ಸಾರಾಂಶ
ವರುಣಾರ್ಭಟಕ್ಕೆ ಬೆಳೆದು ನಿಂತಿದ್ದ ಕಟಾವು ಹಂತದ ಭತ್ತದ ಬೆಳೆ ಸಂಪೂರ್ಣ ನೀರುಪಾಲಾದ ಘಟನೆ ತಾಲೂಕಿನ ಬೆಳ್ಳಿಬಟ್ಟಲು ಗ್ರಾಮದಲ್ಲಿ ಭಾನುವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಪಾವಗಡ
ವರುಣಾರ್ಭಟಕ್ಕೆ ಬೆಳೆದು ನಿಂತಿದ್ದ ಕಟಾವು ಹಂತದ ಭತ್ತದ ಬೆಳೆ ಸಂಪೂರ್ಣ ನೀರುಪಾಲಾದ ಘಟನೆ ತಾಲೂಕಿನ ಬೆಳ್ಳಿಬಟ್ಟಲು ಗ್ರಾಮದಲ್ಲಿ ಭಾನುವಾರ ನಡೆದಿದೆ.ಬೆಳ್ಳಿಬಟ್ಟಲು ಗ್ರಾಮದ ರತ್ನಮ್ಮ ಸಂಜೀವರೆಡ್ಡಿ ನೀರಾವರಿಯ ಕೃಷಿ ಜಮೀನಿನಲ್ಲಿ ಮೂರು ಎಕರೆಯಲ್ಲಿ ಭತ್ತ ನಾಟಿ ಮಾಡಿದ್ದರು. ಬೆಳೆ ಇನ್ನೆನು ಕಟಾವು ಮಾಡುವ ಹಂತದಲ್ಲಿರುವಾಗಲೇ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಗದ್ದೆಗೆ ನೀರು ನುಗ್ಗಿ ಭತ್ತದ ಬೆಳೆ ಸಂರ್ಪೂಣ ನಾಶವಾಗಿದೆ. ಇದರಿಂದ ಸುಮಾರು 50 ಸಾವಿರ ರು.ಕ್ಕೂ ಹೆಚ್ಚು ನಷ್ಟವಾಗಿದೆ. ಮುಖಂಡ ಚಂದ್ರಶೇಖರ ರೆಡ್ಡಿ ಮಾತನಾಡಿ, ಅತಿವೃಷ್ಟಿಯಿಂದ ಭತ್ತದ ಬೆಳೆ ನಷ್ಟಕ್ಕಿಡಾಗಿದೆ. ಬೆಳೆ ನಷ್ಟ ವರದಿ ಪಡೆದು ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಮಳೆಯಿಂದ ದೊಡ್ಡದೊಡ್ಡ ಹಳ್ಳಗಳು ತುಂಬಿ ಹರಿಯುತ್ತಿದ್ದು, ಕೆರೆಕುಂಟೆಗಳಿಗೆ ಹೆಚ್ಚು ನೀರು ಸಂಗ್ರಹವಾಗಿದೆ. ತಾಲೂಕಿನ ಕಡಮಲಕುಂಟೆ ಕೆರೆ ಕೋಡಿ ಬಿದ್ದಿದೆ. ತಾಲೂಕಿನ ಬೆಳ್ಳಿಬಟ್ಟಲು ಗ್ರಾಮದ ರಾಮದಾಸಪ್ಪ ಮನೆ ಸಂಪೂರ್ಣ ಕುಸಿತವಾಗಿದ್ದು ಇನ್ನೂ ಚೆನ್ನಮ್ಮರೆಡ್ಡಿಹಳ್ಳಿ, ನೇರಳೆಕುಂಟೆ ಹಾಗೂ ಸಿದ್ದಾಪುರ ಗ್ರಾಮದಲ್ಲಿ ತಲಾ ಒಂದು ಹೆಂಚಿನ ಮನೆಗಳು ನೆಲಸಮವಾಗಿ ಜನಜೀವನ ಆತಂತ್ರವಾಗಿದೆ.ವೆಂಕಟಾಪುರ, ಭೊಮ್ಮನಹಳ್ಳಿ ಸಿದ್ದಾಪುರ ಚಿಕ್ಕಜಾಲೋಡು ಹಾಗೂ ತಾಲೂಕಿನ ನಿಡಗಲ್ ಹೋಬಳಿ ವ್ಯಾಪ್ತಿಯ ದೊಡ್ಡದೊಡ್ಡ ಹಳ್ಳಗಳು ತುಂಬಿ ಹರಿಯುತ್ತಿವೆ. ಸತತ ಮಳೆಯಿಂದ ಕಟಾವು ಮಾಡಿದ ಶೇಂಗಾ ಬೆಳೆ ಮಳೆಗೆ ನೆನೆದು ಕೊಳೆಯುತ್ತಿದೆ.