28 ಬಾಲ್ಯ ವಿವಾಹಕ್ಕೆ ತಡೆ, 18 ಪ್ರಕರಣ ದಾಖಲು

| Published : May 23 2025, 12:04 AM IST

ಸಾರಾಂಶ

ಬಾಲ್ಯ ವಿವಾಹಕ್ಕೆ ಒಳಗಾದ ಮಕ್ಕಳು ಅವರ ಕುಟುಂಬದ ಜತೆಗೆ ಅಥವಾ ಬಾಲಕಿಯರ ಬಾಲ ಮಂದಿರದಲ್ಲಿ ಅಥವಾ ತೆರೆದ ತಂಗುದಾಣದಲ್ಲಿ ಇದ್ದರೂ ಸಹ ಅವರಿಗೆ ಶಿಕ್ಷಣ ದೊರೆಯುವ ರೀತಿಯಲ್ಲಿ ಕ್ರಮವಹಿಸಬೇಕು

ಧಾರವಾಡ: ಬಾಲ್ಯವಿವಾಹ ಗಂಭೀರ ಸಾಮಾಜಿಕ ಸಮಸ್ಯೆಯಾಗಿದ್ದು, ತಡೆಗಟ್ಟಲು ಸರ್ಕಾರ ಮತ್ತು ಜಿಲ್ಲಾಡಳಿತ ಹಲವಾರು ಕ್ರಮ ಕೈಗೊಂಡಿವೆ ಎಂದು ಜಿಪಂ ಸಿಇಓ ಭುವನೇಶ ಪಾಟೀಲ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಾಲ್ಯವಿವಾಹ ಪದ್ಧತಿ ಕುರಿತು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಜರುಗಿಸಿದ ಅವರು, 2024-25ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 28 ಬಾಲ್ಯ ವಿವಾಹ ತಡೆಗಟ್ಟಿದ್ದಾರೆ. 18 ಎಫ್‌ಐಆರ್ ದಾಖಲಾಗಿವೆ ಎಂದರು.

ಬಾಲ್ಯ ವಿವಾಹಕ್ಕೆ ಒಳಗಾದ ಮಕ್ಕಳು ಅವರ ಕುಟುಂಬದ ಜತೆಗೆ ಅಥವಾ ಬಾಲಕಿಯರ ಬಾಲ ಮಂದಿರದಲ್ಲಿ ಅಥವಾ ತೆರೆದ ತಂಗುದಾಣದಲ್ಲಿ ಇದ್ದರೂ ಸಹ ಅವರಿಗೆ ಶಿಕ್ಷಣ ದೊರೆಯುವ ರೀತಿಯಲ್ಲಿ ಕ್ರಮವಹಿಸಬೇಕು ಎಂಬ ಸೂಚನೆ ನೀಡಿದರು.

ಬಾಲ್ಯ ವಿವಾಹಕ್ಕೆ ಒಳಗಾದ ಮಕ್ಕಳ ಮನೆಗೆ ಅಧಿಕಾರಿಗಳು ಭೇಟಿ ನೀಡಿ, ಅವರೊಂದಿಗೆ ಆಪ್ತ ಸಮಾಲೋಚನೆಯನ್ನು ಸತತವಾಗಿ ಮಾಡುತ್ತಿರಬೇಕು. ಅಷ್ಟೇ ಅಲ್ಲದೆ ಸ್ವಯಂ ಉದ್ಯೋಗ ಮಾಡ ಬಯಸುವವರಿಗೆ ಸರ್ಕಾರದ ಸೌಲಭ್ಯ ನೀಡಿ, ಅವರು ಆರ್ಥಿಕವಾಗಿ ಉತ್ತಮರಾಗುವಂತೆ,ಸಮಾಜದಲ್ಲಿ ಬದುಕಲು ಅನುಕೂಲವಾಗುವಂತೆ ಅಧಿಕಾರಿಗಳು ಗಮನಹರಿಸಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ ಮಾತನಾಡಿ, ಜನರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮ ಮಾಡಬೇಕು. ಗ್ರಾಪಂ ಮಟ್ಟದಿಂದಲೇ ಬಾಲ್ಯವಿವಾಹ ಕುರಿತು ಜಾಗೃತಿ ಮೂಡಿಸಬೇಕು. ಎಲ್ಲರೂ ಒಗ್ಗಟ್ಟಿನಿಂದ ಮಾಡುವಂತಹ ಕೆಲಸವಿದು. ಬಾಲ್ಯ ವಿವಾಹ ನಡೆಯುತ್ತಿದೆ ಎಂದು ನಿಮಗೆ ತಿಳಿದ ತಕ್ಷಣ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ, ಅದು ಬಾಲ್ಯ ವಿವಾಹವೇ ಎಂದು ಖಚಿತಪಡಿಸಿಕೊಂಡು ನಂತರ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಎಫ್‌ಐಆರ್ ಮಾಡಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಡಾ.ಹುಲಿಗೆಮ್ಮ ಕುಕನೂರ ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿದ್ದರು.