ಸಾರಾಂಶ
ಜೋಯಿಡಾ ತಾಲೂಕಿನ ಗಡಿ ಗ್ರಾಮಗಳ ಮೂಲಸೌಕರ್ಯಕ್ಕಾಗಿ ಒತ್ತಾಯಿಸಿ 3 ಗ್ರಾಮಗಳಿಂದ ಬೃಹತ್ ಪಾದಯಾತ್ರೆ ಹಾಗೂ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಜೋಯಿಡಾ ತಹಸೀಲ್ದಾರ್ ಕಚೇರಿ ಎದುರು ನಡೆಸಲಾಗುವುದು.
ಜೋಯಿಡಾ:
ತಾಲೂಕಿನ ಗಡಿ ಗ್ರಾಮಗಳ ಮೂಲಸೌಕರ್ಯಕ್ಕಾಗಿ ಒತ್ತಾಯಿಸಿ 3 ಗ್ರಾಮಗಳಿಂದ ಬೃಹತ್ ಪಾದಯಾತ್ರೆ ಹಾಗೂ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಜೋಯಿಡಾ ತಹಸೀಲ್ದಾರ್ ಕಚೇರಿ ಎದುರು ನಡೆಸಲಾಗುವುದೆಂದು ಕರ್ನಾಟಕ ಪ್ರಾಂತ ರೈತ ಸಂಘ ಅಧ್ಯಕ್ಷ ಪ್ರೇಮಾನಂದ ವೆಳಿಪ ತಿಳಿಸಿದರು.ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 27ರಂದು ಡಿಗ್ಗಿ ಗೌಳಾದೇವಿ, ಸಿಸೈ ಮತ್ತು ವಾಗೇಲಿ ಗ್ರಾಮಗಳಿಂದ ಏಕಕಾಲದಲ್ಲಿ ಪಾದಯಾತ್ರೆ ಆರಂಭವಾಗಲಿದೆ. ಫೆ. 28ರಂದು ಮೂರು ಗ್ರಾಮಗಳಿಂದ ಬಂದ 50 ಕಿಮೀ ಪಾದಯಾತ್ರೆ ಕಿರವತ್ತಿಯಲ್ಲಿ ಸಮಾವೇಷಗೊಂಡು ಕಾರವಾರ ಸದಾಶಿವಗಡ ರಾಜ್ಯ ಹೆದ್ದಾರಿ ಮುಖಾಂತರ ಜೋಯಿಡಾ ತಹಸೀಲ್ದಾರ್ ಕಚೇರಿಗೆ ಬಂದು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದರು.ಗಡಿ ಗ್ರಾಮವಾದ ಡಿಗ್ಗಿ ಗೋವ ರಾಜ್ಯದ ಹೆದ್ದಾರಿ 146 ಮರು ಡಾಂಬರೀಕರಣ ಮತ್ತು ಸೇತುವೆ ನಿರ್ಮಾಣ, ಕಿರುವತ್ತಿ ಮುಖಾಂತರ ತೆರಾಳಿ ಸಿಸೈ ದುಧಮಳಾ ರಸ್ತೆ ಡಾಂಬರೀಕರಣ ಮತ್ತು ಸೇತುವೆ, ಡಿಗ್ಗಿ ಮುಖ್ಯ ರಸ್ತೆಯಿಂದ ವಾಗೇಲಿ ರಸ್ತೆ ಮರು ಡಾಂಬರೀಕರಣ ಆಗಬೇಕು. ಡಿಗ್ಗಿ ಕ್ಯಾಸಲರಾಕ್ ರಸ್ತೆ ಡಾಂಬರೀಕರಣ ಮತ್ತು ಸೇತುವೆ, ಜೋಯಿಡಾದಿಂದ ವಾಗಿಲಿಗೆ ಮಧ್ಯಾಹ್ನ 1ಕ್ಕೆ ಬಸ್ ಬಿಡಬೇಕು. ಡಿಗ್ಗಿ ಗೌಳಾದೇವಿ, ಕ್ಯಾಸಲ್ ರಾಕ್ ಡಿಗ್ಗಿ ಹಾಗೂ ಕುಂಡಲ ಗ್ರಾಮಕ್ಕೆ ವಸತಿ ಬಸ್ ಬಿಡಬೇಕು. ವನ್ಯಜೀವಿ ವಿಭಾಗದಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಯಾವುದೇ ತೊಂದರೆ ನೀಡಬಾರದು ಎಂದರು.ಗಡಿ ರಸ್ತೆಗೆ ಆದ್ಯತೆ ನೀಡಿ:
ಗೋವಾ ಗಡಿ ಗ್ರಾಮಗಳಲ್ಲಿ ಸಂಪರ್ಕಕೊಂಡಿಯಾದ ಉಳವಿ ಗೊವಾಗಡಿ 146 ರಾಜ್ಯ ಹೆದ್ದಾರಿ ಆಗಿದೆ. ಬೈಕ್ ಹೋಗದಂತಹ ಪರಿಸ್ಥಿತಿ ಇದೆ. ಗಡಿ ಭಾಗದ ರಸ್ತೆ ಮಾಡುವ ಬದಲು ಉಳವಿ ಹತ್ತಿರ ರಸ್ತೆ ಮಾಡಿ ಗಡಿ ಗ್ರಾಮಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ನಾಗೋಡಾ ಗ್ರಾಪಂ ಸದಸ್ಯ ದಿಗಂಬರ ದೇಸಾಯಿ ದೂರಿದರು.ಸುದ್ದಿಗೋಷ್ಠಿಯಲ್ಲಿ ರಾಜೇಶ್ ಗಾವಡಾ, ರತ್ನಾಕರ್ ದೇಸಾಯಿ, ವಿಷ್ಣು ಡೇರೆಕರ, ಶಂಕರ ವೆಳಿಪ, ಅಶೋಕ ದೇಸಾಯಿ, ಚಂದ್ರು ಸಾವಂತ, ದೇವಿದಾಸ ಮಿರಾಶಿ, ಸುರೇಶ ಮಿರಾಸಿ, ರಾಮದಾಸ ಗಾವಡಾ, ಅನಂತ ಸಾವಂತ, ದುರ್ಗೇಶ ಗಾವಡಾ ಇದ್ದರು.