ಸಾರಾಂಶ
ಸಾಗರ ಪಟ್ಟಣದ ಬೆಳಲಮಕ್ಕಿ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಸಿರಿಧಾನ್ಯ ಮಾಲ್ಟ್ ವಿತರಣೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಸಾಗರ
ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜನಪರವಾದ. ಬಡವರು, ಕೂಲಿ ಕಾರ್ಮಿಕರು, ಜನಸಾಮಾನ್ಯರ ಬಗ್ಗೆ ಸದಾ ಯೋಜನೆ ರೂಪಿಸುವ ದೇಶದ ಮೊದಲ ಸರ್ಕಾರ ಎಂದು ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.ಪಟ್ಟಣದ ಬೆಳಲಮಕ್ಕಿ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಕ್ಕಳಿಗೆ ಸಿರಿಧಾನ್ಯ ಮಾಲ್ಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಿಗೆ ಹಾಲು, ಮೊಟ್ಟೆ, ಚಿಕ್ಕಿ ಜೊತೆಗೆ ಸಿರಿಧಾನ್ಯಗಳ ಮಾಲ್ಟ್ ನೀಡಲಾಗುತ್ತದೆ ಎಂದರು.
ಬೇಸಿಗೆ ಸಂದರ್ಭದಲ್ಲಿ ಮಕ್ಕಳ ಆರೋಗ್ಯ ಸಂರಕ್ಷಣೆಗೆ ಪೋಷಕರಿಗೆ ಸವಾಲು ಎನಿಸುತ್ತದೆ. ಇದನ್ನು ಮನಗಂಡು ರಾಜ್ಯ ಸರ್ಕಾರ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶಾಲೆಗಳಲ್ಲಿ ಪೌಷ್ಠಿಕಾಂಶವುಳ್ಳ ಆಹಾರ ನೀಡುತ್ತಿದೆ. ರಾಜ್ಯ ಸರ್ಕಾರದ ಈ ಜನಪರವಾದ ಯೋಜನೆ ದೇಶದೆಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.ಕ್ಷೇತ್ರವ್ಯಾಪ್ತಿಯಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಶಾಸಕರ ಮಾದರಿ ಶಾಲೆಯ ಅಭಿವೃದ್ಧಿಗೆ ಶಾಲಾಭಿವೃದ್ಧಿ ಸಮಿತಿ ನೀಡಿರುವ ಮನವಿಯನ್ನು ಪರಿಗಣಿಸ ಲಾಗಿದ್ದು, ಹೊಸ ಪೀಠೋಪಕರಣ, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತದೆ. ಮಕ್ಕಳು ವಿದ್ಯಾಭ್ಯಾಸದ ಜೊತೆ ಕ್ರಿಯಾಶೀಲ ಚಟುವಟಿಕೆಗಳಲ್ಲೂ ತೊಡಗಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
ಉಪ ವಿಭಾಗಾಧಿಕಾರಿ ಯತೀಶ್ ಆರ್., ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ನಾಗೇಶ್ ಬ್ಯಾಲದ್, ಅಕ್ಷರ ಕೆ.ಬಿ., ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಪ್ರಮುಖರಾದ ಕೆ.ಹೊಳೆಯಪ್ಪ, ಸತೀಶ ಕುಮಾರ್, ಪೂರ್ಣಿಮಾ, ಹನೀಫ್, ಗುರುರಾಜ್ ಇನ್ನಿತರರು ಹಾಜರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮ್ ಸ್ವಾಗತಿಸಿ, ಜಯಮ್ಮ ನಿರೂಪಿಸಿದರು.