ಕನಕ ಸಮುದಾಯ ಭವನ ಕಾಮಗಾರಿಗೆ ₹3 ಕೋಟಿ ಅನುದಾನ: ಶಾಸಕ ಬಿ.ಜಿ.ಗೋವಿಂದಪ್ಪ

| Published : Jun 11 2024, 01:31 AM IST

ಕನಕ ಸಮುದಾಯ ಭವನ ಕಾಮಗಾರಿಗೆ ₹3 ಕೋಟಿ ಅನುದಾನ: ಶಾಸಕ ಬಿ.ಜಿ.ಗೋವಿಂದಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸದುರ್ಗ ಪಟ್ಟಣದಲ್ಲಿ ಕನಕ ನೌಕರರ ಸಾಂಸ್ಕೃತಿಕ ಸಂಘದಿಂದ ನಿವೃತ್ತ ನೌಕರರಿಗೆ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಕನಕ ಸಮುದಾಯ ಭವನ ನಿರ್ಮಾಣಕ್ಕೆ ₹3 ಕೋಟಿ ಅನುದಾನ ನೀಡಿದ್ದು, ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.ಪಟ್ಟಣದ ಕನಕ ಶಾಲೆಯಲ್ಲಿ ಕನಕ ನೌಕರರ ಸಾಂಸ್ಕೃತಿಕ ಸಂಘದ ಕಚೇರಿ ಉದ್ಘಾಟನೆ ಹಾಗೂ ನಿವೃತ್ತ ನೌಕರರಿಗೆ ಸನ್ಮಾನಿಸಿ ಮಾತನಾಡಿ, ಕಳೆದ ಬಾರಿ ಶಾಸಕನಾಗಿದ್ದ ಸಂದರ್ಭದಲ್ಲಿ ಕನಕ ಸಮುದಾಯ ಭವನ ನಿರ್ಮಾಣಕ್ಕೆ ₹2 ಕೋಟಿ ಅನುದಾನ ನೀಡಿದ್ದೆ. ನಂತರದ ಚುನಾವಣೆಯಲ್ಲಿ ಪರಾಭವಗೊಂಡ ನಂತರ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಈಗ ಮತ್ತೇ ಅನುದಾನ ನೀಡಲಾಗಿದೆ ಎಂದರು.

ತಾಲೂಕಿನ ಎಲ್ಲಾ ಜಾತಿ, ಸಮುದಾಯಗಳ ಬೆಂಬಲ ಪಡೆದು ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿರುವೆ. ಎಲ್ಲಾ ಸಮುದಾಯಗಳಿಗೂ ನ್ಯಾಯ ಒದಗಿಸುವುದು ನನ್ನ ಜವಾಬ್ದಾರಿ ಮತ್ತು ಕರ್ತವ್ಯ ಆಗಿದೆ. ಈ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ಜಾತಿ ಸಮಾಜದ ಬೇಡಿಕೆಗೆ ಅನುಗುಣವಾಗಿ ಅನುದಾನ ನೀಡುತ್ತೇನೆ. ಎಲ್ಲಾ ಜಾತಿ, ಸಮಾಜಗಳಿಗೆ ಸಮಾನ ಆದ್ಯತೆ ನೀಡಿ ಅನುದಾನ ನೀಡುವ ಮೂಲಕ ಬೇಡಿಕೆ ಈಡೇರಿಸಲಾಗುವುದು ಎಂದರು.

ಪ್ರಸ್ತುತ ದಿನಗಳಲ್ಲಿ ರಾಜಕೀಯ ರಂಗ ತುಂಬಾ ಕಷ್ಟಕರವಾಗಿದೆ. ಈವರೆಗೂ ತಾಲೂಕಿನ ಎಲ್ಲಾ ಜಾತಿ, ಸಮುದಾಯದ ಜನರನ್ನು ಸಮಾನವಾಗಿ ಕಂಡು ರಾಜಕಾರಣ ಮಾಡಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಸಮಾಜಕ್ಕೆ ಹಾಗೂ ವೈಯಕ್ತಿಕವಾಗಿ ದಕ್ಕೆ ತರುವಂತಹ ಕೆಲಸ ಮಾಡಿಕೊಂಡಿಲ್ಲ. ರಾಜ್ಯದ ಮುಖ್ಯಮಂತ್ರಿಗಳ ಬಳಿ ನಾನಾ ಸಮಾಜದವರು ಹಲವಾರು ಬೇಡಿಕೆ ಇಡುತ್ತಾರೆ. ಅವೆಲ್ಲವನ್ನು ಅವರು ಈಡೇರಿಸಬೇಕಾಗುತ್ತದೆ. ಈ ನಡುವೆಯೂ ತಾಲೂಕಿಗೆ ಬೇಕಾದ ಅನುದಾನ ತಂದು ಅಭಿವೃದ್ಧಿ ಮಾಡುವೆ ಎಂದರು.

ಕನಕ ನೌಕರರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ವಿ.ಮಹಂತೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಶಶಿಧರ, ತಿಪ್ಪೇಶಪ್ಪ, ತಾಲೂಕು ಕುರುಬ ಸಂಘದ ಅಧ್ಯಕ್ಷ ಮಂಜುನಾಥ್, ಕಾಂಗ್ರೇಸ್ ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಆಗ್ರೋ ಶಿವಣ್ಣ, ಎಂ.ಆರ್.ಸಿ. ಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ಮತ್ತಿತರಿದ್ದರು.

ವಯೋ ನಿವೃತ್ತಿ ಹೊಂದಿದ ರಾಜಪ್ಪ, ಗುರುಸಿದ್ದಪ್ಪ, ಗೋವಿಂದರಾಜು, ಮಂಜುನಾಥ್ ಅವರಿಗೆ ಶಾಸಕರು ಸನ್ಮಾನಿಸಿದರು.