ಚಿಕ್ಕಬಳ್ಳಾಪುರ ನಗರ ಯುಜಿಡಿಗೆ ₹30 ಕೋಟಿ

| Published : Jul 09 2024, 12:48 AM IST

ಸಾರಾಂಶ

ಮಳೆ ಬಂದರೆ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಚರಂಡಿಗಳ ಸ್ವಚ್ಛತೆಗೆ ಆದ್ಯತೆ ನೀಡಲು ನಗರಸಭೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದ್ದಾರೆ. ರೋಗಿಗಳನ್ನು ನಮ್ಮ ಅಮ್ಮ ಆ್ಯಂಬುಲೆನ್ಸ್ ನಲ್ಲಿ ಬೆಂಗಳೂರಿನ ವಿವಿಧ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಗರದಲ್ಲಿ ಶೇ. 40 ರಷ್ಟು ಒಳ ಚರಂಡಿಯಾಗಬೇಕಿದ್ದು(ಯುಜಿಡಿ), ಇದಕ್ಕಾಗಿ 30 ಕೋಟಿ ಹಣ ಬಿಡುಗಡೆ ಮಾಡಿಸಿದ್ದೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.

ನಗರದಲ್ಲಿ ‘ನಮಸ್ತೆ ಚಿಕ್ಕಬಳ್ಳಾಪುರ’ ಕಾರ್ಯಕ್ರಮದ ಅನ್ವಯ 17ನೇ ವಾರ್ಡ್ ನಲ್ಲಿ ಸೋಮವಾರ ವಾರ್ಡ್‌ಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಸಚಿವ ಬೈರತಿ ಸುರೇಶ್ ರವರು ಈ ಯುಜಿಡಿ ಹಣ ಮಂಜೂರು ಮಾಡಿಸಿ ಕೊಟ್ಟಿದ್ದಾರೆ ಎಂದರು.ನಗರಾಭಿವೃದ್ಧಿಗೆ ₹50 ಕೋಟಿ

ಇದಲ್ಲದೇ ನಗರದ ಅಭಿವೃದ್ಧಿಗೆ 50 ಕೋಟಿ ರು.ಗಳು, ಹಾಳಾಗಿರುವ ಕಂದವಾರ ಕೆರೆ ಕಟ್ಟೆಯ ರಸ್ತೆ ಅಭಿವೃದ್ಧಿಗೆ 8 ಕೋಟಿ ರು.ಗಳು, ಹಾಗೂ ನಗರದ ಹಾಳಾದ ರಸ್ತೆಗಳ ಕಾಮಗಾರಿ ಮಾಡಿಸಲು 25 ಕೋಟಿ ರೂಗಳನ್ನು ಮೀಸಲು ಇಟ್ಟಿದ್ದು ಹೆಚ್ಚಿನ ಹಾನಿಗೊಳಗಾದ ರಸ್ತೆಗಳನ್ನು ಆದ್ಯತೆ ಮೇರೆಗೆ ರಿಪೇರಿ ಮಾಡಿಸುವುದು ಅಥವಾ ಹೊಸ ರಸ್ತೆ ಮಾಡಿಸುವುದನ್ನು ಮಾಡುವುದಾಗಿ ತಿಳಿಸಿದರು.

ಡೆಂಘೀ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಬಗ್ಗೆ ನಗರ ಮತ್ತು ಗ್ರಾಮೀಣ ಬಾಗಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ನಗರದ ಕಂದವಾರ ಕೆರೆಯಿಂದ ಮತ್ತು ತೆರೆದ ಚರಂಡಿಗಳಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದ್ದು, ಈ ಎಲ್ಲ ಕಡೆಗಳಲ್ಲಿ ಕೂಡಲೆ ಸ್ವಚ್ಛತೆ ಮತ್ತು ಔಷಧ ಸಿಂಪರಣೆಗೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ರೋಗಿಗಳಿಗೆ ಪ್ರತ್ಯೇಕ ವಾರ್ಡ್‌

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ರವರೊಂದಿಗೆ ಚರ್ಚಿಸಿ ಜಿಲ್ಲಾಸ್ಪತ್ರೆಯಲ್ಲಿ ಡೆಂಘೀ ರೋಗಕ್ಕೆ ಉಚಿತ ರಕ್ತ ತಪಾಸಣೆ ಮತ್ತು ಪ್ರತ್ಯೇಕ ವಾರ್ಡ್ ಮೀಸಲಿದುವಂತೆ ಮನವಿ ಮಾಡಲಾಗುವುದು. ನಗರದಲ್ಲಿ ಡೆಂಗ್ಯೂ ಜ್ವರದ ಪ್ರಕರಣಗಳು ವರದಿಯಾಗುತ್ತಿರುವುದರಿಂದ ನಗರದ ರಸ್ತೆಗಳಲ್ಲಿ. ಖಾಲಿ ನಿವೇಶನಗಳಲ್ಲಿ, ಚರಂಡಿಗಳಲ್ಲಿ ಮತ್ತು ಎಲ್ಲೆಂದರಲ್ಲಿ ಕಸ ಬಿಸಾಡದೆ, ಮನೆ ಸುತ್ತ ಮುತ್ತಲು ಮಳೆ ನೀರು ನಿಲ್ಲದೇ ಸರಾಗವಾಗಿ ಹರಿದು ಹೋಗುವಂತೆ ನಗರವನ್ನು ಸ್ವಚ್ಚವಾಗಿ ಇಟ್ಟು ಕೊಳ್ಳುವುದು ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿ ಎಂದರು.

ವಾರ್ಡ್ ನ ನಿವಾಸಿಗಳ ಬೇಟಿ ಮಾಡಿ ಅವರ ಸಮಸ್ಯೆಗಳಾದ ಮನೆ ಹಕ್ಕುಪತ್ರ, ಮಾಶಾಸನ, ಪಡಿತರ ಚೀಟಿ ಮತ್ತು ಮೂಲಭೂತ ಸೌಕರ್ಯಗಳಾದ ನೀರು, ಚರಂಡಿ, ಬೀದಿ ಬದಿಯ ವಿದ್ಯತ್‌ ದೀಪ, ರಸ್ತೆ ರಿಪೇರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಳೆ ಬಂದರೆ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಚರಂಡಿಗಳ ಶುಚಿತ್ವಕ್ಕೆ ಆದ್ಯತೆ ನೀಡಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವರ್ಷಾನುಗಟ್ಟಲೆ ಶಾಶ್ವತ ಕಾಯಿಲೆಗಳಿಂದ ನರಳುತ್ತಿರುವ ರೋಗಿಗಳನ್ನು ನಮ್ಮ ಅಮ್ಮ ಆ್ಯಂಬುಲೆನ್ಸ್ ನಲ್ಲಿ ಬೆಂಗಳೂರಿನ ಕಿದ್ವಾಯಿ ಸೇರಿದಂತೆ ವಿವಿಧ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಏರ್ಪಾಟನ್ನು ಮಾಡಿರುವುದಾಗಿ ಹೇಳಿದರು.

ಪ್ಲಾಸ್ಟಿಕ್‌ ಮುಕ್ತ ಕ್ಷೇತ್ರ

ಸ್ವಚ್ಛ ಚಿಕ್ಕಬಳ್ಳಾಪುರ ಕ್ಷೇತ್ರ ಮಾಡಬೇಕೆನ್ನುವ ಉದ್ದೇಶದಿಂದ ಈಗಾಗಲೇ ಪ್ಲಾಸ್ಟಿಕ್ ನಿಷೇಧ ಮಾಡಿದ್ದು, ಪ್ಲಾಸ್ಟಿಕ್‌ ಬಳಕೆಯಿಂದಾಗುವ ದುಷ್ಪರಿಣಾಮಗಳನ್ನು ಜನತೆಗೆ ಹೋಟೆಲ್ ಮಾಲಿಕರಿಗೆ ಮತ್ತು ವ್ಯಾಪಾರಿಗಳಿಗೂ ಮನವರಿಕೆ ಮಾಡಿಕೊಡಲಾಗಿದೆ. ಜನರು ಆದಷ್ಟು ಮನೆಯಿಂದಲೇ ಬಟ್ಟೆ ಅಥವಾ ಸೆಣಬಿನ ಚೀಲಗಳನ್ನು ತೆಗೆದು ಕೊಂಡು ಹೋಗಿ ಸರಕು- ಸರಂಜಾಮುಗಳನ್ನು ತರಬೇಕೆಂದು ಮನವಿ ಮಾಡಿದರು.

ಈ ವೇಳೆ ನಗರಸಭೆ ಉಸ್ತುವಾರಿ ಪೌರಾಯುಕ್ತ ಹಾಗೂ ಪರಿಸರ ಅಭಿಯಂತರ ಉಮಾಶಂಕರ್, ಆಹಾರ ನೀರೀಕ್ಷಕ ನಾರಾಯಣಸ್ವಾಮಿ, ಮುಖಂಡರಾದ ಕೆ.ಎಲ್‌.ಶ್ರೀನಿವಾಸ್‌,ಪಿ.ಎಂ. ರಘು ವಿನಯ್ ಬಂಗಾರಿ, ಡ್ಯಾನ್ಸ್ ಶ್ರೀನಿವಾಸ್‌, ನಾಗಭೂಷಣ್, ಅಲ್ಲು ಅನಿಲ್,ನಗರಸಭೆ, ಕಂದಾಯ,ಆಹಾರ, ಬೆಸ್ಕಾಂ,ಆರೋಗ್ಯ ಇಲಾಖೆ ಸೇರಿದಂತೆ ಮತ್ತಿತರ ಇಲಾಖೆಗಳ ಅಧಿಕಾರಿಗಳು, ಮತ್ತಿತರರು ಇದ್ದರು.