ಸನಾತನ ಧರ್ಮದ ನೈಜ ಆಚರಣೆಯಾಗಲಿ: ವಿಧುಶೇಖರ ಭಾರತಿ ಶ್ರೀಗಳು

| Published : Feb 23 2024, 01:46 AM IST

ಸಾರಾಂಶ

ಹುಬ್ಬಳ್ಳಿ ತಾಲೂಕಿನ ಪಾಲಿಕೊಪ್ಪ ಗ್ರಾಮದಲ್ಲಿ ಆರಾಧನಾ ಟ್ರಸ್ಟ್‌ನ ಅಡಿ ದೇವಾಲಯ ನಿರ್ಮಿಸಲಾಗಿದ್ದು ಶಿವಶಕ್ತಿಧಾಮ ಎಂದು ನಾಮಕರಣ ಮಾಡಲಾಗಿದೆ. ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತಿ ಶ್ರೀಗಳು ದೇಗುಲ ಲೋಕಾರ್ಪಣೆ ಮಾಡಿದರು.

ಹುಬ್ಬಳ್ಳಿ: ಶಂಕರಾಚಾರ್ಯರು ತಿಳಿಸಿದ ಸನಾತನ ಧರ್ಮದ ನೈಜ ಆಚರಣೆಗೆ ಇಂದಿನ ಜನತೆ ಆದ್ಯತೆ ನೀಡಲಿ ಎಂದು ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತಿ ಶ್ರೀಗಳು ಹೇಳಿದರು.

ಅವರು ಗುರುವಾರ ತಾಲೂಕಿನ ಪಾಲಿಕೊಪ್ಪ ಗ್ರಾಮದಲ್ಲಿ ಆರಾಧನಾ ಟ್ರಸ್ಟ್‌ನ ಅಡಿ ನಿರ್ಮಿಸಲಾಗಿರುವ ಶಿವ ದೇವಾಲಯವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಸನಾತನ ಧರ್ಮದ ಆಚರಣೆ ಕುರಿತು ಕೆಲವರು ಬೇರೆ ಬೇರೆ ರೀತಿಯಲ್ಲಿ ತಮಗೆ ಅನುಕೂಲವಾಗುವಂತೆ ಆಚರಣೆಗೆ ಮುಂದಾಗಿರುವುದು ಭಕ್ತರಿಗೆ ಗೊಂದಲವನ್ನುಂಟು ಮಾಡಿದೆ. ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಅರಿತು ಅಂದೇ ಶ್ರೀ ಶಂಕರಾಚಾರ್ಯರು ಸನಾತನ ಧರ್ಮ ಹೇಗಿರಬೇಕು ಎಂಬುದನ್ನು ತಿಳಿಸುವ, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.

ಸನಾತನ ಧರ್ಮದಲ್ಲಿ ಭಗವಂತ ಒಬ್ಬನೇ, ಆದರೆ, ಲೋಕ ಕಲ್ಯಾಣಕ್ಕಾಗಿ ಬೇರೆ ಬೇರೆ ರೂಪಗಳನ್ನು ಧರಿಸಿ ಧರೆಗೆ ಬಂದು ದುಷ್ಟರ ಸಂಹಾರ ಮಾಡಿದ್ದಾನೆ. ಯಾವುದೇ ಧರ್ಮ, ಪರಂಪರೆಗೆ ಅವಮಾನಿಸದೇ ಗೌರವಯುತವಾದ ಜೀವನ ನಡೆಯುವಂತೆ ಶಂಕರಾಚಾರ್ಯರು ಉಪದೇಶ ನೀಡಿದ್ದಾರೆ. ಆದರೆ, ಇಂದಿನ ಯುವಸಮೂಹ ಯಾವುದು ಸರಿ, ಯಾವುದು ತಪ್ಪು ಎಂಬುದರ ಕುರಿತು ಮನವರಿಕೆ ಮಾಡಿಕೊಳ್ಳದೇ ತಪ್ಪುದಾರಿಗೆ ಹೋಗುತ್ತಿರುವುದು ನೋವಿನ ಸಂಗತಿ ಎಂದರು.

ಹೂವಿನ ಹಾರವಿದ್ದಂತೆ: ಸನಾತನ ಧರ್ಮ ಎಂಬುದು ಹೂವಿನ ಹಾರವಿದ್ದಂತೆ, ಅದರಲ್ಲಿರುವ ಹೂವುಗಳೆಲ್ಲ ಬೇರೆ ಬೇರೆ ಪರಂಪರೆ, ಸಂಪ್ರದಾಯಗಳಿದ್ದಂತೆ. ಮಾಲೆಯ ಸೂತ್ರ(ದಾರ) ಶಂಕರಾಚಾರ್ಯರು ಹೇಳಿದ ಅದ್ವೈತ ಸಿದ್ಧಾಂತವಿದ್ದಂತೆ. ಒಂದು ಮಾಲೆಗೆ ಸೂತ್ರ ಎಷ್ಟು ಮುಖ್ಯವೋ ಹಾಗೆ ಸನಾತನ ಧರ್ಮದ ಆಚಾರ, ವಿಚಾರವು ಹಾಗೆಯೇ. ಪ್ರತಿಯೊಬ್ಬರೂ ಸನಾತನ ಧರ್ಮದ ನೈಜ ಆಚರಣೆ ಅರಿತುಕೊಂಡು ಬಾಳಿದರೆ ನಿಮ್ಮ ಜೀವನದಲ್ಲಿ ಸ್ವರ್ಗ ಪ್ರಾಪ್ತಿಯಾಗಲಿದೆ ಎಂದರು.

ಶಿವಶಕ್ತಿಧಾಮ: ಆರಾಧನಾ ಟ್ರಸ್ಟ್‌ನ ಅಡಿ ಉದ್ಯಮಿ ವಿಜಯ ಸಂಕೇಶ್ವರ ಹಾಗೂ ಹಲವು ದಾನಿಗಳ ಸಹಕಾರದಿಂದ ಈ ಶಿವ ಮಂದಿರ ನಿರ್ಮಾಣ ಮಾಡಿರುವುದು ಅಭಿನಂದನಾರ್ಹ. ಈ ಶಿವ ದೇವಾಲಯಕ್ಕೆ ''''''''ಶಿವಶಕ್ತಿಧಾಮ'''''''' ಎಂದು ನಾಮಕರಣಗೊಳಿಸಲಾಗಿದೆ. ಇನ್ನು ಮುಂದೆ ಈ ಸ್ಥಳ ಶೃಂಗೇರಿ ಶಾರದಾ ಪೀಠದ ಆಶ್ರಯದಲ್ಲಿ ಮುಂದುವರಿಯಲಿದ್ದು, ಪವಿತ್ರ ತೀರ್ಥಕ್ಷೇತ್ರವಾಗಿ ಹೊರಹೊಮ್ಮಲಿದೆ ಎಂದರು.

ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್‌ಮನ್‌ ಡಾ. ವಿಜಯ ಸಂಕೇಶ್ವರ ಮಾತನಾಡಿ, ಈ ಭಾಗದಲ್ಲಿ ಸುಂದರ, ಭವ್ಯವಾಗಿರುವ ದೇವಾಲಯ ನಿರ್ಮಾಣ ಮಾಡಬೇಕೆಂಬುದು ನನ್ನ ಹಲವು ವರ್ಷಗಳ ಕನಸು ಇಂದು ನನಸಾಗಿದೆ. ಶಿವ ದೇವಾಲಯ ಇನ್ನುಮುಂದೆ ಶಿವಶಕ್ತಿಧಾಮವಾಗಿ ಕಾರ್ಯನಿರ್ವಹಿಸಲಿದೆ. 6.5 ಎಕರೆ ವಿಸ್ತೀರ್ಣ ಹೊಂದಿರುವ ಈ ದೇವಾಲಯದಲ್ಲಿ ಬಲಮುರಿ ಗಣಪತಿ, ಶಿವ (ಮಲ್ಲಿಕಾರ್ಜುನ), ಪಾರ್ವತಿ, ನವಗ್ರಹ, ಕಾಲಬೈರವ, ಶನೈಶ್ಚರ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಇದೊಂದು ದೇವಸ್ಥಾನವಾಗಿರದೇ ಪವಿತ್ರ ತೀರ್ಥಕ್ಷೇತ್ರವಾಗಲಿ ಎಂಬ ಉದ್ದೇಶದಿಂದ ಇದನ್ನು ನಿರ್ಮಾಣ ಮಾಡಲಾಗಿದೆ.

ಸನಾತನ ಎನ್ನಲು ಭಯ ಪಡುತ್ತಿದ್ದೆವು: ಕಳೆದ 10 ವರ್ಷಗಳ ಹಿಂದೆ ಸನಾತನ ಧರ್ಮ ಎಂದು ಹೇಳಲು ಭಯಪಡುವ ವಾತಾವರಣವಿತ್ತು. ಆದರೆ, ಕಳೆದ 10 ವರ್ಷಗಳಿಂದ ಎಲ್ಲರೂ ನಾವು ಸನಾತನ ಧರ್ಮದವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕಾರ್ಯ ಮಾಡಿ ತೋರಿಸಿದ್ದಾರೆ. ಹಿಂದೆ ಮನೆಯಲ್ಲಿಯೇ ಯೋಗ ಮಾಡಲು ಹಿಂಜರಿಯುತ್ತಿದ್ದರು. ಆದರೆ, ಈಗ 160 ರಾಷ್ಟ್ರಗಳಲ್ಲಿ ಯೋಗ ಆಚರಣೆ ಮಾಡುವಂತಹ ವಾತಾವರಣ ನಿರ್ಮಾಣವಾಗಿದೆ. ನಾವೆಲ್ಲ ಹಿಂದೂಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಕಾಲ ಸೃಷ್ಟಿಸಿರುವುದು ಪ್ರಧಾನಿ ನರೇಂದ್ರ ಮೋದಿ ಎಂದರು.

ಈ ಸಂದರ್ಭದಲ್ಲಿ ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ, ಲಲಿತಾ ಸಂಕೇಶ್ವರ, ನಿರ್ದೇಶಕಿ ವಾಣಿ ಸಂಕೇಶ್ವರ, ವಿಜಯಾನಂದ ಟ್ರಾವೆಲ್ಸ್ ಎಂ.ಡಿ. ಶಿವ ಸಂಕೇಶ್ವರ, ವಿಪ ಸದಸ್ಯ ಬಿ.ಜಿ. ಪಾಟೀಲ, ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೇಮನೆ, ಶೃಂಗೇರಿ ಪೀಠದ ಆಡಳಿತಾಧಿಕಾರಿ ಪಿ.ಎ. ಮುರಳಿ, ಆಡಳಿತ ಸಲಹೆಗಾರ ಡಾ. ಗೌರಿಶಂಕರ್, ಉದ್ಯಮಿ ವಿ.ಎಸ್‌.ವಿ. ಪ್ರಸಾದ ಸೇರಿದಂತೆ ಹಲವರಿದ್ದರು.

ವಿವಿಧ ಕಾರ್ಯಕ್ರಮಗಳು: ಪಾಲಿಕೊಪ್ಪದಲ್ಲಿ ನಿರ್ಮಿಸಲಾಗಿರುವ ದೇವಾಲಯಗಳ ಸಮುಚ್ಛಯಕ್ಕೆ ''''''''ಶ್ರೀಶಿವಶಕ್ತಿ ಧಾಮ'''''''' ಎಂದು ನಾಮಕರಣ ಮಾಡಿದ ಶೃಂಗೇರಿ ಶ್ರೀಗಳು, ಶಿವಶಕ್ತಿ ಧಾಮದಲ್ಲಿ ಪ್ರತಿಷ್ಠಾಪನೆಗೊಂಡಿರುವ ಶಿವಲಿಂಗಕ್ಕೆ ಆನಂದೇಶ್ವರ, ಚಂಡಿಕೇಶ್ವರಿ ಮಾತೆಗೆ ಜ್ಞಾನಾಂಬಿಕೆ, ವಿನಾಯಕನಿಗೆ ವಿಜಯ ಗಣಪತಿ ಎಂದು ನಾಮಕರಣ ಮಾಡಿದರು. ಜತೆಗೆ ಆದಿತ್ಯಾದಿ ನವಗ್ರಹಗಳು, ಶನೈಶ್ಚರ ಸ್ವಾಮಿ ಮತ್ತು ಕ್ಷೇತ್ರಪಾಲಕ ಕಾಲಭೈರವೇಶ್ವರನ ಮೂರ್ತಿಗಳನ್ನು ಶ್ರೀಗಳು ಪ್ರಾಣಪ್ರತಿಷ್ಠಾಪನೆ ಮಾಡಿ, ಕುಂಭಾಭಿಷೇಕ ಸಹಿತ ಬ್ರಹ್ಮಕಳಸಾರೋಹಣ ಮಾಡಿದರು.