ಸಾರಾಂಶ
ಹುಬ್ಬಳ್ಳಿ: ಬಿಜೆಪಿ ಸರ್ಕಾರದಲ್ಲಿ ಜಯಮೃತ್ಯುಂಜಯ ಶ್ರೀಗಳು ಡೀಲ್ ಮಾಡಿಕೊಂಡೇ 2ಡಿ, 2ಸಿ ಮೀಸಲಾತಿ ಒಪ್ಪಿಕೊಂಡಿದ್ದರು. ದೊಡ್ಡ ಡೀಲ್ ಆಗಿದೆ. ಈ ಬಗ್ಗೆ ಸಮಾಜದ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೊಸ ಬಾಂಬ್ ಸಿಡಿಸಿದರು.
ಪಂಚಮಸಾಲಿ ಸಮಾಜದ ಮುಖಂಡರೊಂದಿಗೆ ಶ್ರೀಗಳ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಡೀಲ್ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದಿದೆ. ಎಷ್ಟಕ್ಕೆ ಡೀಲ್ ಆಯಿತು. ಯಾರ್‍ಯಾರು ಡೀಲ್ ಮಾಡಿದರು ಎಂಬುದೆಲ್ಲವೂ ಗೊತ್ತು. ಈ ಬಗ್ಗೆ ಸಾಕ್ಷಿಗಳಿವೆ. ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದರು.ತಾವೇ ಚಪ್ಪಲಿ, ಕಲ್ಲು ತೂರಿಕೊಂಡರು
ಬೆಳಗಾವಿಯಲ್ಲಿ ಅಧಿವೇಶನದ ವೇಳೆ ಗಲಾಟೆ ಮಾಡಬೇಕೆಂದೇ ಸ್ವಾಮೀಜಿ ಹೋರಾಟ ಮಾಡಿದ್ದರು. ಸ್ವಾಮೀಜಿ ಹಾಗೂ ಸ್ವಯಂ ಘೋಷಿತ ನಾಯಕ (ಯತ್ನಾಳ) ಗಲಾಟೆ ಮಾಡಿಸಿದರು. ತಾವೇ ಚಪ್ಪಲಿ ಹಾಗೂ ಕಲ್ಲು ತೂರಾಟ ನಡೆಸಿ ಗದ್ದಲಕ್ಕೆ ಕಾರಣರಾದರು ಎಂದು ಕಿಡಿಕಾರಿದರು.ಮುಂದಿನ ಚುನಾವಣೆ ತಯಾರಿ:
ಸ್ವಾಮೀಜಿಗಳಿಗೆ ಖಾವಿ ಬೇಡವಾಗಿದೆ, ಖಾದಿ ಬೇಕಾಗಿದೆ. ಬರುವ ದಿನಗಳಲ್ಲಿ ಯತ್ನಾಳ್ ಜತೆ ಸೇರಿ ಲೋಕಸಭೆ ಚುನಾವಣೆಗೆ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ, ಸ್ವಾಮೀಜಿಗಳು ಅವರ ಬೆನ್ನು ಬಿದ್ದಿದ್ದಾರೆ ಎಂದು ಆರೋಪಿಸಿದ್ದಾರೆ.ಇಂತಹ ಸ್ವಾಮೀಜಿ ನಮ್ಮ ಸಮಾಜಕ್ಕೆ ಬೇಕಾ? ಎಂಬುದರ ಬಗ್ಗೆಯೂ ಸಮಾಜದ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಸ್ವಾಮೀಜಿ ತಮ್ಮ ನಡೆಯನ್ನು ಬದಲಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ತಾಕತ್ ಇದ್ದರೆ ರಾಜೀನಾಮೆ ನೀಡಲಿಯತ್ನಾಳ್ ಎಲ್ಲರಿಗೂ ಹಂದಿ, ನಾಯಿ, ನರಿ ಅಂತ ಪದ ಬಳಕೆ ಮಾಡ್ತಾರೆ. ಇಂತಹ ಸಂಸ್ಕೃತಿ ಕಾರಣಕ್ಕೆ ಅವರ ಪಕ್ಷದವರು ಉಚ್ಚಾಟನೆ ಮಾಡಿದ್ದಾರೆ. ಯತ್ನಾಳ್ ಸ್ವಯಂಘೋಷಿತ ನಾಯಕ, ನಾನೇ ಸಿಎಂ ಎಂದೆಲ್ಲ ಹೇಳಿಕೊಳ್ಳುತ್ತಾರೆ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಆದರೆ, ಗುರುಗಳೂ ಅದೇ ರೀತಿ ನಡೆಯುತ್ತಿದ್ದಾರೆ. ವೈಯಕ್ತಿಕವಾಗಿ ಬಿಂಬಿಸುವ ಕೆಲಸ ಗುರುಗಳಿಂದ ನಡೆಯುತ್ತಿದೆ. ಯತ್ನಾಳ್ ಮಾತೆತ್ತಿದರೆ ತಾಕತ್, ದಮ್ಮು ಬಗ್ಗೆ ಮಾತನಾಡುತ್ತಾರೆ. ತಕ್ಷಣ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿ, ಬಳಿಕ ಚುನಾವಣೆಗೆ ನಿಲ್ಲಲಿ. ಆಗ ಜನರೇ ಇವರ ಹಣೆಬರಹ ಬರೆಯುತ್ತಾರೆ ಎಂದು ಸವಾಲೆಸೆದರು.