ಸಾರಾಂಶ
- ದಾವಣಗೆರೆಯಲ್ಲಿ ಹೊಸ ಸಿಎನ್‌ಜಿ ಸ್ಟೇಷನ್ಸ್-ಆಟೋ, ಕಾರು ಇತರೆ ವಾಹನ ಚಾಲಕರ ಹರ್ಷ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆಯಲ್ಲಿ ಕೊಂಚ ಸದ್ದು ಮಾಡಿದ್ದ ಸಿಎನ್‌ಜಿ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಗೋಚರಿಸುತ್ತವೆ. ಸಿಎನ್‌ಜಿ ಸಮಸ್ಯೆ ಬಗ್ಗೆ ಆಟೋ, ಕಾರು ಇತರೆ ವಾಹನಗಳ ಚಾಲಕರು ಸಮಸ್ಯೆ ಪರಿಹರಿಸುವಂತೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರಿಗೆ ಆಗ್ರಹಿಸಿದ್ದರು. ಈ ಕುರಿತು ಸಂಸದರ ಪ್ರಯತ್ನದ ಫಲವಾಗಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಮುಂದಿನ 6 ತಿಂಗಳಲ್ಲಿ ಇನ್ನೂ 3 ಸಿಎನ್‌ಜಿ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ.2 ತಿಂಗಳ ಹಿಂದೆ ನಗರದಲ್ಲಿ ಆಟೋ ರಿಕ್ಷಾ, ಕಾರು ಇತರೆ ಸಿಎನ್‌ಜಿ ಅವಲಂಬಿತ ವಾಹನಗಳ ಚಾಲಕರು, ಮಾಲೀಕರು ಜಿಲ್ಲೆಯಲ್ಲಿ ಸಂಕುಚಿತ ನೈಸರ್ಗಿಕ ಅನಿಲ ಪೂರೈಕೆಯಲ್ಲಿ ಉಂಟಾದ ಸಮಸ್ಯೆ ಬಗ್ಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಗಮನಕ್ಕೆ ತಂದಿದ್ದರು. ಜಿಲ್ಲಾ ಕೇಂದ್ರದಲ್ಲಿ ಸಿಎನ್‌ಜಿ ಪಂಪ್‌ಗಳನ್ನು ಹೆಚ್ಚಿಸಬೇಕು. ಇಲ್ಲವಾದರೆ ಸಮರ್ಪಕವಾಗಿ ಸಿಎನ್‌ಜಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮನವಿ ಅರ್ಪಿಸಿದ್ದರು.
ಚಾಲಕರ ಮನವಿ ಸ್ವೀಕರಿಸಿದ್ದ ಸಂಸದರು, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸಚಿವ ಹರದೀಪ್ ಎಸ್. ಪುರಿ ಅವರಿಗೆ ಪತ್ರ ಬರೆದು, ದಾವಣಗೆರೆಯಲ್ಲಿನ ಸಿಎನ್‌ಜಿ ಸಮಸ್ಯೆ ಪರಿಹರಿಸಲು ಒತ್ತಾಯಿಸಿದ್ದರು. ಸಂಸದರ ಪತ್ರಕ್ಕೆ ಸ್ಪಂದಿಸಿರುವ ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಸಚಿವರು ಹಂತ ಹಂತವಾಗಿ ದಾವಣಗೆರೆ ಜಿಲ್ಲೆಯಲ್ಲಿ ಸಿಎನ್‌ಜಿ ಕೇಂದ್ರಗಳನ್ನು ಸ್ಥಾಪಿಸುವ ಭರವಸೆ ನೀಡಿದ್ದರು.ಕೇಂದ್ರ ದಿಟ್ಟ ಹೆಜ್ಜೆ:
ಈಗಾಗಲೇ ದಾವಣಗೆರೆಯಲ್ಲಿ 10 ಸಿಎನ್‌ಜಿ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಹೊನ್ನಾಳಿಯಲ್ಲಿ 10ನೇ ಸಿಎನ್‌ಜಿ ಆರ್‌ಒ ನಿಯೋಜಿಸಲಾಗಿದೆ. ಸಿಎನ್‌ಜಿ ಪೂರೈಕೆ ಕೊರತೆ ನಿವಾರಿಸುತ್ತಿರುವುದಾಗಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ 6 ತಿಂಗಳಲ್ಲಿ ಇನ್ನೂ 3 ಸಿಎನ್‌ಜಿ ಕೇಂದ್ರಗಳನ್ನು ಸ್ಥಾಪಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಹೊಸ ಸಿಎನ್‌ಜಿ ಸ್ಟೇಷನ್ ಆರಂಭಿಸಲು ಅರ್ಜಿ ಆಹ್ವಾನಿಸಲು ಪತ್ರಿಕೆಗಳಲ್ಲಿ ಜಾಹೀರಾತು ಸಹ ಬಿಡುಗಡೆ ಮಾಡಲಾಗಿದೆ. ದಾವಣಗೆರೆಯಲ್ಲಿ ಸಿಎನ್‌ಜಿ ಪೂರೈಕೆಯನ್ನು ಮತ್ತಷ್ಟು ಬಲಪಡಿಸಲು 6 ವಿಶೇಷ ಸಿಎನ್‌ಜಿ ಆರ್‌ಒಗಳನ್ನು ಸ್ಥಾಪಿಸಲು ಸಿದ್ಧತೆ ನಡೆಸಿರುವುದಾಗಿ ಕೇಂದ್ರ ತಿಳಿಸಿದೆ.ಎಡಬಿಡದೇ ಸತತ ಪ್ರಯತ್ನ, ಪರಿಶ್ರಮದಿಂದ ದಾವಣಗೆರೆ ನಗರ, ಜಿಲ್ಲೆಯಲ್ಲಿ ಸಿಎನ್‌ಜಿ ಸಮಸ್ಯೆ ನಿವಾರಿಸುವಲ್ಲಿ ದಾಪುಗಾಲಿಡಲಾಗುತ್ತಿದೆ. ಇದರಿಂದ ಆಟೋ ರಿಕ್ಷಾ ಮತ್ತು ಕಾರು ಇತರೆ ವಾಹನ ಚಾಲಕರ ಅನೇಕ ದಿನಗಳ ಬೇಡಿಕೆಗೆ ಸ್ಪಂದಿಸಿದಂತಾಗಿದೆ. ಆದಷ್ಟು ಬೇಗನೆ ಸಿಎನ್‌ಜಿ ಸ್ಟೇಷನ್‌ಗಳನ್ನು ಆರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ಇದೇ ವೇಳೆ ಸಂಸದೆ ಡಾ.ಪ್ರಭಾ ಒತ್ತಾಯಿಸಿದ್ದಾರೆ.
ಚಾಲಕರೇನಂತಾರೆ?:ಸೀಮಿತ ಸಂಖ್ಯೆಯ ನಿಲ್ದಾಣಗಳು, ಆಟೋ ರಿಕ್ಷಾಗಳು, ಕಾರುಗಳು, ಸಾರಿಗೆ ವಾಹನಗಳು, ಬೈಕ್, ಬಸ್ಸು, ಟ್ರಕ್‌ಗಳಂತಹ ಸಿಎನ್‌ಜಿ ಚಾಲಿತ ವಾಹನಗಳ ಸಂಖ್ಯೆ ಹೆಚ್ಚಳದಿಂದಾಗಿ ಸಿಎನ್‌ಜಿ ಪೂರೈಕೆಯಲ್ಲಿ ತೀವ್ರ ಕೊರತೆಯಾಗಿತ್ತು. ಕಳೆದ ಏಪ್ರಿಲ್ ಮೊದಲ ವಾರದಲ್ಲಂತೂ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಿಂದಾಗಿ ಪರಿಸ್ಥಿತಿ ಗಮನಾರ್ಹವಾಗಿ ಹದಗೆಟ್ಟಿತ್ತು ಎಂದು ಆಟೋ ರಿಕ್ಷಾ, ಇತರೆ ಸಿಎನ್‌ಜಿ ವಾಹನಗಳ ಚಾಲಕರು, ಮಾಲೀಕರು ವಿವರಿಸುತ್ತಾರೆ.
ತಮ್ಮೆಲ್ಲರ ಮನವಿಗೆ ಸ್ಪಂದಿಸಿದ ಸಂಸದೆ ಡಾ.ಪ್ರಭಾ ನಿತ್ಯವೂ ಆಟೋ ರಿಕ್ಷಾ, ಇತರೆ ವಾಹನಗಳ ಚಾಲಕರು, ಮಾಲೀಕರು ಗ್ಯಾಸ್ ತುಂಬಿಸಲು ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ಇತ್ತು. ಇದೀಗ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರ ಪ್ರಯತ್ನದಿಂದಾಗಿ ಸಿಎನ್‌ಜಿ ಸಮಸ್ಯೆಗೆ ಮುಕ್ತಿ ಹಾಕುವ ಹಿನ್ನೆಲೆಯಲ್ಲಿ ನಮ್ಮ ಬೇಡಿಕೆಗೆ ಸ್ಪಂದಿಸಿದ್ದಾರೆ. ಆದಷ್ಟು ಬೇಗನೆ ಸಿಎನ್‌ಜಿ ನಿಲ್ದಾಣ, ಕೇಂದ್ರಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಸ್ಪಂದಿಸಲಿ ಎನ್ನುತ್ತಾರೆ.- - -
-7ಕೆಡಿವಿಜಿ1.ಜೆಪಿಜಿ:ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರಿಗೆ ಸಿಎನ್‌ಜಿ ಆಟೋ ರಿಕ್ಷಾ, ವಾಹನ ಮಾಲೀಕರು, ಚಾಲಕರು ಮನವಿ ಅರ್ಪಿಸಿದ ಸಂದರ್ಭದ ಸಂಗ್ರಹ ಚಿತ್ರ.