ಸಾರ್ವಜನಿಕರಿಗೆ ಉತ್ತಮ ಆರೋಗ್ಯ ನೀಡಲು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕೋರಿ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ.

ಬಳ್ಳಾರಿ: ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ (ಬಿಎಂಸಿಆರ್‌ಸಿ) ದಲ್ಲಿ 288 ತಜ್ಞ ವೈದ್ಯರ ಹುದ್ದೆಗಳು, 858 ಸಿಬ್ಬಂದಿ ಮತ್ತು ದಂತ ಕಾಲೇಜಿನಲ್ಲಿ 23 ವೈದ್ಯರ ಹುದ್ದೆಗಳು ಖಾಲಿ ಇವೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣ ಪ್ರಕಾಶ್ ಆರ್. ಪಾಟೀಲ್ ತಿಳಿಸಿದ್ದಾರೆ.

ಬಳ್ಳಾರಿ-ವಿಜಯನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ, ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್ ಅವರು, ಸಾರ್ವಜನಿಕರಿಗೆ ಉತ್ತಮ ಆರೋಗ್ಯ ನೀಡಲು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕೋರಿ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ.

ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ (ಬಿಎಂಸಿಆರ್‌ಸಿ) ಕ್ಕೆ ಒಟ್ಟು 450 ತಜ್ಞ ವೈದ್ಯರ ಹುದ್ದೆಗಳು ಮಂಜೂರಾಗಿದ್ದು, ಕೇವಲ 162 ಹುದ್ದೆಗಳು ಮಾತ್ರ ಭರ್ತಿಯಾಗಿವೆ. 1,071 ಇತರೆ ಸಿಬ್ಬಂದಿಯ ಹುದ್ದೆಗಳು ಮಂಜೂರಾಗಿದ್ದು, 213 ಮಾತ್ರ ನೇಮಕಗೊಂಡಿವೆ. ಮುಂದಿನ ಐದು ವರ್ಷಗಳಲ್ಲಿ 32 ತಜ್ಞ ವೈದ್ಯರು, 31 ಇತರೆ ಸಿಬ್ಬಂದಿ ಸೇವಾ ನಿವೃತ್ತಿ ಹೊಂದಲಿದ್ದಾರೆ. ಡೆಂಟಲ್ ಕಾಲೇಜಿನಲ್ಲಿ 47 ವೈದ್ಯರ ಹುದ್ದೆಗಳು ಮಂಜೂರಾಗಿದ್ದು, 24 ಮಾತ್ರ ನೇಮಕಗೊಂಡಿವೆ ಎಂದರು.

ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ (ಬಿಎಂಸಿಆರ್‌ಸಿ) ದಲ್ಲಿ ಎನ್‌ಎಂಸಿ ಮತ್ತು ಡೆಂಟಲ್ ಕಾಲೇಜಿನಲ್ಲಿ ಡಿಸಿ (ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ) ನಿಯಮಗಳ ಪ್ರಕಾರ ಒಳ ಮೀಸಲಾತಿ ವಿವಾದ ಇತ್ಯರ್ಥವಾದ ನಂತರ ವೈದ್ಯರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಉತ್ತರಿಸಿದರು.

ಬಿಟಿಪಿಎಸ್ ಭೂ ಸಂತ್ರಸ್ತರ ಪರ:

ಬಳ್ಳಾರಿ ಥರ್ಮಲ್ ಪವರ್ ಪ್ಲಾಂಟ್‌ಗಾಗಿ 1,800.92 ಎಕರೆ ಭೂಮಿಯನ್ನು ಸ್ವಾಧೀನ ಪಡೆದುಕೊಳ್ಳಲಾಗಿದೆ. ಭೂ ಸಂತ್ರಸ್ತರಿಗೆ ಪರಿಹಾರ ನೀಡಲಾಗಿದ್ದರೂ, ಉದ್ಯೋಗ ನೀಡುವಲ್ಲಿ ಸೂಕ್ತ ಕ್ರಮ ಕೈಗೊಂಡಿಲ್ಲ. ಕಾರಣ ಸರ್ಕಾರ ಬಿಟಿಪಿಎಸ್‌ನ ಭೂ ಸಂತ್ರಸ್ತರಿಗೆ ತಪ್ಪದೇ ಉದ್ಯೋಗ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯರು ಆಗ್ರಹಿಸಿದರು.

ಇಂಧನ ಸಚಿವ ಕೆ.ಜೆ.ಜಾರ್ಜ್, ಭೂ ಸಂತ್ರಸ್ತ 293 ಕುಟುಂಬಗಳಲ್ಲಿ 169 ಅಭ್ಯರ್ಥಿಗಳಿಗೆ ಅರ್ಹತೆ ಆಧರಿಸಿ ತರಬೇತಿ ಮತ್ತು ಉದ್ಯೋಗ ನೀಡಲಾಗಿದೆ. ಉಳಿದ 124 ಸಂತ್ರಸ್ತ ಕುಟುಂಬಗಳ ಪೈಕಿ ಕೆಲವು ನ್ಯಾಯಾಲಯ ಇನ್ನಿತರೆ ಕಾರಣಗಳಿಗಾಗಿ ವಿಳಂಬವಾಗುತ್ತಿದೆ ಎಂದು ಉತ್ತರಿಸಿದರು.