ರಾಜ್ಯದಲ್ಲಿ 26% ಹೆಚ್ಚು ಮುಂಗಾರು ಪೂರ್ವ ಮಳೆ!

| Published : May 24 2024, 12:45 AM IST / Updated: May 24 2024, 08:40 AM IST

ಸಾರಾಂಶ

ರಾಜ್ಯದಲ್ಲಿ ಈ ಬಾರಿ ಪೂರ್ವ ಮುಂಗಾರು ಮಳೆ ವಾಡಿಕೆ ಪ್ರಮಾಣಕ್ಕಿಂತ ಶೇ.26ರಷ್ಟು ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

 ಬೆಂಗಳೂರು :  ರಾಜ್ಯದಲ್ಲಿ ಈ ಬಾರಿ ಪೂರ್ವ ಮುಂಗಾರು ಮಳೆ ವಾಡಿಕೆ ಪ್ರಮಾಣಕ್ಕಿಂತ ಶೇ.26ರಷ್ಟು ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಾರ್ಚ್‌ನಿಂದ ಮೇ ಅಂತ್ಯದವರೆಗೆ ಪೂರ್ವ ಮುಂಗಾರು ಮಳೆಯ ಅವಧಿಯಾಗಿದೆ. ವಾಡಿಕೆಯಂತೆ ಈ ಅವಧಿಯಲ್ಲಿ ರಾಜ್ಯದಲ್ಲಿ 8.9 ಸೆಂ.ಮೀ.ನಷ್ಟು ಮಳೆಯಾಗುತ್ತದೆ. ಆದರೆ, ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ರಾಜ್ಯದಲ್ಲಿ ಮಳೆಯೇ ಬಂದಿಲ್ಲ. ಆದರೆ ಮೇ ತಿಂಗಳಲ್ಲಿ ಸುರಿದ ಮಳೆ ಹಿಂದಿನ ಎರಡು ತಿಂಗಳಿನಲ್ಲಿ ಉಂಟಾದ ಮಳೆ ಕೊರತೆ ನೀಗಿಸಿದೆ. ಅಷ್ಟೇ ಅಲ್ಲ ವಾಡಿಕೆ ಪ್ರಮಾಣಕ್ಕಿಂತ ಶೇ.26ರಷ್ಟು ಅಂದರೆ ಮೇ 22ರ ವರೆಗೆ 11.3 ಸೆಂ.ಮೀ. ಮಳೆಯಾಗಿದೆ. ಮೇ ತಿಂಗಳು ಮುಕ್ತಾಯಕ್ಕೆ ಇನ್ನೂ ಒಂದು ವಾರ ಕಾಲಾವಕಾಶವಿದ್ದು, ಇನ್ನಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿಯ ಮೂರು ಜಿಲ್ಲೆಗಳ ಪೈಕಿ ಉಡುಪಿ ಜಿಲ್ಲೆಯಲ್ಲಿ ಮಾತ್ರ ಶೇ.7ರಷ್ಟು ಮಳೆ ಕೊರತೆ ಉಂಟಾಗಿದ್ದು, ಉಳಿದ ಎರಡು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಒಟ್ಟಾರೆ ಕರಾವಳಿಯಲ್ಲಿ ವಾಡಿಕೆಗಿಂತ ಶೇ.37ರಷ್ಟು ಹೆಚ್ಚು ಮಳೆಯಾಗಿದೆ.

ಉತ್ತರ ಒಳನಾಡಿನ 11 ಜಿಲ್ಲೆಗಳ ಪೈಕಿ ಯಾದಗಿರಿ, ಕಲಬುರಗಿ, ಹಾವೇರಿ ಜಿಲ್ಲೆಯಲ್ಲಿ ಮಳೆ ಕೊರತೆ ಉಂಟಾಗಿದೆ. ಉಳಿದ ಎಲ್ಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಒಟ್ಟಾರೆ ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ಶೇ.28ರಷ್ಟು ಹೆಚ್ಚು ಮಳೆಯಾಗಿದೆ.

ದಕ್ಷಿಣ ಒಳನಾಡಿನ 17 ಜಿಲ್ಲೆಗಳಲ್ಲಿ ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ಮಾತ್ರ ಮಳೆ ಕೊರತೆ ಉಂಟಾಗಿದೆ. ಉಳಿದ ಎಲ್ಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಒಟ್ಟಾರೆ ದಕ್ಷಿಣ ಒಳನಾಡಿನಲ್ಲಿ ಶೇ.23 ರಷ್ಟು ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಯಾವ ಭಾಗದಲ್ಲಿ ಎಷ್ಟು ಮಳೆ (ಸೆಂ.ಮೀ) (ಮಾ,1 ರಿಂದ ಮೇ 22ವರೆಗೆ)

ಪ್ರದೇಶವಾಡಿಕೆಸುರಿದ ಮಳೆಶೇಕಡಾ (ಹೆಚ್ಚುವರಿ)ಕರಾವಳಿ10.013.7ಶೇ.37

ಉತ್ತರ ಒಳನಾಡು6.087.76ಶೇ.38

ದಕ್ಷಿಣ ಒಳನಾಡು11.213.8ಶೇ.23ವಾಯುಭಾರ ಕುಸಿತದಿಂದ ಮುಂಗಾರು ಮಳೆಗಿಲ್ಲ ಅಡ್ಡಿ:ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಪ್ರತ್ಯೇಕ ವಾಯುಭಾರ ಕುಸಿತದಿಂದ ಮುಂಗಾರು ಆರಂಭಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಹವಾಮಾನ ತಜ್ಞರು ಸ್ಪಷ್ಟಪಡಿಸಿದ್ದಾರೆ.ಮೇ 31ಕ್ಕೆ ಮುಂಗಾರು ಕೇರಳ ಪ್ರವೇಶಿಸಿದ ಒಂದರೆಡು ದಿನದಲ್ಲಿ ಕರ್ನಾಟಕಕ್ಕೆ ಮುಂಗಾರು ಆಗಮನವಾಗಲಿದೆ. ಈಗಾಗಲೇ ಮುಂಗಾರು ಮಾರುತಗಳು ನೈಋತ್ಯ ದಿಕ್ಕಿನ ಕಡೆ ಆಗಮಿಸಿವೆ. ಈ ಸಂದರ್ಭದಲ್ಲಿ ಬಂಗಾಳ ಕೊಲ್ಲಿಯ ವಾಯುಭಾರ ಕುಸಿತ ಮುಂಗಾರಿಗೆ ಇನ್ನಷ್ಟು ಪುಷ್ಟಿ ನೀಡಲಿದೆ. ಅರಬ್ಬಿ ಸಮುದ್ರದಲ್ಲಿ ರೂಪಗೊಂಡಿರುವ ಮತ್ತೊಂದು ವಾಯುಭಾರ ಕುಸಿತ ಪ್ರಬಲಗೊಂಡರೆ, ಮುಂದಿನ ಎರಡು ದಿನ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಕೆಎಸ್‌ಎನ್‌ಡಿಎಂಸಿ ನಿವೃತ್ತ ನಿರ್ದೇಶಕ ಶ್ರೀನಿವಾಸ್‌ ರೆಡ್ಡಿ ಮಾಹಿತಿ ನೀಡಿದ್ದಾರೆ.

ಹಲವು ಜಿಲ್ಲೆಗೆ ಯೆಲ್ಲೋ ಅಲರ್ಟ್‌:ಮೇ 24 ಹಾಗೂ 25ರಂದು ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ 6 ರಿಂದ 11 ಸೆಂ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇರುವುದರಿಂದ ಯಲ್ಲೋ ಅಲರ್ಟ್‌ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ನಡುವೆ ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಪ್ರತ್ಯೇಕ ವಾಯುಭಾರ ಕುಸಿತ ಉಂಟಾಗಿವೆ. ಇದರಿಂದ ಮುಂಗಾರು ಆರಂಭಕ್ಕೆ ತೊಂದರೆ ಉಂಟಾಗುವುದಿಲ್ಲ. ನಿರೀಕ್ಷೆಯಂತೆ ಮುಂಗಾರು ಆಗಮನವಾಗಲಿದೆ.ಮುಂಗಾರು ಪೂರ್ವ ಮಳೆಗೆ ಮತ್ತೊಂದು ಬಲಿ:

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದೆ. ಗುರುವಾರ ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಮಂಗಳೂರಿನಲ್ಲಿ ಸಿಡಿಲಬ್ಬರದ ಮಳೆಗೆ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.

ಕರಾವಳಿಯಲ್ಲಿ ಮಳೆ ಮುಂದುವರಿದಿದ್ದು, ಮಂಗಳೂರಿನ ಜೆಪ್ಪಿನಮೊಗರಿನಲ್ಲಿ ಸಿಡಿಲಿಗೆ ರಾಜ್‌ ಕುಮಾರ್‌ ಚೌಧುರಿ (55) ಎಂಬುವರು ಮೃತಪಟ್ಟಿದ್ದಾರೆ. ಇವರು ಉತ್ತರ ಪ್ರದೇಶ ಮೂಲದ ಕಾರ್ಮಿಕನಾಗಿದ್ದು, ಮನೆಯ ಅಂಗಳದಲ್ಲಿ ನಿಂತಿದ್ದಾಗ ಹಠಾತ್‌ ಸಿಡಿಲು ಬಡಿಯಿತು. ಈ ಮಧ್ಯೆ, ಮಂಗಳೂರಿಗೆ ಕುಡಿಯುವ ನೀರು ಪೂರೈಸುವ ತುಂಬೆ ಡ್ಯಾಂ ಭರ್ತಿಯಾಗಿದ್ದು, ಗುರುವಾರ ಒಂದು ಗೇಟ್‌ ತೆಗೆದು, ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

ಕಲಬುರಗಿ ತಾಲೂಕಿನ ಸಿತನೂರಿನಲ್ಲಿ ಸಿಡಿಲಿಗೆ 1 ಎತ್ತು, ಉಡುಪಿ ಜಿಲ್ಲೆ ಕಾಂತಾವರಗಳಲ್ಲಿ ಸಿಡಿಲಿಗೆ 1 ಹಸು ಮೃತಪಟ್ಟಿದೆ. ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಕಡಹಿನಬೈಲು ಗ್ರಾಮದಲ್ಲಿ ಭೀಮನರಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾದ ಕಿರು ಸೇತುವೆ ಮಳೆಗೆ ಕುಸಿದು ಬಿದ್ದಿದೆ. ಯಾದಗಿರಿಯ ಹಲವೆಡೆ ಬಿರುಗಾಳಿ ಮಳೆಗೆ ಮರಗಳು ಉರುಳಿ ಬಿದ್ದು, ಆವಾಂತರ ಸೃಷ್ಟಿಯಾಗಿದೆ. ಮಾತಾ ಮಾಣಿಕೇಶ್ವರಿ ನಗರದಲ್ಲಿ ಮನೆಯ ಶೆಡ್‌ ವೊಂದು ಹಾರಿ ಹೋಗಿದ್ದು, ನಿವಾಸಿಗಳು ಮನೆಯಿಂದ ಹೊರಗೆ ಓಡಿ ಬಂದು ಜೀವ ರಕ್ಷಿಸಿಕೊಂಡಿದ್ದಾರೆ. ಬಾಗಲಕೋಟೆ, ಧಾರವಾಡಗಳಲ್ಲಿ ಸಂಜೆಯ ವೇಳೆ ಸುರಿದ ಭಾರಿ ಮಳೆಗೆ ತಗ್ಗು ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿ, ನಿವಾಸಿಗಳು ಪರದಾಡುವಂತಾಯಿತು.