ಸಾರಾಂಶ
ಜಾತ್ರೆಗೆ ವಿಶೇಷ ಅನುದಾನ ಬಿಡುಗಡೆಯ ಕುರಿತು ಮಾಹಿತಿ ಹಕ್ಕಿನ ಮೂಲಕ ನಗರಸಭೆಯ ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿದ್ದಾರೆ. ನೀತಿ ಸಂಹಿತೆ ಮುಗಿದ ಬಳಿಕ ಆ ಅಧಿಕಾರಿಯ ಮೇಲೆ ಆಡಳಿತ ಮಂಡಳಿ ಕ್ರಮ ಕೈಗೊಳ್ಳುತ್ತದೆ ಎಂದು ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ ತಿಳಿಸಿದರು.
ಶಿರಸಿ: ಇಲ್ಲಿನ ನಗರಸಭೆಗೆ ₹೩.೫೦ ಕೋಟಿ ಅನುದಾನ ಮಂಜೂರಿ ಮಾಡಿಸುವಲ್ಲಿ ಶಾಸಕ ಭೀಮಣ್ಣ ನಾಯ್ಕ ಅವರ ವಿಶೇಷ ಪ್ರಯತ್ನ ಸಫಲವಾಗಿದೆ ಎಂದು ನಗರಸಭೆ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಪ್ರದೀಪ ಶೆಟ್ಟಿ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಂಜೂರಿಯ ದಾಖಲೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ರಾಜ್ಯ ಪ್ರಸಿದ್ಧ ಮಾರಿಕಾಂಬಾ ದೇವಿ ಜಾತ್ರೆಯ ಸಂದರ್ಭದಲ್ಲಿ ಶಿರಸಿ ನಗರಸಭೆಯ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ₹೫ ಕೋಟಿ ವಿಶೇಷ ಅನುದಾನ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಗರಾಭಿವೃದ್ಧಿ ಸಚಿವರ ಬಳಿ ತೆರಳಿ ಶಾಸಕ ಭೀಮಣ್ಣ ನಾಯ್ಕ ವಿನಂತಿಸಿದ್ದಾರೆ. ಸಚಿವರೂ ಸಕಾರಾತ್ಮಕವಾಗಿ ಸ್ಪಂದಿಸಿ, ₹೩.೫೦ ಕೋಟಿ ಮಂಜೂರಿ ಮಾಡಿದ್ದಾರೆ. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ್ದ ಹಿತೇಂದ್ರ ನಾಯ್ಕ ಮತ್ತು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಜಾತ್ರೆಗೆ ಅನುದಾನ ತರಲು ಶಾಸಕರು ವಿಫಲರಾಗಿದ್ದಾರೆ ಎಂದು ಹೇಳಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾಕ್ಕೆ ಬಂದ ಮೇಲೆ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದ ಭೀಮಣ್ಣ ನಾಯ್ಕ ಅವರು ಜಾತ್ರೆ ಪ್ರಯುಕ್ತ ₹೫ ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲೆಯ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಮೂಲಕ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ₹೫ ಕೋಟಿ ಬಿಡುಗಡೆಗೊಳಿಸುವಂತೆ ಮನವಿ ಸಲ್ಲಿಸಲಾಗಿತ್ತು. ಶಾಸಕರ ಬೇಡಿಕೆಗೆ ಸ್ಪಂದಿಸಿದ್ದಾರೆ ಎಂದರು.ಮಾಹಿತಿ ಹಕ್ಕಿನ ಮೂಲಕ ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿದ್ದಾರೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಪ್ರದೀಪ ಶೆಟ್ಟಿ, ಜಾತ್ರೆಗೆ ವಿಶೇಷ ಅನುದಾನ ಬಿಡುಗಡೆಯ ಕುರಿತು ಮಾಹಿತಿ ಹಕ್ಕಿನ ಮೂಲಕ ನಗರಸಭೆಯ ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿದ್ದಾರೆ. ನೀತಿ ಸಂಹಿತೆ ಮುಗಿದ ಬಳಿಕ ಆ ಅಧಿಕಾರಿಯ ಮೇಲೆ ಆಡಳಿತ ಮಂಡಳಿ ಕ್ರಮ ಕೈಗೊಳ್ಳುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯರಾದ ಖಾದರ್ ಆನವಟ್ಟಿ, ವನಿತಾ ಶೆಟ್ಟಿ, ರೂಬೆಕಾ, ದಯಾನಂದ ನಾಯ್ಕ, ಫ್ರಾನ್ಸಿಸ್ ನರೋನಾ, ಶಮಿನಾ ಬಾನು ಶಿಕಾರಿಪುರ ಇದ್ದರು.