ಬೆಳಗಾವಿ ಅಧಿವೇಶನದಲ್ಲಿ 2ಎ ಮೀಸಲಾತಿ ಬಗ್ಗೆ ಚರ್ಚೆ: ಶಾಸಕ ಬಾಬಾಸಾಹೇಬ

| Published : Dec 07 2024, 12:31 AM IST

ಬೆಳಗಾವಿ ಅಧಿವೇಶನದಲ್ಲಿ 2ಎ ಮೀಸಲಾತಿ ಬಗ್ಗೆ ಚರ್ಚೆ: ಶಾಸಕ ಬಾಬಾಸಾಹೇಬ
Share this Article
  • FB
  • TW
  • Linkdin
  • Email

ಸಾರಾಂಶ

ಲಿಂಗಾಯತ ಪಂಚಮಸಾಲಿ ಸಮಾಜದ ಬಡಮಕ್ಕಳ ಶೈಕ್ಷಣಿಕ ಹಾಗೂ ಆರ್ಥಿಕ ಶ್ರೇಯೋಭಿವೃದ್ಧಿಗಾಗಿ ಹಲವು ವರ್ಷಗಳಿಂದ 2ಎ ಮೀಸಲಾತಿ ಹೋರಾಟ ನಿರಂತರವಾಗಿ ನಡೆಯುತ್ತಿದ್ದು, ಡಿ.9 ರಂದು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸುತ್ತೇನೆ ಎಂದು ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಲಿಂಗಾಯತ ಪಂಚಮಸಾಲಿ ಸಮಾಜದ ಬಡಮಕ್ಕಳ ಶೈಕ್ಷಣಿಕ ಹಾಗೂ ಆರ್ಥಿಕ ಶ್ರೇಯೋಭಿವೃದ್ಧಿಗಾಗಿ ಹಲವು ವರ್ಷಗಳಿಂದ 2ಎ ಮೀಸಲಾತಿ ಹೋರಾಟ ನಿರಂತರವಾಗಿ ನಡೆಯುತ್ತಿದ್ದು, ಡಿ.9 ರಂದು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸುತ್ತೇನೆ ಎಂದು ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಭರವಸೆ ನೀಡಿದರು.

ಸಮೀಪದ ನೇಗಿನಹಾಳ ಗ್ರಾಮದ ಶಾಸಕರ ನಿವಾಸದಲ್ಲಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಸಮಾಜದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮಿಗಳು ನೇತೃತ್ವದಲ್ಲಿ ಪಂಚಮಸಾಲಿ ಸಮಾಜದ ಮೀಸಲಾತಿಗಾಗಿ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ಸಮಾಜ ಸಂಪೂರ್ಣ ಕೃಷಿಯನ್ನೇ ಅವಲಂಬಿತ್ತರಾಗಿದ್ದು, ಕೃಷಿ ಕೂಲಿಕಾರ್ಮಿಕರಾಗಿ ಬದುಕು ನಿರ್ವಹಿಸುವಲ್ಲಿ ಬಹಳಷ್ಟು ಹಿಂದುಳಿದಿದ್ದು ಹಲವಾರು ವರ್ಷಗಳಿಂದ ಅನ್ಯಾಯಕ್ಕೊಳಗಾಗಿದೆ. ಶ್ರೀಗಳ ನೇತೃತ್ವದಲ್ಲಿ ಈ ಹೋರಾಟ ತಾರ್ಕಿಕ ಅಂತ್ಯವಾಗಿ, ಸಮಾಜಕ್ಕೆ ಅನುಕೂಲವಾಗುವ ಸಂಭವಿದೆ ಎಂದರು.ಲಿಂಗಾಯತ ಪಂಚಮಸಾಲಿ ಸಮಾಜದ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ರೋಹಿಣಿ ಪಾಟೀಲ ಮಾತನಾಡಿ, ಶ್ರೀಗಳು ಸಮಾಜದ ಏಳ್ಗೆಗಾಗಿ ಹಗಲಿರುಳು ಹೋರಾಟ ಮಾಡುತ್ತಿದ್ದಾರೆ. ಅವರೊಂದಿಗೆ ಕೈಜೋಡಿಸಿ ನಾವೆಲ್ಲರೂ ಗಟ್ಟಿಯಾಗಿ ನಿಂತು ನಮ್ಮ ಕ್ಷೇತ್ರದಿಂದ ಸಾವಿರಾರು ಸಂಖ್ಯೆಯಲ್ಲಿ ಸಮಾಜ ಭಾಂದವರು ಭಾಗವಹಿಸೋಣ ಎಂದರು.ಈ ಸಂದರ್ಭದಲ್ಲಿ ಪಿಕೆಪಿಎಸ್ ಅಧ್ಯಕ್ಷ ನಾನಾಸಾಹೇಬ ಪಾಟೀಲ, ಮುಖಂಡರಾದ ಶಿವಾನಂದ ದಿವಾಣದ, ಶ್ರೀಶೈಲ ಹಡಗಿನಹಾಳ, ರುದ್ರಪ್ಪ ಬೋಳೆತ್ತಿನ, ಮಡಿವಾಳಪ್ಪ ಮರಿತಮ್ಮನವರ, ಪ್ರಕಾಶ ತಿಗಡಿ, ಶಿವಪ್ಪ ಕುಂಕೂರ, ಸಂತೋಷ ಕಾಜಗಾರ, ಈರಣ್ಣ ಉಳವಿ, ಮಹಾಂತೇಶ ಮರಿತಮ್ಮನವರ ಹಾಗೂ ಚನ್ನಮ್ಮ ಘಟಕದ ಸದಸ್ಯರು ಗ್ರಾಮದ ಪಂಚಮಸಾಲಿ ಸಮಾಜವರು ಉಪಸ್ಥಿತರಿದ್ದರು.

ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ ಅವರ ಅಧಿಕಾರವಧಿಯಲ್ಲಿ ಸಮಾಜದ ಮೀಸಲಾತಿಗಾಗಿ ಅನೇಕ ಹೋರಾಟ, ಧರಣಿ ಸತ್ಯಾಗ್ರಹ, ಬೃಹತ್ ಸಮಾವೇಶಗಳನ್ನು ಹಮ್ಮಿಕೊಂಡು ಸರ್ಕಾರದ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಸಿಎಂ ಸಿದ್ದರಾಮಯ್ಯನವರು ಕೇವಲ ಭರವಸೆ ನೀಡುತ್ತಿದ್ದಾರೆ ವಿನಹ ಕಾರ್ಯ ರೂಪಕ್ಕೆ ತರಲು ಮೀನಾಮೇಷ ಎಸಗಿ, ಮೊಸಳೆ ಕಣ್ಣಿರು ಸುರಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಡಿ.10 ರಂದು ಸಹಸ್ರಾರು ಪಂಚಮಸಾಲಿಗಳಿಂದ ಬೆಳಗಾವಿಯ ಸುವರ್ಣ ಸೌಧಕ್ಕೆ ಟ್ರ್ಯಾಕ್ಟರ್ ಮೂಲಕ ಮುತ್ತಿಗೆ ಹಾಕಲಾಗುತ್ತಿದ್ದು, ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಈ ಹೋರಾಟಕ್ಕೆ ಅಡೆತಡೆಯುಂಟು ಮಾಡಿದರೇ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ನೇರ ಕಾರಣ.

-ಬಸವಜಯ ಮೃತ್ಯುಂಜಯ ಸ್ವಾಮಿಗಳು,

ಲಿಂಗಾಯತ ಪಂಚಮಸಾಲಿ ಪ್ರಥಮ ಜಗದ್ಗುರು ಕೂಡಲಸಂಗಮ.