ಅಕ್ರಮ ಪಂಪ್‌ಸೆಟ್ ತೆರವಿಗೆ 3 ತಂಡ ರಚನೆ

| Published : Nov 03 2023, 12:30 AM IST

ಸಾರಾಂಶ

ಕಂದಾಯ, ಪೊಲೀಸ್‌, ನೀರಾವರಿ, ಬೆಸ್ಕಾಂ ಅಧಿಕಾರಿ, ಸಿಬ್ಬಂದಿ ಒಳಗೊಂಡ ತಂಡ । ದಾವಣಗೆರೆ, ಚನ್ನಗಿರಿ, ಹರಿಹರ ತಾಲೂಕಿನಲ್ಲಿ ಕಾರ್ಯಾಚರಣೆಗೆ ಸಜ್ಜು

* ಕಂದಾಯ, ಪೊಲೀಸ್‌, ನೀರಾವರಿ, ಬೆಸ್ಕಾಂ ಅಧಿಕಾರಿ, ಸಿಬ್ಬಂದಿ ಒಳಗೊಂಡ ತಂಡ । ದಾವಣಗೆರೆ, ಚನ್ನಗಿರಿ, ಹರಿಹರ ತಾಲೂಕಿನಲ್ಲಿ ಕಾರ್ಯಾಚರಣೆಗೆ ಸಜ್ಜು

ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ನಾಲೆಯುದ್ದಕ್ಕೂ ತಲೆ ಎತ್ತಿರುವ ಅಕ್ರಮ ಪಂಪ್‌ಸೆಟ್ ಗಳ ತೆರವುಗೊಳಿಸಿ, ಅಚ್ಚುಕಟ್ಟು ಕೊನೆಯ ಭಾಗಕ್ಕೆ ನೀರು ತಲುಪಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಅಕ್ರಮ ಪಂಪ್ ಸೆಟ್ ತೆರವುಗೊಳಿಸಲು ಕಂದಾಯ, ಪೊಲೀಸ್‌, ನೀರಾವರಿ ಇಲಾಖೆ ಹಾಗೂ ಬೆಸ್ಕಾಂ ಇಲಾಖೆ ಅಧಿಕಾರಿ, ಸಿಬ್ಬಂದಿ ಒಳಗೊಂಡ ತಂಡ ರಚಿಸಿದ್ದು, ನ.4ರಿಂದಲೇ ಪಂಪ್ ಸೆಟ್ ತೆರವು ಕಾರ್ಯಾಚರಣೆ ಕೈಗೊಳ್ಳಲಿದೆ.

ದಾವಣಗೆರೆ ತಂಡ ಹೀಗಿರಲಿದೆ:

ದಾವಣಗೆರೆ ತಹಸೀಲ್ದಾರ್‌, ಉಪ ತಹಸೀಲ್ದಾರ್‌, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಗ್ರಾಮಸಹಾಯಕರು, ಮಾಯಕೊಂಡ ಪೊಲೀಸ್ ವೃತ್ತ ನಿರೀಕ್ಷಕರು, ಗ್ರಾಮಾಂತರ ಪೊಲೀಸ್ ಠಾಣೆ, ಮಾಯಕೊಂಡ ಪೊಲೀಸ್ ಠಾಣೆ ಅಧಿಕಾರಿ, ಸಿಬ್ಬಂದಿ, ನೀರಾವರಿ ಇಲಾಖೆ ಭದ್ರಾ ನಾಲಾ ವಿಭಾಗ ನಂ-5ರ ಕಾರ್ಯಪಾಲಕ ಅಭಿಯಂತರ, ಸಹಾಯಕ ಕಾರ್ಯಪಾಲಕ ಅಭಿಯಂತರ, ಭದ್ರಾ ನಾಲಾ ಉಪ ವಿಭಾಗ, ನಂ.1 ಮತ್ತು 2ರ ಸಹಾಯಕ ಕಾರ್ಯ ಪಾಲಕ ಅಭಿಯಂತರರು, ಬೆಸ್ಕಾಂ ಇಇ, ದಾವಣಗೆರೆ ಗ್ರಾಮೀಣ ಹಾಗೂ ಮಾಯಕೊಂಡ ಹೋಬಳಿ ಅತ್ತಿಗೆರೆ ಎಇಇಗಳು ತಂಡದಲ್ಲಿದ್ದಾರೆ.

ಹರಿಹರದ ತಂಡ ಹೀಗಿದೆ:

ಹರಿಹರದ ತಹಸೀಲ್ದಾರ್‌, ಉಪ ತಹಸೀಲ್ದಾರ್‌, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕರು, ಹರಿಹರ ಪೊಲೀಸ್ ವೃತ್ತ ನಿರೀಕ್ಷಕರು, ಮಲೆಬೆನ್ನೂರು, ಹರಿಹರ ಗ್ರಾಮಾಂತರ ಠಾಣೆಗಳ ಅಧಿಕಾರಿ, ಸಿಬ್ಬಂದಿ, ನೀರಾವರಿ ಇಲಾಖೆ ಭದ್ರಾ ನಾಲಾ ವಿಭಾಗ ನಂ-3ರ ಕಾರ್ಯಪಾಲಕ ಅಭಿಯಂತರ, ಸಹಾಯಕ ಕಾರ್ಯಪಾಲಕ ಅಭಿಯಂತರ, ದಾವಣಗೆರೆ ಭದ್ರಾ ನಾಲಾ ಉಪ ವಿಭಾಗ, ನಂ.5 ಮತ್ತು ಮಲೆಬೆನ್ನೂರು ಉಪ ವಿಭಾಗ-3, ಹರಿಹರ ನಾಲಾ ಉಪ ವಿಭಾಗದ ಎಇಇಗಳು, ಬೆಸ್ಕಾಂ ಇಇ ಹರಿಹರ, ಎಇಇ ಹರಿಹರ ರನ್ನು ಒಳಗೊಂಡ ತಂಡಗಳ ರಚಿಸಲಾಗಿದೆ.

ಚನ್ನಗಿರಿ ತಂಡದಲ್ಲಿ ಯಾರೆಲ್ಲ:

ಚನ್ನಗಿರಿ ತಹಸೀಲ್ದಾರ್‌, ಸಂಬಂಧಿಸಿದ ಉಪ ತಹಸೀಲ್ದಾರ್‌, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕರು, ಸಂತೇಬೆನ್ನೂರು ವೃತ್ತ ನಿರೀಕ್ಷಕರು, ಚನ್ನಗಿರಿ, ಸಂತೇಬೆನ್ನೂರು, ಬಸವಾಪಟ್ಟಣ ಪೊಲೀಸ್ ಠಾಣೆಗಳ ಅಧಿಕಾರಿ, ಸಿಬ್ಬಂದಿ, ನೀರಾವರಿ ಇಲಾಖೆ ಭದ್ರಾ ನಾಲಾ ವಿಭಾಗ ನಂ-5ರ ಕಾರ್ಯಪಾಲಕ ಅಭಿಯಂತರ, ಸಹಾಯಕ ಕಾರ್ಯಪಾಲಕ ಅಭಿಯಂತರ, ಡಿಜಿಹಳ್ಳಿ ಚನ್ನಗಿರಿ, ಎಇಇ ನಂ.4, ಭದ್ರಾ ನಾಲಾ ಉಪ ವಿಭಾಗ, ಬಸವಾಪಟ್ಟಣ ಹಾಗೂ ಬೆಸ್ಕಾಂ ಇಇ, ಚನ್ನಗಿರಿ,ಸಂತೇಬೆನ್ನೂರು, ಬಸವಾಪಟ್ಟಣ ಎಇಇಗಳು ಕಾರ್ಯಾಚರಣೆ ಕೈಗೊಳ್ಳುವರು.

ಮೂರೂ ತಂಡಗಳ ಅಧಿಕಾರಿಗಳು, ಸಿಬ್ಬಂದಿ ತಕ್ಷಣದಿಂದಲೇ ಕಾರ್ಯ ಪ್ರವೃತ್ತರಾಗಿ ಭದ್ರಾ ನಾಲೆಯ ಕಾಲುವೆಗಳಲ್ಲಿ ಯಾವುದೇ ಅನಧಿಕೃತ ಪಂಪ್ ಸೆಟ್‌ಗಳು, ಡೀಸೆಲ್‌ ಜನಸೆಟ್ಸ್ ಮತ್ತು ಇತರೆ ಉಪಕರಣಗಳನ್ನೆಲ್ಲಾ ತೆರವು ಮಾಡಿಸಿ, ಅದ್ಯಾವುದೂ ಇಲ್ಲವೆಂದು ದೃಢೀಕರಣ ಸಲ್ಲಿಸಲು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ನಾಲ್ಕೂ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳ ತಂಡಕ್ಕೆ ಸೂಚನೆ ನೀಡಿದ್ದಾರೆ.

...........................

ನಾಳೆಯಿಂದಲೇ ತೆರವು ಕಾರ್ಯಾಚರಣೆ

* ಸ್ಪಂದಿಸದಿದ್ದರೆ ಕಾನೂನು ಕ್ರಮ: ನೀರಾವರಿ ಇಲಾಖೆ ಎಚ್ಚರಿಕೆ

ದಾವಣಗೆರೆ: ಭದ್ರಾ ನಾಲೆಯಲ್ಲಿ ಅನಧಿಕೃತ ಪಂಪ್‌ಸೆಟ್‌ಗಳ ತೆರವುಗೊಳಿಸಿ, ಅಚ್ಚುಕಟ್ಟು ಕೊನೆಯ ಭಾಗಕ್ಕೆ ಹಾಗೂ ಕುಡಿವ ನೀರು ಪೂರೈಸುವ ಸಲುವಾಗಿ ಜಿಲ್ಲಾಧಿಕಾರಿಗಳ ಆದೇಶದಂತೆ ನ.4ರಿಂದ ಅನಧಿಕೃತ ಪಂಪ್‌ಸೆಟ್‌ಗಳ ತೆರವುಗೊಳಿಸುವ ಕಾರ್ಯಾಚರಣೆಯನ್ನು ಕಂದಾಯ, ಪೊಲೀಸ್‌, ಬೆಸ್ಕಾಂ ಹಾಗೂ ನೀರಾವರಿ ಇಲಾಖೆಗಳು ಜಂಟಿಯಾಗಿ ಕೈಗೊಳ್ಳಲಿವೆ ಎಂದು ನೀರಾವರಿ ನಿಗಮದ ಭದ್ರಾ ನಾಲಾ ಉಪ ವಿಭಾಗ ನಂ.3ರ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

ಅನಧಿಕೃತ ಪಂಪ್‌ಸೆಟ್‌ಗಳ ತೆರವು ಕಾರ್ಯಾಚರಣೆಯನ್ನು ಚನ್ನಗಿರಿ ತಾಲೂಕು ವ್ಯಾಪ್ತಿಯ ದಾವಣಗೆರೆ ಶಾಖಾ ಕಾಲುವೆಯಿಂದ 30 ಕಿಮೀವರೆಗೆ ಕೈಗೊಳ್ಳಲಾಗುವುದು. ಅನಧಿಕೃತವಾಗಿ ಕಾಲುವೆ ನೀರು ಎತ್ತಿಕೊಳ್ಳಲು ಅಳವಡಿಸಿರುವ ಪಂಪ್ ಸೆಟ್‌ಗಳ ತಕ್ಷಣವೇ ಸಂಬಂಧಿಸಿದವರು ತೆರವಿಗೆ ರೈತರು ಸಹಕರಿಸಬೇಕು. ತಪ್ಪಿದರೆ ಅಂತಹವರ ವಿರುದ್ಧ ಕರ್ನಾಟಕ ನೀರಾವರಿ ಕಾಯ್ದೆ ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

.....................

ಪಂಪ್ ಸೆಟ್‌ಗಳ ವಶ, ವಿದ್ಯುತ್ ಕಡಿತ

ಭದ್ರಾ ಕಾಲುವೆ ಮೂಲಕ ಅಚ್ಚುಕಟ್ಟು ಕಡೆ ಭಾಗದವರೆಗೂ ನೀರು ಕೊಡಬೇಕಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಭದ್ರಾ ನಾಲೆಯಲ್ಲಿ ಅಕ್ರಮವಾಗಿ ಅಳವಡಿಸಿರುವ ಪಂಪ್ ಸೆಟ್‌ಗಳ ಗುರುವಾರ ತೆರವುಗೊಳಿಸಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಸಂಪರ್ಕ ಕಡಿತಗೊಳಿಸುವ ಕಾರ್ಯ ಕೈಗೊಳ್ಳಲಾಗಿದೆ. ದಾವಣಗೆರೆ-ಹೊನ್ನಾಳಿ ರಸ್ತೆಯ ಅರಳೀಪುರ, ಯಲೋದಹಳ್ಳಿ ಇನ್ನಿತರೆ ಪ್ರದೇಶಗಳ ಕಾಲುವೆ, ನಾಲೆಗಳಲ್ಲಿ ಅಕ್ರಮವಾಗಿ ನೀರು ತೆಗೆಯಲು ಬಳಸುತ್ತಿದ್ದ ಪಂಪ್‌ಸೆಟ್‌ಗಳ ತೆರವುಗೊಳಿಸಲಾಗಿದೆ. ನೀರಾವರಿ ಇಲಾಖೆ, ಕಂದಾಯ, ಪೊಲೀಸ್ ಹಾಗೂ ಬೆಸ್ಕಾಂ ಅಧಿಕಾರಿ, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

...........