ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾಗಿರುವ ಮಾಯಸಂದ್ರದಲ್ಲಿ ಸೂಕ್ತ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲ್ಲನಾಗತಿಹಳ್ಳಿ ಚಂದ್ರು ಕೆಎಸ್‌ಆರ್ ಟಿಸಿ ಅಧಿಕಾರಿಗಳಿಗೆ ಮನವಿ ಮಾಡಿದರು.ಈ ಕುರಿತಂತೆ ಶನಿವಾರ ಡಿಪೋ ಮ್ಯಾನೇಜರ್ ತಮ್ಮಯ್ಯ, ಹವಾಲ್ದಾರ್ ಸೀನಪ್ಪ, ಸಂಚಾರ ನಿಯಂತ್ರಣಾಧಿಕಾರಿ ನಾರಾಯಣ ಸ್ವಾಮಿ, ಪಿಡಿಒ ಸುರೇಶ್ ಸೇರಿದಂತೆ ಗ್ರಾಮ ಪಂಚಾಯಿತಿಯ ಕೆಲವು ಸದಸ್ಯರೊಂದಿಗೆ ಮಾಯಸಂದ್ರದ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಸ್ಥಳ ಪರಿಶೀಲನೆ ನಡೆಸಿದ ಅವರು ಮೈಸೂರು ಕಡೆಯಿಂದ ಬರುವ ಬಸ್ ಗಳು ಅಥವಾ ವಾಹನಗಳು ಇಲ್ಲಿ ನಿಲ್ಲಲು ಆಟೋಗಳು ರಸ್ತೆಯ ಪಕ್ಕದಲ್ಲೇ ನಿಲ್ಲಿಸುತ್ತಿದುದರಿಂದ ಸಮಸ್ಯೆಯಾಗುತ್ತಿದೆ.
ಈಗ ಆಟೋ ನಿಲ್ದಾಣವನ್ನು ರಸ್ತೆ ಪಕ್ಕದಿಂದ ಸುಮಾರು 10 ಅಡಿ ದೂರದಲ್ಲಿ ನಿಲ್ಲಿಸುವಂತೆ ಎಲ್ಲಾ ಆಟೋ ಮಾಲೀಕರು ಮತ್ತು ಚಾಲಕರಿಗೆ ಸೂಚನೆ ನೀಡಿದರು. ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಸ್ ನಿಲ್ದಾಣದ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ಸಲುವಾಗಿ ನಾಡ ಕಚೇರಿಯ ಬಳಿಯೇ ಸುಮಾರು 27 ಗುಂಟೆ ಜಮೀನನ್ನು ಕೆ ಎಸ್ ಆರ್ ಟಿ ಸಿ ಗೆ ಕೊಡಲು ನಿರ್ಧರಿಸಲಾಗಿದೆ. ಮುಂದಿನ ಪ್ರಕ್ರಿಯೆ ಸರ್ಕಾರದ ಮಟ್ಟದಲ್ಲಿ ಆಗಬೇಕಿದೆ ಎಂದರು. ಸರ್ಕಾರದಿಂದ ಜಮೀನು ಹಸ್ತಾಂತರ ಕಾರ್ಯ ಆದಲ್ಲಿ ಉತ್ತಮವಾದ ಬಸ್ ನಿಲ್ದಾಣ ನಿರ್ಮಾಣ ಮಾಡಬಹುದಾಗಿದೆ ಎಂದು ಹೇಳಿದರು.ಬೆಂಗಳೂರಿಗೆ ತೆರಳುವ ಬಸ್ ಗಳು ಎಂದಿನಂತೆ ತಂಗುದಾಣದ ಬಳಿ ನಿಲುಗಡೆಯಾಗಲಿದೆ. ದೂರದೂರಗಳಿಗೆ ತೆರಳುವ ಬಸ್ ಗಳ ಪ್ರಯಾಣಿಕರ ಉಪಹಾರದ ಸಲುವಾಗಿ ಗ್ರಾಮ ಪಂಚಾಯಿತಿಯಿಂದ ನಿರ್ಮಿಸಿರುವ ಹೋಟೇಲ್ ಬಳಿ ನಿಲುಗಡೆ ಮಾಡಲಿದೆ. ಶೌಚಾಲಯದಲ್ಲಿ ಆಗಿದ್ದ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಹ ಆಗಲಿದೆ. ಆಗ ಇನ್ನೂ ಹೆಚ್ಚಿನ ಸಮಸ್ಯೆಗಳು ಉದ್ಭವಿಸಲಿದೆ. ಪ್ರತಿದಿನ ಇಲ್ಲಿಂದ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಹಾಗಾಗಿ ಸೂಕ್ತ ರಕ್ಷಣೆಯೂ ಅಗತ್ಯವಿರುವುದರಿಂದ ಕೂಡಲೇ ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡಲು ಸರ್ಕಾರದ ಮೇಲೆ ಒತ್ತಡ ತರುವುದು ಅನಿವಾರ್ಯವಾಗಲಿದೆ ಎಂದು ಅವರು ಹೇಳಿದರು. ನಟ ಜಗ್ಗೇಶ್ ಶಾಸಕರಾಗಿದ್ದ ವೇಳೆ ತಮ್ಮ ಸ್ವಗ್ರಾಮವಾಗಿರುವ ಮಾಯಸಂದ್ರದಲ್ಲಿ ಬಸ್ ನಿಲ್ದಾಣ ಮಾಡುವುದಾಗಿ ಭರವಸೆ ನೀಡಿದ್ದರು. ಕೆಲವೇ ದಿನಗಳಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆಗಿನ ಯಡಿಯೂರಪ್ಪನವರ ಸರ್ಕಾರ ಜಗ್ಗೇಶ್ ರಿಗೆ ಕೆ ಎಸ್ ಆರ್ ಟಿ ಸಿ ಯ ಉಪಾಧ್ಯಕ್ಷ ಸ್ಥಾನವನ್ನೂ ಸಹ ಬಳುವಳಿಯಾಗಿ ನೀಡಿತ್ತು. ಆಗಲೂ ಸಹ ಜಗ್ಗೇಶ್ ಬಸ್ ನಿಲ್ದಾಣ ಮಾಡಲು ಪ್ರಯತ್ನಿಸಿದರು. ಸಹ ಅದು ಯಶಸ್ವಿಯಾಗಲಿಲ್ಲ. ಕಳೆದ ಇಪ್ಪತ್ತೈದು ವರ್ಷಗಳಿಂದ ಬಸ್ ನಿಲ್ದಾಣದ ಪ್ರಸ್ತಾಪ ಆಗುತ್ತಿದೆ ವಿನಃ ಅದು ಕಾರ್ಯಗತವಾಗಿಲ್ಲ ಎಂದು ದೂರಿದರು.