ಸಾರಾಂಶ
51ನೇಯ ಅಖಿಲ ಭಾರತೀಯ ಪ್ರಾಚ್ಯ ವಿದ್ಯಾ ಸಮ್ಮೇಳನವನ್ನು ಯೋಗಗುರು ಬಾಬಾ ರಾಮ್‌ದೇವ್ ಉದ್ಘಾಟಿಸಲಿದ್ದಾರೆ. ಪುಸ್ತಕ ಪ್ರದರ್ಶನವನ್ನು ಪರ್ಯಾಯ ಪುತ್ತಿಗೆ ಶ್ರೀಗಳು ಉದ್ಘಾಟಿಸಲಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಭಾರತೀಯ ವಿದ್ವತ್ ಪರಿಷತ್ ವತಿಯಿಂದ ಕೃಷ್ಣಮಠದ ರಾಜಾಂಗಣದಲ್ಲಿ ಅ. 24 ಇಂದಿನಿಂದ 3 ದಿನಗಳ ಕಾಲ ನಡೆಯುವ 51ನೇ ಅಖಿಲ ಭಾರತೀಯ ಪ್ರಾಚ್ಯವಿದ್ಯಾ ಸಮ್ಮೇಳನವನ್ನು ಯೋಗಗುರು ಬಾಬಾ ರಾಮ್ ದೇವ್ ಬೆಳಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನಡೆಯುವ ಬೃಹತ್ ಪುಸ್ತಕ ಪ್ರದರ್ಶನವನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ.ಭಾರತೀಯ ಜ್ಞಾನ ಪರಂಪರೆಯ ಬಗ್ಗೆ ಚಿಂತನಮಂಥನ ನಡೆಯುವ ಈ ಸಮ್ಮೇಳನದಲ್ಲಿ ದೇಶದ 16ಕ್ಕೂ ಹೆಚ್ಚು ಸಂಸ್ಕೃತ ವಿವಿಗಳ ಕುಲಪತಿಗಳು, ಪ್ರಾಚಾರ್ಯರು, ಪ್ರಾಧ್ಯಾಪಕರು ಮತ್ತು ದೇಶದಾದ್ಯಂತದಿಂದ ಬಂದಿರುವ ಸುಮಾರು 200 ಮಂದಿ ಭಾಗವಹಿಸಲಿದ್ದಾರೆ.
ಪರ್ಯಾಯ ಪುತ್ತಿಗೆ ಮಠ ಮತ್ತು ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿವಿಗಳ ಸಹಯೋಗದಲ್ಲಿ ನಡೆಯುವ ಈ ಸಮ್ಮೇಳನದ ಉದ್ಘಾಟನೆಗೆ ಮೊದಲು ಬೆಳಗ್ಗೆ 9 ಗಂಟೆಗೆ ವಿವಿಧ ಮಠಾಧೀಶರು ಭಾಗವಹಿಸುವ ಶೋಭಾಯಾತ್ರೆ ನಡೆಯಲಿದೆ.ಇಂದು ಮೊದಲ ದಿನ ಭಗವದ್ಗೀತೆಯ ಬಗ್ಗೆ, ನಾಳೆ 25ರಂದು ಭಾರತೀಯ ಭಾಷೆಗಳ ಬಗ್ಗೆ, 26ರಂದು ಭಾರತೀಯ ಜ್ಞಾನ ಪರಂಪರೆಯ ಬಗ್ಗೆ 20ಕ್ಕೂ ಹೆಚ್ಚು ಗೋಷ್ಠಿಗಳು ನಡೆಯಲಿದ್ದು, 300 ಮಂದಿ ವಿವಿಧ ವಿದ್ವಾಂಸರು ಭಾಗವಹಿಸಲಿದ್ದಾರೆ. ಗೋಷ್ಠಿಗಳಿಗೆ ರಾಜಾಂಗಣ, ಗೀತಾಮಂದಿರ, ಸಂಸ್ಕೃತ ಕಾಲೇಜು, ರಾಘವೇಂದ್ರ ಮಠಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಅಲ್ಲದೇ ಪ್ರತಿದಿನ ಬೆಳಗ್ಗೆ 6ರಿಂದ 7ರವರೆಗೆ ಬಾಬಾ ರಾಮ್ ದೇವ್ ಅವರು ರಾಜಾಂಗಣದಲ್ಲಿ ಯೋಗ ಧ್ಯಾನ ತರಗತಿಗಳನ್ನೂ ನಡೆಸಲಿದ್ದಾರೆ.ರಾತ್ರಿಯೇ ಬಾಬಾ ಆಗಮನ: ಪ್ರಾಚ್ಯ ವಿದ್ಯಾ ಸಮ್ಮೇಳನದ ಉದ್ಘಾಟನೆಗೆ ಆಗಮಿಸಿದ ಬುಧವಾರ ರಾತ್ರಿಯೇ ಯೋಗಗುರು ಬಾಬಾ ರಾಮದೇವ್ ಮತ್ತಿತರ ಗಣ್ಯರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪರ್ಯಾಯ ಮಠದ ವತಿಯಿಂದ ಭವ್ಯವಾಗಿ ಸ್ವಾಗತಿಸಲಾಯಿತು.
ಯೋಗಮಾತೆಯರು ರಾಮ್ ದೇವ್ ಅವರಿಗೆ ಆರತಿಯನ್ನು ಬೆಳಗಿದರು. ಶ್ರೀಮಠದ ಪರವಾಗಿ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಅವರು ವೇದಘೋಷಗಳ ನಡುವೆ ರಾಮ್ ದೇವ್ ಅವರಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು. ಉದ್ಯಮಿ ಶಾಂತೀಶ್ ಶೆಟ್ಟಿ, ರಾಘವೇಂದ್ರ ಭಟ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.