ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಇದೇ ಜ.28ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರವರು ಜಿಲ್ಲೆಗೆ ಆಗಮಿಸಲಿದ್ದು, ಅವರಿಗೆ ಅಭಿನಂದನಾ ಸಮಾರಂಭವನ್ನು ಶಹಾಪುರ ನಗರದಲ್ಲಿ ಏರ್ಪಡಿಸಲಾಗಿದೆ ಎಂದು ನಿಯೋಜಿತ ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ ತಿಳಿಸಿದರು.ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಜ.28ರಂದು ಶಹಾಪುರದ ಹಳೆ ಬಸ್ ನಿಲ್ದಾಣದ ಎದುರಿಗೆ ಇರುವ ಸಿಪಿಎಸ್ ಮೈದಾನ ಆವರಣದಲ್ಲಿ ಮಧ್ಯಾಹ್ನ 3ಗಂಟೆಗೆ ಜಿಲ್ಲೆಯಿಂದ ಅಭಿನಂದನಾ ಸಮಾರಂಭ ನಡೆಯಲಿದೆ. ವಿಜಯೇಂದ್ರರು ರಾಜ್ಯಾಧ್ಯಕ್ಷರಾದ ಮೇಲೆ ಜಿಲ್ಲೆಗೆ ಪ್ರಪ್ರಥಮ ಬಾರಿಗೆ ಆಗಮಿಸುತ್ತಿರುವ ಹಿನ್ನೆಲೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಅದೇ ದಿನದಂದು ತಾವು ಜಿಲ್ಲಾಧ್ಯಕ್ಷರಾಗಿ ಪದಗ್ರಹಣ ಮಾಡುವುದಾಗಿ ತಿಳಿಸಿದರು.
ಮಾಜಿ ಸಿಎಂ ಜಗದೀಶ ಶೆಟ್ಟರ್ ಬಿಜೆಪಿಗೆ ಮರಳಿ ಬಂದಿದ್ದು, ಇನ್ನು ಮುಂದೆ ಬಿಜೆಪಿ ಪರ್ವ ಆರಂಭವಾಗಲಿದೆ ಎಂದರು.ಜಗದೀಶ ಶೆಟ್ಟರ್ ಘರ್ ವಾಪ್ಸಿ ಹಿನ್ನೆಲೆ ಜಿಲ್ಲೆಯಲ್ಲಿಯೂ ಪಕ್ಷ ಬಿಟ್ಟು ಹೋದವರನ್ನು ಮರಳಿ ಕರೆತರಲಾಗುವುದೇ ಎಂದು ಮಾಜಿ ಶಾಸಕ ವೆಂಕಟರಡ್ಡಿ ಮುದ್ನಾಳ ಅವರನ್ನು ಕೇಳಿದಾಗ, ಪಕ್ಷಕ್ಕೆ ಮರಳಿ ಬರುವವರಿಗೆ ಸದಾ ಸ್ವಾಗತವಿದೆ. ಯಾರಿಗೆ ಯಾರೂ ಶತ್ರುಗಳಲ್ಲ. ಬರುವವರಿಗೆ ತುಂಬು ಹೃದಯದ ಸ್ವಾಗತವಿದೆ ಎಂದು ಉತ್ತರಿಸಿದರು.
ಶೆಟ್ಟರ್ ಅವರು ಹೋಗಿದ್ದರು, ಮತ್ತೆ ಮರಳಿ ಬಂದಿದ್ದಾರೆ. ಯಾಕೆ ಹೋದರು, ಯಾಕೆ ಬಂದರು ಎಂಬುದು ಮುಖ್ಯವಲ್ಲ, ಈಗ ವಾಪಸ್ಸಾಗಿದ್ದಾರೆ. ಅಲ್ಲಿ ಅವರ ಸ್ಥಾನಮಾನಕ್ಕೆ ತಕ್ಕಂತೆ ಕಾಂಗ್ರೆಸ್ ನಡೆದುಕೊಳ್ಳದೇ ಇರುವುದರಿಂದ ಅವರು ಮತ್ತೆ ಮರಳಿ ಗೂಡಿಗೆ ಬಂದಿದ್ದಾರೆ ಎಂದು ವಿಶ್ಲೇಷಿಸಿದರು.ಮಾಜಿ ಶಾಸಕರಾದ ಡಾ.ವೀರಬಸಂತರಡ್ಡಿ ಮುದ್ನಾಳ, ರಾಜ್ಯ ಕಾರ್ಯದರ್ಶಿ ಲಲಿತಾ ಅನಪೂರ, ಬಿಜೆಪಿ ಮುಖಂಡರಾದ ನಾಗರತ್ನಾ ಕುಪ್ಪಿ, ಡಾ.ಶರಣಭೂಪಾಲರಡ್ಡಿ ನಾಯ್ಕಲ್, ದೇವೇಂದ್ರನಾಥ ನಾದ್, ಗುರು ಕಾಮಾ, ಶರಣಗೌಡ ಬಾಡಿಯಾಳ, ಮಾಜಿ ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ್, ಜಿಲ್ಲಾ ಮಾಧ್ಯಮ ಸಂಚಾಲಕ ವಿರೂಪಾಕ್ಷಯ್ಯ ಸ್ವಾಮಿ ಹೆಡಗಿಮುದ್ರ ಇತರರಿದ್ದರು.