ಜಿಲ್ಲೆಯಲ್ಲಿ 27 ದಿನ ಸಂವಿಧಾನ ಜಾಗೃತಿ ಜಾಥಾ: ಜಿಲ್ಲಾಧಿಕಾರಿ

| Published : Jan 18 2024, 02:01 AM IST

ಸಾರಾಂಶ

ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲೆಯ ಎಲ್ಲಾ 194 ಗ್ರಾಮ ಪಂಚಾಯಿತಿ , ನಗರ, ಸ್ಥಳೀಯ ಸಂಸ್ಥೆಗಳ ಕೇಂದ್ರಸ್ಥಾನದಲ್ಲಿ ಸಂವಿಧಾನ ಸ್ತಬ್ದಚಿತ್ರದ ಮೆರವಣಿಗೆ ನಡೆಯಲಿದೆ ಎಂದು ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ ದೇಶ ಸ್ವಾತಂತ್ರ್ಯವಾದ ನಂತರ 1950 ರ ಜನವರಿ 26 ರಿಂದ ಸಂವಿಧಾನ ಜಾರಿಯಾಗಿದ್ದು, 2024 ರ ಜನವರಿ 26 ರಂದು ಅಮೃತ ಮಹೋತ್ಸವ ದಿನಾಚರಣೆ ಮಾಡಲಾಗುತ್ತಿದ್ದು ಸಂವಿಧಾನದ ಅಂಶಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಭಾರತದ ಸಂವಿಧಾನ ಜಾಗೃತಿ ಜಾಥಾದ ಸ್ಥಬ್ಧಚಿತ್ರ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲೆಯ ಎಲ್ಲಾ 194 ಗ್ರಾಮ ಪಂಚಾಯಿತಿಗಳ ಕೇಂದ್ರಸ್ಥಾನ ಮತ್ತು 7 ನಗರ, ಸ್ಥಳೀಯ ಸಂಸ್ಥೆಗಳ ಕೇಂದ್ರಸ್ಥಾನದಲ್ಲಿ ಸಂವಿಧಾನ ಸ್ತಬ್ದಚಿತ್ರದ ಮೆರವಣಿಗೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ 27 ದಿನಗಳ ಕಾಲ ಈ ಜಾಥಾ ನಡೆಯಲಿದೆ ಎಂದರು.

ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರಸ್ಥಾನಕ್ಕೆ ಬರಲಿದ್ದು ಇಲ್ಲಿ ವಿವಿಧ ಕಾರ್ಯಕ್ರಮಗಳು, ಸಂವಿಧಾನ ಕುರಿತು ಉಪನ್ಯಾಸ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಾನತೆ ಕುರಿತಂತೆ ಸರ್ಕಾರ ಕೈಗೊಂಡಿರುವ ಯೋಜನೆಗಳ ಜಾಗೃತಿಯನ್ನು ಈ ವೇಳೆ ಮೂಡಿಸುವ ಮೂಲಕ ಸಂವಿಧಾನದ ಆಶಯಗಳ ಕುರಿತು ಜನ ಜಾಗೃತಿ ಮೂಡಿಸುವುದು ಈ ಸಂವಿಧಾನ ಜಾಥಾ ಉದ್ದೇಶವಾಗಿರುತ್ತದೆ ಎಂದು ಹೇಳಿದರು.

ಗ್ರಾಮಗಳಿಗೆ ಜಾಥಾ ಆಗಮಿಸಿದಾಗ ಗ್ರಾಮ ಪಂಚಾಯಿತಿ ಮುಂದಾಳತ್ವದಲ್ಲಿ ಸ್ವಾಗತಿಸುವುದು ಮತ್ತು ಮೆರವಣಿಗೆ ಏರ್ಪಡಿಸಿದ ವೇಳೆ ಸ್ಥಳೀಯ ಕಲಾ ತಂಡ ಗಳನ್ನು ಭಾಗವಹಿಸುವಂತೆ ನೋಡಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ನಾಗರಿಕರು, ಸಂಘ, ಸಂಸ್ಥೆಯವರು ಭಾಗವಹಿಸುವಂತೆ ನೋಡಿಕೊಳ್ಳಲು ತಿಳಿಸಿದರು.

ಜಾಥಾವನ್ನು ಜ.26ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಗಣರಾಜ್ಯೋತ್ಸವದ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸುವರು. ಎಲ್ಲಾ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಿಸಲು ಉಸ್ತುವಾರಿ ವಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಪಂ ಸಿಇಓ ಸುರೇಶ್ ಬಿ.ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.