ಸಾರಾಂಶ
ಪಂಚಮಸಾಲಿ ಸಮಾಜದ ಮಕ್ಕಳ ಶಿಕ್ಷಣಕ್ಕಾಗಿ 2ಎ ಮೀಸಲಾತಿ ಬೇಡಿಕೆಗಾಗಿ ಕಳೆದ ಮೂರು ವರ್ಷಗಳಿಂದ ಬಹಳ ದೊಡ್ಡ ಹೋರಾಟ ಕೈಗೊಳ್ಳಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಕೊಡೇಕಲ್
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಆಗ್ರಹಿಸಲಾಗಿತ್ತು, 6 ತಿಂಗಳ ಕಾಲ ಸಮಯಾವಾಕಾಶ ನೀಡಿ ಎಂದಿದ್ದರು. ಆದರೆ, ಅವರಿಗೆ ನೀಡಿದ ಸಮಯ ಮೀರಿದ್ದರೂ ಸಹಿತ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಕೂಡಲಸಂಗಮದ ಬಸವಮೃತ್ಯುಂಜಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.ಮಾ.2ರಂದು ಹುಣಸಗಿಯ ರಾಜ್ಯ ಹೆದ್ದಾರಿಯ ಮೇಲೆ ಮೀಸಲಾತಿಗಾಗಿ ಒತ್ತಾಯಿಸಿ ಬೆಳಗ್ಗೆ 9ಕ್ಕೆ ನಡೆಸಲು ಉದ್ದೇಶಿಸಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಹಗರಟಗಿ, ಬೂದಿಹಾಳ ಮುಖಂಡರ ಸಭೆ ಸೇರಿದಂತೆ ಕೊಡೇಕಲ್‌ನ ದುರದುಂಡೇಶ್ವರ ವಿರಕ್ತಮಠದ ಸಭಾಭವನದಲ್ಲಿ ನಡೆದ ಪಂಚಮಸಾಲಿ ಸಮಾಜದ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪಂಚಮಸಾಲಿ ಸಮಾಜದ ಮಕ್ಕಳ ಶಿಕ್ಷಣಕ್ಕಾಗಿ 2ಎ ಮೀಸಲಾತಿ ಬೇಡಿಕೆಗಾಗಿ ಕಳೆದ ಮೂರು ವರ್ಷಗಳಿಂದ ಬಹಳ ದೊಡ್ಡ ಹೋರಾಟ ಕೈಗೊಳ್ಳಲಾಗುತ್ತಿದೆ, ಹಿಂದಿನ ಸರ್ಕಾರ ೨ಡಿ ಮೀಸಲಾತಿ ನೀಡಿತ್ತು. ಆದರೆ, ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಅನುಷ್ಠಾನಗೊಂಡಿರಲಿಲ್ಲ. ಸಿದ್ದರಾಮಯ್ಯನವರ ಸರ್ಕಾರದೊಡನೆ ಎರಡುಬಾರಿ ಈ ಕುರಿತು ಮಾತುಕತೆ ಕೈಗೊಂಡಾಗ ಕಾನೂನು ತಜ್ಞರೊಂದಿಗೆ ಚರ್ಚಿಸಲು ಪಡೆದ ಕಾಲಾವಕಾಶ ಮೀರಿದ ಹಿನ್ನಲೆಯಲ್ಲಿ ಹೆದ್ದಾರಿ ತಡೆದು ಇಷ್ಟಲಿಂಗ ಪೂಜೆಯೊಂದಿಗೆ ಮೀಸಲಾತಿಗಾಗಿ ಆಗ್ರಹಿಸಲಾಗುವುದು ಎಂದರು.ಪಂಚಮಸಾಲಿ ಇದುವರೆಗೆ ಎಲ್ಲಿಯೂ ಸಹ ಯಾವುದರಲ್ಲಿಯೂ ಬೇಡಿಕೆಯನ್ನು ಇಟ್ಟಿಲ್ಲ ಆದರೆ ಸಮಜಾದ ಮಕ್ಕಳ ಉತ್ತಮ ಶಿಕ್ಷಣ ಭವಿಷ್ಯತ್ತಿಗಾಗಿ ನಮ್ಮ ಹಕ್ಕೋತ್ತಾಯವನ್ನು ಕೇಳಿ ಸರ್ಕಾರಕ್ಕೆ ಆಗ್ರಹಿಸಿ ಮಾ.10 ರಂದು ಕಲಬುರಗಿಯಲ್ಲಿ ನಡೆಯುವ ಕಲ್ಯಾಣ ಕರ್ನಾಟಕ ಸಮಾವೇಶದಲ್ಲಿ ಮೀಸಲಾತಿ ಕೂಗನ್ನು ಮೊಳಗಿಸಲಾಗುವುದು ಎಂದರು.
ಪಂಚಮಸಾಲಿ ಜಿಲ್ಲಾಧ್ಯಕ್ಷರಾದ ಮಲ್ಲನಗೌಡ ಆರಲಗಡ್ಡಿ, ಸಿದ್ದನಗೌಡ ಬಿರಾದಾರ್, ಬಿ.ಬಿ. ಬಿರಾದಾರ್, ಮೋಹನ ಪಾಟೀಲ್, ಚಂದ್ರಶೇಖರ ಹೋಕ್ರಾಣಿ, ಗುಂಡಪ್ಪ ನಗನೂರು, ಶಿವಣ್ಣ ಸಾತ್ಯಾಳ, ಗುರಣ್ಣ ಧನ್ನೂರ,ಅಶೋಕ ವಾಲಿ, ಸಂಗಮೇಶ ಬಿರಾದಾರ, ಬಸಣ್ಣ ಧನ್ನೂರ, ಶಿವಶಂಕರ ಧನ್ನೂರ, ಚನ್ನಬಸವ ಧನ್ನೂರ ಇತರರಿದ್ದರು.