ಸಾರಾಂಶ
- ಚುನಾವಣಾ ಸಾಮಾನ್ಯ ವೀಕ್ಷಕ ಎಂ.ಲಶ್ಮಿ, ಜಿಲ್ಲಾ ಚುನಾವಣಾಧಿಕಾರಿ ಡಾ.ವೆಂಕಟೇಶ್ ಉಪಸ್ಥಿತಿ
- - - ಕನ್ನಡಪ್ರಭ ವಾರ್ತೆ, ದಾವಣಗೆರೆಲೋಕಸಭಾ ಚುನಾವಣೆ ನಡೆಯುತ್ತಿದ್ದು, ದಾವಣಗೆರೆ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಯಲಿದೆ. ಮತಗಟ್ಟೆ ಸಿಬ್ಬಂದಿಗೆ ಎರಡನೇ ಹಂತದ ತರಬೇತಿಗೆ ಹಾಜರಾಗಲು ಚುನಾವಣಾ ಸಾಮಾನ್ಯ ವೀಕ್ಷಕರಾದ ಎಂ.ಲಶ್ಮಿ ಸಮ್ಮುಖ ಶನಿವಾರ ಎರಡನೇ ರ‍್ಯಾಂಡಮೈಜೇಷನ್ ಅನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಕೈಗೊಂಡರು.
ದಾವಣಗೆರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ 1693 ಮತಗಟ್ಟೆಗಳು ಸೇರಿದಂತೆ ವಿಜಯನಗರ ಜಿಲ್ಲೆ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ 253 ಮತಗಟ್ಟೆಗಳು ಸೇರಿ 1946 ಮತಗಟ್ಟೆಗಳು ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರಲಿವೆ.ಈಗಾಗಲೇ ಮತಗಟ್ಟೆಮಟ್ಟದ ಅಧ್ಯಕ್ಷಾಧಿಕಾರಿ ಹಾಗೂ ಸಹಾಯಕ ಅಧ್ಯಕ್ಷಾಧಿಕಾರಿ ಅವರಿಗೆ ಆಯಾ ತಾಲೂಕಿನಲ್ಲಿ ಮೊದಲ ಹಂತದ ತರಬೇತಿಯನ್ನು ಏ.8ರಂದು ನೀಡಲಾಗಿದೆ. ಎರಡನೇ ಹಂತದ ತರಬೇತಿಗೆ ಮತಗಟ್ಟೆ ಅಧ್ಯಕ್ಷಾಧಿಕಾರಿ, ಸಹಾಯಕ ಅಧ್ಯಕ್ಷಾಧಿಕಾರಿ, ಮತಗಟ್ಟೆ ಸಿಬ್ಬಂದಿಯನ್ನು ವಿಧಾನಸಭಾ ಕ್ಷೇತ್ರವಾರು ಆಯ್ಕೆ ಮಾಡುವ ವಿಧಾನವೇ ಎರಡನೇ ಹಂತದ ರ್ಯಾಂಡಮೇಜೇಷನ್ ಆಗಿದೆ.
ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ ಸಹಾಯಕ ಅಧ್ಯಕ್ಷಾಧಿಕಾರಿಗಳನ್ನು ಒಂದು ವಿಧಾನಸಭಾ ಕ್ಷೇತ್ರದಿಂದ ಜಿಲ್ಲೆಯೊಳಗೆ ಇನ್ನೊಂದು ವಿಧಾನಸಭಾ ಕ್ಷೇತ್ರಕ್ಕೆ ನೇಮಕ ಮಾಡಲಾಗುತ್ತದೆ. ಎರಡನೇ ಹಂತದ ತರಬೇತಿಗೆ ನೇಮಕ ಮಾಡಲಾದ ವಿಧಾನಸಭಾ ಕ್ಷೇತ್ರಕ್ಕೆ ತೆರಳಿ ತಂಡದೊಂದಿಗೆ ತರಬೇತಿ ಪಡೆಯಬೇಕಾಗುತ್ತದೆ.ಏ.30ರಂದು ಎರಡನೇ ಹಂತದ ತರಬೇತಿ:
ಎರಡನೇ ಹಂತದ ರ‍್ಯಾಂಡಮೈಜೇಷನ್ ನಡೆಸಲಾಗಿದ್ದು, ಎಲ್ಲ ಮತಗಟ್ಟೆ ಸಿಬ್ಬಂದಿಗೆ ಏ.30ರಂದು ಬೆಳಗ್ಗೆ 10 ಗಂಟೆಯಿಂದ ತರಬೇತಿ ಆಯೋಜಿಸಲಾಗಿದೆ. ಈ ತರಬೇತಿಗೆ ಒಂದು ತಾಲೂಕಿನಿಂದ ನೇಮಕವಾದ ತಾಲೂಕಿಗೆ ತೆರಳಲು ಸಿಬ್ಬಂದಿಗೆ ಆಯಾ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರದ ಬಳಿಯಿಂದ ಬೆಳಗ್ಗೆ 6 ಗಂಟೆಯಿಂದ ವಾಹನದ ವ್ಯವಸ್ಥೆ ಮಾಡಲಾಗಿದೆ. ನೇಮಕವಾದ ಎಲ್ಲ ಅಧಿಕಾರಿ, ಸಿಬ್ಬಂದಿ ಕಡ್ಡಾಯವಾಗಿ ತರಬೇತಿಯಲ್ಲಿ ಭಾಗವಹಿಸಬೇಕು.ಸಖಿ, ಯುವ, ವಿಕಲಚೇತನರ ಮತಗಟ್ಟೆ:
ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳೆಯರಿಂದಲೇ ನಿರ್ವಹಿಸಲ್ಪಡುವ 5 ಸಖಿ ಮತಗಟ್ಟೆಗಳನ್ನು ಮತ್ತು ಪ್ರತಿ ಕ್ಷೇತ್ರದಲ್ಲಿ ತಲಾ 1ರಂತೆ ಯುವ, ವಿಶೇಷಚೇತನರ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಇಲ್ಲಿ ನಿರ್ವಹಿಸುವ ಸಿಬ್ಬಂದಿ ನೇಮಕಾತಿ ರ್ಯಾಂಡಮೇಜೇಷನ್ ನೆರವೇರಿಸಲಾಯಿತು.ವಿಧಾನಸಭಾ ಕ್ಷೇತ್ರವಾರು ನೇಮಕವಾಗಿರುವ ಅಧಿಕಾರಿ, ಸಿಬ್ಬಂದಿ:
ಜಗಳೂರು ಕ್ಷೇತ್ರಕ್ಕೆ ಮತಗಟ್ಟೆ ಅಧ್ಯಕ್ಷಾಧಿಕಾರಿ, ಸಹಾಯಕ ಅಧ್ಯಕ್ಷಾಧಿಕಾರಿ, ಮತದಾನ ಸಿಬ್ಬಂದಿ ಸೇರಿ 1212, ಹರಿಹರ 1048, ದಾವಣಗೆರೆ ಉತ್ತರ 1128, ದಕ್ಷಿಣ 996, ಮಾಯಕೊಂಡ 1104, ಚನ್ನಗಿರಿ 1172 ಹಾಗೂ ಹೊನ್ನಾಳಿ ವಿಧಾನಸಭಾ ಕ್ಷೇತ್ರಕ್ಕೆ 1124 ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿ ನೇಮಕ ಮಾಡಲಾಗಿದೆ.ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್ ಉಪಸ್ಥಿತರಿದ್ದರು.
- - - -20ಕೆಡಿವಿಜಿ37ಃ:ದಾವಣಗೆರೆಯಲ್ಲಿ ಎರಡನೇ ರ‍್ಯಾಂಡಮೈಜೇಷನ್ ಅನ್ನು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಕೈಗೊಂಡರು.