ಗಟ್ಟಿಮುಟ್ಟಾದ ಸಿಮೆಂಟ್‌ ರಸ್ತೆ ತೆರವು ವಿಚಾರಕ್ಕೆ ಬಿಜೆಪಿ ಆಕ್ಷೇಪ

| Published : Dec 07 2024, 12:31 AM IST

ಗಟ್ಟಿಮುಟ್ಟಾದ ಸಿಮೆಂಟ್‌ ರಸ್ತೆ ತೆರವು ವಿಚಾರಕ್ಕೆ ಬಿಜೆಪಿ ಆಕ್ಷೇಪ
Share this Article
  • FB
  • TW
  • Linkdin
  • Email

ಸಾರಾಂಶ

ರಸ್ತೆ ಅಗಲೀಕರಣ ನೆಪದಲ್ಲಿ ಸುವ್ಯಸ್ಥಿತ, ಗಟ್ಟಿಮುಟ್ಟಾಗಿರುವ ಸಿಮೆಂಟ್ ರಸ್ತೆಯನ್ನು ತೆರವು ಮಾಡಿ, ಮತ್ತೆ ಹೊಸ ರಸ್ತೆ ನಿರ್ಮಿಸಲು ಮುಂದಾಗಿರುವುದಕ್ಕೆ ಪಾಲಿಕೆ ವಿಪಕ್ಷ ಸದಸ್ಯರಾದ ಕೆ.ಪ್ರಸನ್ನಕುಮಾರ ಮತ್ತಿತರ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- ನಿಟುವಳ್ಳಿ ಮುಖ್ಯ ರಸ್ತೆ ಅಗಲೀಕರಣಕ್ಕೆ ಸಲ್ಲದು: ಕೆ.ಪ್ರಸನ್ನಕುಮಾರ ಹೇಳಿಕೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ರಸ್ತೆ ಅಗಲೀಕರಣ ನೆಪದಲ್ಲಿ ಸುವ್ಯಸ್ಥಿತ, ಗಟ್ಟಿಮುಟ್ಟಾಗಿರುವ ಸಿಮೆಂಟ್ ರಸ್ತೆಯನ್ನು ತೆರವು ಮಾಡಿ, ಮತ್ತೆ ಹೊಸ ರಸ್ತೆ ನಿರ್ಮಿಸಲು ಮುಂದಾಗಿರುವುದಕ್ಕೆ ಪಾಲಿಕೆ ವಿಪಕ್ಷ ಸದಸ್ಯರಾದ ಕೆ.ಪ್ರಸನ್ನಕುಮಾರ ಮತ್ತಿತರ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಕೆಟಿಜೆ ನಗರ ಪೊಲೀಸ್ ಠಾಣೆ ಮುಂಭಾಗದಿಂದ ಎಚ್‌.ಕೆ.ಆರ್‌. ವೃತ್ತಕ್ಕೆ ಸಂಪರ್ಕಿಸುವ ರಸ್ತೆಗೆ ಶುಕ್ರವಾರ ಸದಸ್ಯರಾದ ಕೆ.ಪ್ರಸನ್ನಕುಮಾರ, ಸದಸ್ಯರಾದ ಎಸ್.ಟಿ.ವೀರೇಶ, ಆರ್.ಶಿವಾನಂದ, ಕೆ.ಎಂ.ವೀರೇಶ, ಬಿಜೆಪಿ ಮುಖಂಡರಾದ ಆರ್.ಲಕ್ಷ್ಮಣ, ಜಯಪ್ರಕಾಶ, ಸುರೇಶ, ಯೋಗೇಶ, ಲಕ್ಷ್ಮಣ ಇತರರು ಭೇಟಿ ನೀಡಿದರು. ಸರಿಯಾಗಿದ್ದ ರಸ್ತೆ ತೆರವು ಮಾಡುತ್ತಿರುವ ಬಗ್ಗೆ ತೀವ್ರ ಕಿಡಿಕಾರಿದರು.

ಕೆ.ಪ್ರಸನ್ನಕುಮಾರ ಮಾತನಾಡಿ, ಶಿವಪ್ಪಯ್ಯ ವೃತ್ತದಿಂದ ಡಾಂಗೇ ಪಾರ್ಕ್ ಮುಖಾಂತರ ನಿಟುವಳ್ಳಿ ಮುಖ್ಯ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದಾರೆ. ಒಳ್ಳೆಯ ರಸ್ತೆಯನ್ನೇ ತೆರವು ಮಾಡಿ, ಹೊಸ ರಸ್ತೆ ನಿರ್ಮಿಸೋದನ್ನು ತೀವ್ರವಾಗಿ ಖಂಡಿಸುತ್ತೇವೆ. ಈ ಕಾಮಗಾರಿಗೆ ಸ್ಥಳೀಯ ನಿವಾಸಿಗಳು, ಸಾರ್ವಜನಿಕರ ವಿರೋಧವಿದೆ. ಹೀಗಿದ್ದರೂ ಪಾಲಿಕೆ ಅಧಿಕಾರಿಗಳಿಗೆ ಗುಣಮಟ್ಟದ ರಸ್ತೆ ಹಾಳುಗೆಡವಿ, ಹೊಸ ರಸ್ತೆ ಮಾಡಲು ಹೊರಟಿರುವುದರ ಹಿಂದಿನ ಮರ್ಮವೇನು ಎಂದು ಪ್ರಶ್ನಿಸಿದರು.

ಸ್ಥಳೀಯ ನಿವಾಸಿಗಳನ್ನು ನಾವೆಲ್ಲಾ ಸದಸ್ಯರು ಭೇಟಿ ಮಾಡಿ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದೆವು. ಸಾಕಷ್ಟು ಜನ ತಮಗೂ ಕರೆ ಮಾಡಿ, ಸುಸ್ಥಿಯ ರಸ್ತೆಯನ್ನು ತೆರವು ಮಾಡಿಸಿ, ಹೊಸ ರಸ್ತೆ ಮಾಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾ ಕೇಂದ್ರದಲ್ಲಿ ಗುಂಡಿ ಬಿದ್ದ ರಸ್ತೆಗಳೇ ಕಣ್ಣಿಗೆ ಕಾಣುತ್ತಿಲ್ಲವೇ? ಅಂತಹ ರಸ್ತೆಗಳನ್ನು ಸರಿಪಡಿಸುವ ಬಗ್ಗೆ ಇಲ್ಲದ ಕಾಳಜಿ ಸುಸ್ಥಿತಿಯ ರಸ್ತೆ ತೆರವು ಮಾಡಲು ಹೊರಟಿದ್ದಾದರೂ ಏಕೆ ಎಂದು ಪ್ರಶ್ನಿಸಿದರು.

ಪಾಲಿಕೆ ಜನರ ತೆರಿಗೆ ಹಣ ಪೋಲು ಮಾಡುತ್ತಿದೆ. ಸುಸ್ಥಿತಿಯ ರಸ್ತೆಯನ್ನು ಯಥಾಸ್ಥಿತಿಯಲ್ಲಿ ಕಾಪಾಡಬೇಕು. ಇದೇ ರಸ್ತೆಯ ಇಕ್ಕೆಲಗಳಲ್ಲಿ ಫುಟ್‌ಪಾತ್, ಚರಂಡಿ ನಿರ್ಮಾಣ ಮಾಡಲಿ. ಈಗಿರುವ ಗುಣಮಟ್ಟದ ರಸ್ತೆಯನ್ನೂ ಉಳಿಸಿಕೊಳ್ಳಲಿ ಎಂದು ಪಾಲಿಕೆ ಆಯಕ್ತರಿಗೆ ಒತ್ತಾಯಿಸಿದರು.

- - - -6ಕೆಡಿವಿಜಿ8, 9:

ದಾವಣಗೆರೆ ಡಾಂಗೇ ಪಾರ್ಕ್‌ನಿಂದ ಎಚ್ಕೆಆರ್ ವೃತ್ತದವರೆಗಿನ ಸುಸ್ಥಿತಿಯ ರಸ್ತೆಯನ್ನು ಒಡೆದು, ತೆರವು ಮಾಡುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ವಿಪಕ್ಷ ಸದಸ್ಯರಾದ ಕೆ.ಪ್ರಸನ್ನಕುಮಾರ ಇತರೆ ಸದಸ್ಯರು ಭೇಟಿ ನೀಡಿ, ಅಸಮಾಧಾನ ವ್ಯಕ್ತಪಡಿಸಿದರು.