ವಿಜಯನಗರ ಜಿಲ್ಲೆಯಲ್ಲಿ ಆಲಿಕಲ್ಲು ಮಳೆ, ಸಿಡಿಲಿಗೆ 3 ಆಕಳು ಬಲಿ

| Published : Apr 19 2024, 01:00 AM IST

ವಿಜಯನಗರ ಜಿಲ್ಲೆಯಲ್ಲಿ ಆಲಿಕಲ್ಲು ಮಳೆ, ಸಿಡಿಲಿಗೆ 3 ಆಕಳು ಬಲಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯನಗರ ಜಿಲ್ಲೆಯಲ್ಲಿ ಗುರುವಾರ ಆಲಿಕಲ್ಲು ಮಳೆ ಸುರಿದಿದ್ದು, ಸಿಡಿಲಿಗೆ ಮೂರು ಆಕಳಗಳು ಬಲಿಯಾಗಿವೆ. ಇನ್ನೂ ಹೂವಿನಹಡಗಲಿಯ ಹಗರನೂರು ಗ್ರಾಮದ ತುಂಬಿನೆಪ್ಪ ದೇವಾಲಯದ ಗರುಡಗಂಬಕ್ಕೆ ಸಿಡಿಲು ಬಡಿದು ಹಾನಿಯಾಗಿದೆ.

ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಗುರುವಾರ ಆಲಿಕಲ್ಲು ಮಳೆ ಸುರಿದಿದ್ದು, ಸಿಡಿಲಿಗೆ ಮೂರು ಆಕಳಗಳು ಬಲಿಯಾಗಿವೆ. ಇನ್ನೂ ಹೂವಿನಹಡಗಲಿಯ ಹಗರನೂರು ಗ್ರಾಮದ ತುಂಬಿನೆಪ್ಪ ದೇವಾಲಯದ ಗರುಡಗಂಬಕ್ಕೆ ಸಿಡಿಲು ಬಡಿದು ಹಾನಿಯಾಗಿದೆ.

ಜಿಲ್ಲೆಯ ಹೊಸಪೇಟೆ ತಾಲೂಕಿನ ಕಾಕುಬಾಳು ಗ್ರಾಮದ ಸೇರಿದಂತೆ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಈ ಗ್ರಾಮದಲ್ಲಿ ಆಲಿಕಲ್ಲು ಮಳೆಯಾಗಿದ್ದು, ಒಂದು ತಾಸು ರಭಸವಾಗಿ ಮಳೆ ಸುರಿದಿದೆ. ಗ್ರಾಮದ ಗೂಡಂಗಡಿಗಳು ಭಾರೀ ಗಾಳಿಗೆ ಹಾರಿ ಹೋಗಿವೆ. ಇನ್ನೂ ಮರಿಯಮ್ಮನಹಳ್ಳಿ, ದೇವಲಾಪುರ ಭಾಗದಲ್ಲೂ ಮಳೆ ಬಿದ್ದಿದೆ.

ಹರಪನಹಳ್ಳಿಯಲ್ಲಿ ಸಿಡಿಲಿಗೆ ಹಸು ಸಾವು, ಧರೆಗುರುಳಿದ ಮರಗಳು:

ಹರಪನಹಳ್ಳಿ ಪಟ್ಟಣ ಸೇರಿದಂತೆ ವಿವಿಧೆಡೆ ಗುರುವಾರ ಮಧ್ಯಾಹ್ನ ಗುಡುಗು, ಮಿಂಚಿನಿಂದ ಕೂಡಿದ ಸಾಧಾರಣ ಮಳೆಯಾಯಿತು.ತಾಲೂಕಿನ ಕೊಮಾರನಹಳ್ಳಿ ಗ್ರಾಮದಲ್ಲಿ ಚಂದ್ರಪ್ಪ ಎಂಬುವವರಿಗೆ ಸೇರಿದ ಹಸು ಸಿಡಿಲಿಗೆ ಬಲಿಯಾಗಿದೆ.ಮಾಡ್ಲಗೇರಿ ತಾಂಡದಲ್ಲಿ ಮೋತಿನಾಯ್ಕ ಹಾಗೂ ಕಲಿಭೀಮನಾಯ್ಕ ಅವರ ಮನೆ ಮೇಲ್ಚಾವಣೆ ಗಾಳಿಗೆ ಹಾರಿ ಹೋಗಿವೆ.

ಕೋಡಿಹಳ್ಳಿ ಸಮೀಪ ವಿದ್ಯುತ್‌ ಕಂಬ ಉರುಳಿದೆ. ಬಾಗಳಿ, ಶೃಂಗಾರತೋಟ, ಚಿಕ್ಕಹಳ್ಳಿ, ಕಾಯಕದಹಳ್ಳಿ, ಕೋಡಿಹಳ್ಳಿ ಮುಂತಾದ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಯಲ್ಲಾಪುರ ಗ್ರಾಮದ ರಸ್ತೆ ಮಧ್ಯೆ ದೊಡ್ಡದಾದ ಮರ ಉರುಳಿ ಸಂಚಾರಕ್ಕೆ ಸ್ವಲ್ಪ ಹೊತ್ತು ಅಡಚಣೆ ಉಂಟಾಗಿತ್ತು.ಪಟ್ಟಣದ ತಾಯಮ್ಮನ ಹುಣಸಿಮರ, ಗ್ರಂಥಾಲಯ ಕಚೇರಿ ಬಳಿ, ತೆಗ್ಗಿನಮಠದ ಹತ್ತಿರ ರಸ್ತೆ ತುಂಬೆಲ್ಲಾ ನೀರು ಸಂಗ್ರಹವಾಗಿ ಸಾರ್ವಜನಿಕರಿಗೆ, ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ತಾಪಂ ಆವರಣದಲ್ಲಿ ಎರಡು ಮರಗಳು ಧರೆಗೆ ಉರುಳಿವೆ.ಪಟ್ಟಣದ ವಾಲ್ಮೀಕಿ ನಗರ, ಹಾಲಸ್ವಾಮಿ ಮಠದ ವೃತ್ತದ ಬಳಿ ಬೇವಿನ ಮರ ಉರುಳಿ ಬಿದ್ದಿದೆ.

ತಾಯಮ್ಮನ ಹುಣಸೇಮರದ ಬಳಿ ಅವೈಜ್ಞಾನಿಕ ಸಿಡಿ ಮಾಡಿರುವುದರಿಂದ ರಸ್ತೆಯಲ್ಲಿ ನೀರು ಸಂಗ್ರಹವಾಗಿ ಚರಂಡಿ ನೀರಿನ ಜತೆ ಸೇರಿ ಜನರಿಗೆ, ವಾಹನ ಸವಾರರಿಗೆ ತೊಂದರೆಯುಂಟಾಗುತ್ತದೆ ಎಂಬುದು ಆ ಭಾಗದ ಜನರ ಅಳಲಾಗಿದೆ.ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನತೆಗೆ ಸ್ವಲ್ಪ ತಂಪನೆಯ ಅನುಭವವಾಯಿತು.

ಸಿಡಿಲು ಬಡಿದು ತುಂಡಾಗಿ ಬಿದ್ದ ಗರುಡಗಂಬ:

ಹೂವಿನಹಡಗಲಿ ತಾಲೂಕಿನಲ್ಲಿ ವಿವಿಧ ಕಡೆಗಳಲ್ಲಿ ಭಾರಿ ಪ್ರಮಾಣದ ಮಳೆ ಗಾಳಿ ಬೀಸಿದ್ದು, ಗರುಡಗಂಬವೊಂದಕ್ಕೆ ಸಿಡಿಲು ಬಡಿದಿರುವ ಘಟನೆ ಜರುಗಿದೆ.ತಾಲೂಕಿನ ಸುಕ್ಷೇತ್ರ ಹಗರನೂರು ಗ್ರಾಮದ ಕೆರೆಯ ದಂಡೆಯಲ್ಲಿರುವ ತುಂಬಿನೆಪ್ಪ ದೇವಸ್ಥಾನದ ಮುಂಭಾಗದಲ್ಲಿದ್ದ ಗರುಡಗಂಬಕ್ಕೆ ಗುರುವಾರ ಸಂಜೆ ವೇಳೆ ಸಿಡಿಲು ಬಡಿಯಿತು. ಪರಿಣಾಮ ತುಂಡಾಗಿ ನೆಲಕ್ಕೆ ಬಿದ್ದಿದೆ. ಈ ವೇಳೆ ಭಾರಿ ಪ್ರಮಾಣದ ಮಳೆ ಗಾಳಿ ಇತ್ತು.

ಹಗರನೂರು ಗ್ರಾಮದ ಮೂರು ಮನೆಗಳ ಮೇಲ್ಛಾವಣಿಯ ತಗಡುಗಳು ಭಾರಿ ಪ್ರಮಾಣದ ಗಾಳಿಗೆ ಒಡೆದು ಹೋಗಿವೆ. ತುಂಬಿನಕೆರೆ ದೊಡ್ಡ ತಾಂಡದಲ್ಲಿಯೂ ಮನೆಗಳಿಗೆ ಹಾನಿಯಾಗಿದೆ. ಉಳಿದಂತೆ ಮಾನ್ಯರ ಮಸಲವಾಡ ಗ್ರಾಮದಲ್ಲಿ ಭಾರಿ ಪ್ರಮಾಣದ ಗಾಳಿಗೆ ರೈತರ ಜಮೀನಿನಲ್ಲಿದ್ದ ವಿದ್ಯುತ್‌ ಕಂಬಕ್ಕೆ ಹೊಂದಿಕೊಂಡಿದ್ದ ಟಿಸಿ ಕಂಬ ಮುರಿದು ಬಿದ್ದಿದೆ. ಉಳಿದಂತೆ ಕೆಲವಡೆಗಳಲ್ಲಿ ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ. ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಗಿಡ-ಮರಗಳು ಗಾಳಿ ರಭಸಕ್ಕೆ ಮುರಿದು ಬಿದ್ದಿವೆ.ತಾಲೂಕಿನ ನಾಗತಿ ಬಸಾಪುರ, ಕೋಮಾರನಹಳ್ಳಿ ತಾಂಡಾ, ಮಾನ್ಯರ ಮಸಲವಾಡ, ಹಿರೇಕೊಳಚಿ ಸೇರಿದಂತೆ ವಿವಿಧ ಕಡೆಗಳಲ್ಲಿ ಕೆಲ ಹೊತ್ತು ಮಳೆಯಾಗಿದ್ದು, ಯಾವುದೇ ಪ್ರಮಾಣದ ಪ್ರಾಣ ಹಾನಿಯಾಗಿರುವ ವರದಿಯಾಗಿಲ್ಲ.

ಹಾರಾಳ ಗ್ರಾಮದಲ್ಲಿ, ಸಿಡಿಲು ಬಡಿದು ೩ ಆಕಳು ಸಾವು:

ಗುರುವಾರ ಮಧ್ಯಾಹ್ನ ಮಳೆಯ ಆರ್ಭಟಕ್ಕೆ ಉಂಟಾದ ಗುಡುಗು ಸಿಡಿಲಿಗೆ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಹಾರಾಳ ಗ್ರಾಮದ ಅಂಬಳಿ ಪ್ರಕಾಶ್ ಎಂಬುವವರ ಜರ್ಸಿ ತಳಿಯ ೩ ಆಕಳು ಸಿಡಿಲು ಬಡಿದು ಅಸು ನೀಗಿವೆ.