ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ವಿವಿಧ ತನಿಖೆ ತಂಡಗಳು ರಾಜ್ಯದಲ್ಲಿ ಈವರೆಗೆ 35 ಕೋಟಿ ರು. ನಗದು ಸೇರಿದಂತೆ 262 ಕೋಟಿ ರು. ಮೊತ್ತದ ವಿವಿಧ ವಸ್ತುಗಳನ್ನು ಜಪ್ತಿ ಮಾಡಿವೆ.133 ಕೋಟಿ ರು ಮೌಲ್ಯದ 1.33 ಕೋಟಿ ಲೀಟರ್ ಮದ್ಯ, 5.48 ಕೋಟಿ ರು. ಮೌಲ್ಯದ 323 ಕೆಜಿ ಮಾದಕ ವಸ್ತು, 9.49 ಕೋಟಿ ರು. ಮೌಲ್ಯದ 16.10 ಕೆಜಿ ಚಿನ್ನ, 27 ಲಕ್ಷ ರು. ಮೌಲ್ಯದ ಬೆಳ್ಳಿ ಜಪ್ತಿ ಮಾಡಲಾಗಿದೆ ಎಂದು ಮುಖ್ಯಚುನಾವಣಾಧಿಕಾರಿ ಕಚೇರಿ ತಿಳಿಸಿದೆ.
ನಗದು, ಮದ್ಯ ಸೇರಿದಂತೆ ವಶಪಡಿಸಿಕೊಂಡ ವಿವಿಧ ವಸ್ತುಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ 1,337 ಎಫ್‌ಐಆರ್ ದಾಖಲಿಸಲಾಗಿದೆ. ಬೆಂಗಳೂರು ಕೇಂದ್ರ ಕ್ಷೇತ್ರದ ಗುಂಜೂರಪಾಳ್ಯದಲ್ಲಿ 10 ಲಕ್ಷ ರು. ಮೌಲ್ಯದ 5.5 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಲಾಗಿದೆ.ಖರ್ಗೆ, ಸಿದ್ದು, ಬೇಳೂರು ವಿರುದ್ಧ ಬಿಜೆಪಿ ದೂರು:ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಆಧಾರ ರಹಿತ ಆರೋಪ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಅಧಾರ ಮೇಲೆ ಮತ ಕೇಳಿರುವ ವಿಚಾರ ಸಂಬಂಧ ಕಾಂಗ್ರೆಸ್ ವಿರುದ್ಧ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಬಿಜೆಪಿ ದೂರು ನೀಡಿದೆ.
ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ವಕ್ತಾರ ಅಶೋಕ್ ಗೌಡ, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತ್ ಕುಮಾರ್ ನೇತೃತ್ವದಲ್ಲಿ ಬಿಜೆಪಿ ನಿಯೋಗವು ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ತೆರಳಿ ದೂರು ನೀಡಿತು.ಒಟ್ಟು ನಾಲ್ಕು ವಿಚಾರಗಳ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಪುಲ್ವಾಮ ದಾಳಿಗೆ ಬಿಜೆಪಿ ಕಾರಣ ಎಂದು ಹೇಳಿಕೆ ನೀಡಿ ಜನರ ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್ ಶಾಸಕರು ಮತ್ತು ಸಚಿವರ ವಿರುದ್ಧ, ಚೀನಾ ಯುದ್ಧದ ಸಂದರ್ಭದಲ್ಲಿ ಪ್ರಧಾನಿ ಅಫೀಮು ಸೇವಿಸಿ ಮಲಗಿದ್ದರು ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿರುದ್ದ, ಬಿಜೆಪಿಯವರೆಲ್ಲಾ ಭಯೋತ್ಪಾದಕರು ಎಂಬ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ ವಿರುದ್ಧ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಆಧಾರದ ಮೇಲೆ ಮತ ಕೇಳುತ್ತಿರುವ ವಿರುದ್ಧ ದೂರು ನೀಡಲಾಗಿದೆ.ಪುಲ್ವಾಮ ದಾಳಿಗೆ ಬಿಜೆಪಿಯವರೇ ಕಾರಣ ಎಂಬ ಕಾಂಗ್ರೆಸ್ ಶಾಸಕರು ಮತ್ತು ಗೃಹ ಸಚಿವರ ಹೇಳಿಕೆ ಖಂಡನೀಯ. ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳಾಗಿದ್ದು, ಪುಲ್ವಾಮ ದಾಳಿಗೆ ಪಾಕಿಸ್ತಾನವೇ ಕಾರಣ ಎಂಬುದಕ್ಕೆ ಸ್ಪಷ್ಟವಾದ ಆಧಾರಗಳು ಸಿಕ್ಕಿವೆ. ಆದರೂ ಬಿಜೆಪಿಯವರೇ ಕಾರಣ ಎಂಬ ಹೇಳಿಕೆ ಸರಿಯಲ್ಲ. ಇಂತಹ ಸಚಿವರು ಮತ್ತು ಶಾಸಕರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.ಚೀನಾ ಯುದ್ಧದ ಸಂದರ್ಭದಲ್ಲಿ ಪ್ರಧಾನಿ ಅಫೀಮು ಸೇವಿಸಿ ಮಲಗಿದ್ದರು ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಕ್ಕಲಿಗ ಜಾತಿ ಆಧಾರದ ಮೇಲೆ ಮತ ಕೇಳುತ್ತಿದ್ದು, ಒಕ್ಕಲಿಗ ಮತಗಳು ಕಾಂಗ್ರೆಸ್‌ಗೆ ಹಾಕಬೇಕು ಎಂದಿದ್ದಾರೆ. ಕಾಂಗ್ರೆಸ್ಸಿಗರ ಹೇಳಿಕೆಗಳು ನೀತಿಸಂಹಿತೆ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ದಿನೇಶ್ ಮನೇಲಿ ಪಾಕಿಸ್ತಾನ ಇದೆ ಎಂಬ ಯತ್ನಾಳ್-ದೂರು:ರಾಜ್ಯ ಆರೋಗ್ಯ ಮಂತ್ರಿ ಹಾಗೂ ಗಾಂಧಿನಗರದ ಕ್ಷೇತ್ರದ ಶಾಸಕ ದಿನೇಶ್ ಗೂಂಡಾರಾವ್‌ರವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮ ಜರುಗಿಸುವಂತೆ ಶೇಷಾದ್ರಿಪುರ ಠಾಣೆಗೆ ಶನಿವಾರ ಗಾಂಧಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ದೂರು ನೀಡಿದೆ.
ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಎನ್‌ಐಎ ವಿಚಾರಣೆಗೊಳಗಾದ ಬಿಜೆಪಿ ಕಾರ್ಯಕರ್ತನ ಪರ ಸಮರ್ಥನೆ ಮಾಡುವಾಗ ಸಚಿವ ಗೂಂಡೂರಾವ್‌ರವರ ಮನೆಯಲ್ಲೇ ಅರ್ಧ ಪಾಕಿಸ್ತಾನವಿದೆ. ದೇಶ ವಿರೋಧಿ ಹೇಳಿಕೆ ನೀಡುವುದು ಸಚಿವರ ಚಟವಾಗಿದೆ ಎಂದು ಯತ್ನಾಳ್ ಹೇಳಿಕೆ ನೀಡಿದ್ದಾರೆ. ಈ ಮೂಲಕ ಸಚಿವರ ಕುಟುಂಬವನ್ನು ನಿಂದಿಸಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಗಾಂಧಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ,ಶರವಣನ್ ಕಿಡಿಕಾರಿದ್ದಾರೆ.ಚುನಾವಣೆ ಸಂದರ್ಭದಲ್ಲಿ ಕೋಮುಸೌಹಾರ್ದತೆ ಹಾಳು ಮಾಡುವ ದುರುದ್ದೇಶದಿಂದ ಸಚಿವ ಗೂಂಡೂರಾವ್ ಕುಟುಂಬದ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನೀಡಿದ್ದಾರೆ ಎಂದು ದೂರಿದ್ದಾರೆ.