ಸಾರಾಂಶ
ನಾವು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರ ಪರ
ಆಹಾರ, ಉಡುಪು ಎಲ್ಲರ ವೈಯಕ್ತಿಕ ಹಕ್ಕುಕನ್ನಡಪ್ರಭ ವಾರ್ತೆ ಹುಬ್ಬಳ್ಳಿಬಿಜೆಪಿಯವರು ಗೋಡ್ಸೆ ಅನುಯಾಯಿಗಳು. ಇಂಥವರಿಂದ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ವಿಪ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರ ಪರವಾಗಿರುವವರು. ಬಿಜೆಪಿಯವರಿಂದ ನಾವು ಕಲಿಬೇಕಾಗಿಲ್ಲ. ನಾವು ಟಿಪ್ಪು ಸುಲ್ತಾನ್‌ರ ಭಾಗವಲ್ಲ. ನಮಗೆ ಟಿಪ್ಪು ಸುಲ್ತಾನ್ ಪರ ಎನ್ನುವವರು ಬ್ರಿಟಿಷರ ಬೂಟು ನೆಕ್ಕುವವರು ಎಂದು ಬಿಜೆಪಿಯ ವಿರುದ್ಧ ಹರಿಹಾಯ್ದರು.ಹಿಜಾಬ್ ಮತ್ತು ಬುರ್ಖಾದ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಹಿಜಾಬ್ ಎನ್ನುವುದು ತಲೆ ಮತ್ತು ಎದೆ ಮುಚ್ಚಿಕೊಳ್ಳಲು ಬಳಸಲಾಗುತ್ತದೆ. ಇದು ಈಗಾಗಲೇ ಕೆಲವು ಶಾಲಾ ಕಾಲೇಜುಗಳಲ್ಲಿದೆ. ಬುರ್ಖಾ ಎನ್ನುವುದು ಪೂರ್ಣ ದೇಹ ಮುಚ್ಚಿಕೊಳ್ಳುವುದು. ಶಾಲಾ ಕಾಂಪೌಂಡ್ ವರೆಗೂ ಬುರ್ಖಾ ಇರಲಿ. ಆ ನಂತರ ಹಿಜಾಬ್ ಇರಬೇಕು ಎನ್ನುವುದು ನನ್ನ ಕಲ್ಪನೆ ಎಂದರು.
ಬಿಜೆಪಿಯಿಂದ ಸುಳ್ಳಿನ ಪ್ರಚಾರ:ಆಹಾರ, ಉಡುಪು ಎಲ್ಲರ ವೈಯಕ್ತಿಕ ಹಕ್ಕಾಗಿದೆ. ಬಿಜೆಪಿಗೆ ರೈತರು, ಮಹಿಳೆಯರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಹೀಗಾಗೇ ಇಂತಹ ವಿಚಾರ ಚರ್ಚಿಸುತ್ತಿದ್ದಾರೆ. ಕಾಂಗ್ರೆಸ್ ಸಂವಿಧಾನ ರಕ್ಷಣೆ ಮಾಡಲು ಶ್ರಮಿಸುತ್ತದೆ. ನಮ್ಮದು ಜಾತ್ಯತೀತ ರಾಷ್ಟ್ರ. ಎಲ್ಲ ಜಾತಿ-ಧರ್ಮಗಳನ್ನು ಕಾಪಾಡಬೇಕು. ಕಾಂಗ್ರೆಸ್ ಎಂದಿಗೂ ತುಷ್ಟೀಕರಣ ಮಾಡುತ್ತಿಲ್ಲ. ಬಹು ಸಂಖ್ಯಾತರ ತುಷ್ಟೀಕರಣ ಮಾಡುತ್ತಿರುವುದು ಬಿಜೆಪಿ. ಇವರು ಹಿಂಸೆ, ಸುಳ್ಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದರು.
ಅಲ್ಪಸಂಖ್ಯಾತರು, ಮೀಸಲಾತಿ ವಿಚಾರದಲ್ಲಿ ಇವರದ್ದು ವಿರೋಧ. ನಾಗಪುರದಲ್ಲಿನ ಇವರ ಸೂತ್ರಧಾರರು ಜಾತಿ ಗಣತಿ ವಿರೋಧಿಗಳು ಎಂದು ಪರೋಕ್ಷವಾಗಿ ಆರ್‌ಎಸ್‌ಎಸ್ ನಾಯಕರ ವಿರುದ್ಧ ಹರಿಹಾಯ್ದ ಹರಿಪ್ರಸಾದ್, ಇವರಿಂದ ನಾವು ಕಲಿಯಬೇಕಾಗಿಲ್ಲ ಎಂದರು.ನಾನೂ ಆಕಾಂಕ್ಷಿ:
ನಾನೂ ಲೋಕಸಭೆ ಚುನಾವಣೆಗೆ ಆಕಾಂಕ್ಷಿಯಾಗಿದ್ದೇನೆ. ಈ ಕುರಿತು ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ಕಾಯಕ ಸಮಾಜದ ಪರ ಹೋರಾಟ ನಮ್ಮೆಲ್ಲರ ಇಚ್ಛೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆ ಬಗೆಹರಿಯಬೇಕು ಎಂಬುದು ನಮ್ಮ ಉದ್ದೇಶ ಎಂದರು.ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಹೆಸರು ಬಂದಿರುವುದು ಸೂಕ್ತ. ಈಡಿಗ ಸಮಾವೇಶದಿಂದ ನಾನು ದೂರ ಇದ್ದೆ. ಧ್ವನಿ ಇಲ್ಲದವರಿಗೆ ಧ್ವನಿ ಕೊಡಬೇಕು. ರಾಜಕಾರಣದಲ್ಲಿ ಯಾರನ್ನೂ ತುಳಿಯುವುದಕ್ಕೆ ಆಗಲ್ಲ. ತುಳಿತೀನಿ ಎಂದಿದ್ದರೆ ಅವರು ಭ್ರಮನಿರಸದಲ್ಲಿ ಇರುತ್ತಾರೆ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಪ್ರಸಾದ್ ಹರಿಹಾಯ್ದರು.