ಸಾರಾಂಶ
ವಿವಿಧ ಕಾರಣಗಳಿಗೆ ಗ್ಯಾರಂಟಿ ವಿಲೇವಾರಿಯಾಗದ ಅರ್ಜಿಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಜನವರಿ ತಿಂಗಳಲ್ಲಿ ಪುತ್ತೂರು ಮತ್ತು ಉಪ್ಪಿನಂಗಡಿಯಲ್ಲಿ ಒಟ್ಟು ೫ ಕ್ಯಾಂಪ್‌ಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಮೊದಲ ಕ್ಯಾಂಪ್ ಜ.೧೩ರಂದು ಉಪ್ಪಿನಂಗಡಿಯಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಪುತ್ತೂರು
ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಡಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು ೨,೬೧,೩೨,೦೨,೬೬೮ ಕೋಟಿ ರುಪಾಯಿ ಅನುದಾನ ಲಭಿಸಿದ್ದು, ಗ್ಯಾರಂಟಿ ಯೋಜನೆಯು ಬಡವರ ಪಾಲಿನ ವರದಾನವಾಗಿದೆ. ತೆರಿಗೆ ಹಣವನ್ನು ಅರ್ಹರಿಗೆ ಗ್ಯಾರಂಟಿ ಮೂಲಕ ಸರಕಾರ ನೀಡುತ್ತಿದೆ. ಶೇ.೯೮ ಅರ್ಹ ಫಲಾನುಭವಿಗಳು ಗ್ಯಾರಂಟಿಯ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ತಿಳಿಸಿದ್ದಾರೆ. ಅವರು ಬುಧವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಡಿಸೆಂಬರ್ ೨೪ ರ ತನಕ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಪುತ್ತೂರು ತಾಲೂಕಿಗೆ ೨೧೧,೪೮,೬೪,೧೨೧ ರುಪಾಯಿ ಅನುದಾನ ಬಿಡುಗಡೆಯಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ವಿಟ್ಲ ಹೋಬಳಿಗೆ ರೂ. ೪೯,೮೩,೩೮,೫೪೭ ಅನುದಾನ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು. ಸೇರ್ಪಡೆಗೆ ಕ್ಯಾಂಪ್: ಸುಮಾರು ೫೭೧ ಮಂದಿ ಜಿಎಸ್.ಟಿ. ಪಾವತಿದಾರರಾಗಿರುವ ಕಾರಣಕ್ಕೆ ಅನುನಾದಿಂದ ವಂಚಿತರಾಗಿದ್ದು, ಇದರಲ್ಲಿ ೯೨ ಮಂದಿ ಮರು ಪರಿಶೀಲನೆಗೊಳಪಟ್ಟು ಅವರ ಅರ್ಜಿಗಳನ್ನು ಸರಕಾರಕ್ಕೆ ಕಳಹಿಸಿಕೊಡಲಾಗಿದೆ. ಸುಮಾರು ೫ ಸಾವಿರ ಮಂದಿ ಗೃಹಲಕ್ಷ್ಮೀಗೆ ವಿವಿಧ ಕಾರಣಗಳಿಗೆ ಅರ್ಜಿ ಸಲ್ಲಿಸದವರು ಇದ್ದಾರೆ. ತಾಂತ್ರಿಕ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಗೆ ಗ್ಯಾರಂಟಿ ವಿಲೇವಾರಿಯಾಗದ ಅರ್ಜಿಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಜನವರಿ ತಿಂಗಳಲ್ಲಿ ಪುತ್ತೂರು ಮತ್ತು ಉಪ್ಪಿನಂಗಡಿಯಲ್ಲಿ ಒಟ್ಟು ೫ ಕ್ಯಾಂಪ್‌ಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಮೊದಲ ಕ್ಯಾಂಪ್ ಜ.೧೩ರಂದು ಉಪ್ಪಿನಂಗಡಿಯಲ್ಲಿ ನಡೆಯಲಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಗ್ಯಾರಂಟಿ ಅನುಷ್ಠಾನ ಜಿಲ್ಲಾ ಸಮಿತಿ ಸದಸ್ಯ ಪೂರ್ಣೇಶ್ ಭಂಡಾರಿ, ತಾಲೂಕು ಸಮಿತಿ ಸದಸ್ಯರಾದ ವಿಶ್ವಜಿತ್ ಪುತ್ತೂರು, ವಿಜಯಲಕ್ಷ್ಮೀ, ಅಬ್ಬು ವಿಟ್ಲ ಇದ್ದರು.