭಾಗಿಯಾಗಿದ್ದವು. ವಿವಿಧ ಶಾಲೆಗಳ 300ಕ್ಕೂ ಹೆಚ್ಚು ಪುಟಾಣಿಗಳು ನೂರೊಂದು ಕಳಸ, ವೇಷಭೂಷಣ ಹಾಗೂ ಇತರ ಪ್ರತಿಭಾ ಕಾರ್ಯಕ್ರಮಗಳು ಉತ್ಸವಕ್ಕೆ ಮೆರಗು ನೀಡಿದವು.
ರಥಸಪ್ತಮಿ ಜಾನಪದ ರಸಸಂಜೆಯನ್ನು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಉದ್ಘಾಟಿಸಿದರು. ಸಂಸ್ಕೃತ ಸಂಶೋಧನಾ ಕೇಂದ್ರದ ಕುಲಸಚಿವ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜನಪದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಕಲಾವಿದರನ್ನು ಸನ್ಮಾನಿಸಲಾಯಿತು. ಜಾನಪದ ಕಾರ್ಯಕ್ರಮ ಬೆಂಕಿಭರಾಟೆ ನೆರವೇರಿತು.