ಕೊಪ್ಪಳ: ಸರ್ಜರಿಗೆ 3 ತಿಂಗಳು ಕಾಯ್ಬೇಕು!

| Published : May 26 2024, 01:42 AM IST / Updated: May 26 2024, 05:26 AM IST

ಸಾರಾಂಶ

ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುವುದೇ ದುಸ್ತರ ಎನ್ನುವಂತಾಗಿದೆ. ಯಾವುದಾದರೂ ಆಪರೇಷನ್ ಆಗಬೇಕು ಎಂದಾದರೆ ಆ ದೇವರೇ ರೋಗಿಯನ್ನು ಕಾಪಾಡಬೇಕು. ಈಗ ನೋಂದಾಯಿಸಿಕೊಂಡರೆ ಮೂರು ತಿಂಗಳ ನಂತರ ರೋಗಿಗೆ ಶಸ್ತ್ರಚಿಕಿತ್ಸೆ ನಡೆಯುತ್ತದೆ!

ಸೋಮರಡ್ಡಿ ಅಳವಂಡಿ 

ಕೊಪ್ಪಳ : ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುವುದೇ ದುಸ್ತರ ಎನ್ನುವಂತಾಗಿದೆ. ಯಾವುದಾದರೂ ಆಪರೇಷನ್ ಆಗಬೇಕು ಎಂದಾದರೆ ಆ ದೇವರೇ ರೋಗಿಯನ್ನು ಕಾಪಾಡಬೇಕು. ಈಗ ನೋಂದಾಯಿಸಿಕೊಂಡರೆ ಮೂರು ತಿಂಗಳ ನಂತರ ರೋಗಿಗೆ ಶಸ್ತ್ರಚಿಕಿತ್ಸೆ ನಡೆಯುತ್ತದೆ!ಇದು ಆರೋಪವಲ್ಲ, ಜಿಲ್ಲಾಸ್ಪತ್ರೆಯಲ್ಲಿ ಇರುವ ಲೆಡ್ಜರ್ ತಿರುವಿ ಹಾಕಿದರೆ ಸಿಗುವ ಸತ್ಯ ಸಂಗತಿ. ಮೇ ತಿಂಗಳಲ್ಲಿ ಆಸ್ಪತ್ರೆಗೆ ಹೋದ ರೋಗಿಗೆ ಕಣ್ಣು, ಮೂಗು, ಕಿವಿ ವಿಭಾಗದವರು ಆಗಸ್ಟ್ ತಿಂಗಳಲ್ಲಿ ಸರ್ಜರಿಗೆ ದಿನಾಂಕ ನೀಡಿದ್ದಾರೆ. 

ಈ ಹಿಂದೆ ಈ ವಿಭಾಗದಲ್ಲಿ ಐದಾರು ತಿಂಗಳ ಕಾಲ ಸತಾಯಿಸಿದ ಉದಾಹರಣೆಯೂ ಇದೆ!ಲಭ್ಯ ಮಾಹಿತಿಯ ಪ್ರಕಾರ, ಮೇ ತಿಂಗಳಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದ ರೋಗಿಗೆ ಆಗಸ್ಟ್‌ 5ರಂದು ಆಪರೇಷನ್ ಮಾಡುವ ಕುರಿತು ಈಗಾಗಲೇ ದಿನಾಂಕ ನಿಗದಿ ಮಾಡಲಾಗಿದೆ. ಕಾರಣ ಕೇಳಿದರೆ, ಆಪರೇಷನ್ ಥಿಯೇಟರ್ ಸಂಖ್ಯೆ ತೀರಾ ಕಡಿಮೆ ಇದೆ. ಹೀಗಾಗಿ, ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ. ಆದರೆ, ವೈದ್ಯರ ಬೇಜವಾಬ್ದಾರಿಯಿಂದಲೇ ಶಸ್ತ್ರಚಿಕಿತ್ಸೆ ಮಾಡುತ್ತಿಲ್ಲ ಎನ್ನುವ ದೂರು ರೋಗಿಗಳದು.

ಕಿಮ್ಸ್ (ಕೊಪ್ಪಳ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌) ನಿರ್ದೇಶಕರೇ ಕಣ್ಣು, ಕಿವಿ ಮತ್ತು ಮೂಗು ವಿಭಾಗಕ್ಕೆ ಈ ಸಂಬಂಧ ಎರಡು ಬಾರಿ ನೋಟಿಸ್ ಜಾರಿ ಮಾಡಿದ್ದಾರೆ. ರೋಗಿಗಳಿಗೆ ಸತಾಯಿಸದೆ ಕೂಡಲೇ ಆಪರೇಷನ್‌ ಮಾಡುವ ವ್ಯವಸ್ಥೆ ಮಾಡಿಕೊಳ್ಳಿ, ತಿಂಗಾಳುನುಗಟ್ಟಲೇ ಕಾಯಿಸುವುದು ಸರಿಯಲ್ಲ ಎಂದಿದ್ದಾರೆ.

ವೈದ್ಯರ ನಿರ್ಲಕ್ಷ್ಯ:ವೈದ್ಯರು ತುಂಬಾ ನಿರ್ಲಕ್ಷ್ಯಭಾವ ತೋರುತ್ತಾರೆ ಎಂದು ಒಬ್ಬ ವೈದ್ಯ ಇನ್ನೊಬ್ಬ ವೈದ್ಯರ ವಿರುದ್ಧ ಆರೋಪ ಮಾಡುತ್ತಾರೆ. ವೈದ್ಯರು ತಾವು ನಿಭಾಯಿಸಿದ ಕರ್ತವ್ಯದ ಲೆಕ್ಕಾಚಾರ ಹಾಕಿದರೆ ಎಬಿಆರ್‌ಕೆ (ಸರ್ಕಾರ ಪ್ರತಿ ಆಪರೇಷನ್‌ಗೆ ನೀಡುವ ಶುಲ್ಕ) ದುಡ್ಡು ಅವರ ವೇತನದಷ್ಟೂ ಬರುವುದಿಲ್ಲವಂತೆ. ಅಷ್ಟು ಕಡಿಮೆ ಆಪರೇಷನ್‌ಗಳನ್ನು ಮಾಡುತ್ತಾರೆ ಎನ್ನಲಾಗಿದೆ.ಇನ್ನು, ಎಲುಬು ಮತ್ತು ಕೀಲು ವಿಭಾಗದಲ್ಲಿಯೂ ಇದೇ ಗೋಳು. 

ಇಲ್ಲಿಯೂ ಕೈಕಾಲು ಮುರಿದುಕೊಂಡು ಬಂದವರು ಅಪರೇಷನ್‌ಗಾಗಿ ಕಾಯಬೇಕು. ಇಲ್ಲಿ ಮೂರು ತಿಂಗಳ ಕಾಲ ಕಾದವರೂ ಇದ್ದಾರೆ. ಈಗ ಆಸ್ಪತ್ರೆಯಲ್ಲಿ ಕೈಮುರಿದುಕೊಂಡು ಕಳೆದ ಹತ್ತು ದಿನಗಳಿಂದ ಇರುವ ಬಾಲಕನೋರ್ವನ ಆಪರೇಷನ್ಅ ನ್ನು ಸಹ ದಿನೇ ದಿನೇ ಮುಂದೂಡಲಾಗುತ್ತಿದೆ. ಕೇಳಿದರೆ, ಇನ್ನಿಲ್ಲದ ಕಾರಣ ಹೇಳುತ್ತಾರೆ. ಹೀಗೆ, ಅನೇಕರು ಹತ್ತಾರು ದಿನಗಳಿಂದ ಇಂದಲ್ಲ, ನಾಳೆ ಆಪರೇಷನ್ ಆಗುತ್ತದೆ ಎಂದು ಕಾಯುತ್ತಲೇ ಇದ್ದಾರೆ. ಆದರೆ, ಅವರ ಸರ್ಜರಿ ಆಗುತ್ತಿಲ್ಲ.

ಶೀತಲ ಸಮರ:ಜಿಲ್ಲಾಸ್ಪತ್ರೆಯನ್ನು ಕಿಮ್ಸ್ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಹೀಗಾಗಿ, ಇಲ್ಲಿ ಕಿಮ್ಸ್ ವೈದ್ಯರು ಮತ್ತು ಸಿಬ್ಬಂದಿಯೇ ಅಧಿಕಾರಯುತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೆಯೇ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯರೂ ಇದ್ದಾರೆ. ಜಿಲ್ಲಾ ಶಸ್ತ್ರಚಿಕಿತ್ಸಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿದವರು. 

ವೈದ್ಯಕೀಯ ಅಧೀಕ್ಷಕರು ವೈದ್ಯಕೀಯ ಶಿಕ್ಷಣ ಇಲಾಖೆಗೆ ಸೇರಿದವರು. ಹೀಗಾಗಿ, ಇಬ್ಬರೂ ಕೂಡಿ ಆಸ್ಪತ್ರೆಯನ್ನು ಮುನ್ನಡೆಸುತ್ತಿದ್ದಾರೆ. ಇವರಿಬ್ಬರ ಮಧ್ಯೆ ಹೊಂದಾಣಿಕೆಯಾಗುತ್ತಿಲ್ಲ. ಆಸ್ಪತ್ರೆಯಲ್ಲಿ ಶೀತಲ ಸಮರ ನಡೆಯುತ್ತಿದೆ. ಇದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಇವರಿಬ್ಬರ ಜಗಳದಲ್ಲಿ ರೋಗಿಗಳು ನರಕಯಾತನೆ ಅನುಭವಿಸುವಂತೆ ಆಗಿದೆ. ಇಷ್ಟಾದರೂ ಇದನ್ನು ಇತ್ಯರ್ಥಪಡಿಸಬೇಕಾದ ವೈದ್ಯಕೀಯ ಸಚಿವರು ಮಾತ್ರ ಇತ್ತ ಮುಖವನ್ನೇ ಹಾಕುತ್ತಿಲ್ಲ ಎಂಬ ದೂರು ಕೇಳಿಬಂದಿವೆ.

ವರದಿಯಲ್ಲಿಯೇ ಉಲ್ಲೇಖ:

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸುಶಿಲಕುಮಾರ ಕಲಾಲ ಅವರು ಜಿಲ್ಲಾಸ್ಪತ್ರೆಯಲ್ಲಿನ ಅಧ್ವಾನಗಳ ಕುರಿತು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ಇಎನ್‌ಟಿ ವಿಭಾಗದಲ್ಲಿ ಆಪರೇಷನ್‌ಗೆ ಆರು ತಿಂಗಳ ನಂತರ ಡೇಟ್ ನೀಡುತ್ತಿದ್ದಾರೆ. ಇದು ಸರಿಯಲ್ಲ. ತಕ್ಷಣಕ್ಕೆ ಆಪರೇಷನ್ ಮಾಡುವಂತಾಗಬೇಕು ಎಂದಿದ್ದಾರೆ.