ಬಾಳೆಹೊನ್ನೂರುಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ಪೇಟೆಕೆರೆ ರಸ್ತೆಯ ಕಾಂಕ್ರೀಟಿಕರಣಕ್ಕೆ ₹30 ಲಕ್ಷ ಅನುದಾನ ಮೀಸಲಿರಿಸಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಪೇಟೆಕೆರೆ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಗುದ್ದಲಿ ಪೂಜೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ಪೇಟೆಕೆರೆ ರಸ್ತೆಯ ಕಾಂಕ್ರೀಟಿಕರಣಕ್ಕೆ ₹30 ಲಕ್ಷ ಅನುದಾನ ಮೀಸಲಿರಿಸಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.ಪಟ್ಟಣದ ಪೇಟೆಕೆರೆ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಬಾಳೆಹೊನ್ನೂರು ವ್ಯಾಪ್ತಿಯ ಬಿಜಿಎಸ್ ಕಾಲೇಜು ಮುಂಭಾಗದ ರಸ್ತೆಗೆ ₹25 ಲಕ್ಷ, ಆದರ್ಶನಗರದ ರಸ್ತೆಗೆ ₹25 ಲಕ್ಷ, ಇಟ್ಟಿಗೆ ಲಕ್ಷ್ಮೀನಾರಾಯಣ ದೇವಸ್ಥಾನ ರಸ್ತೆಗೆ ₹20 ಲಕ್ಷ, ಅಕ್ಷರನಗರ ರಸ್ತೆಗೆ ₹37 ಲಕ್ಷ, ರೇಣುಕನಗರ ರಸ್ತೆಗೆ ₹40 ಲಕ್ಷ, ಸಂತೆ ಮಾರುಕಟ್ಟೆ ತಡೆಗೋಡೆ ನಿರ್ಮಾಣಕ್ಕೆ ₹.1 ಕೋಟಿ, ಕಾನ್ಕೆರೆ ರಸ್ತೆಗೆ ₹50 ಲಕ್ಷ ಅನುದಾನ ಮೀಸಲಿಟ್ಟಿದ್ದು, ಕೆಲವು ಕಡೆಗಳಲ್ಲಿ ಈಗಾಗಲೇ ಕಾಮಗಾರಿ ಆರಂಭ ಗೊಂಡಿದೆ. ಇನ್ನುಳಿದೆಡೆಗಳಲ್ಲಿ ಶೀಘ್ರದಲ್ಲಿ ಕಾಮಗಾರಿ ನಡೆಯಲಿದೆ ಎಂದರು.

ಎಲ್ಲ ಕಡೆಗಳಲ್ಲಿಯೂ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸಬೇಕಿದ್ದು, ಗುಣಮಟ್ಟದಲ್ಲಿ ಯಾವುದೇ ಲೋಪವಾಗಬಾರದು. ಗುಣಮಟ್ಟ ಕಾಯ್ದುಕೊಂಡಾಗ ಕಾಮಗಾರಿಗಳು ದೀರ್ಘ ಕಾಲಕ್ಕೆ ಬಾಳಿಕೆ ಬರಲಿದೆ ಎಂದರು.ಬಾಳೆಹೊನ್ನೂರು ಭದ್ರಾನದಿ ಸೇತುವೆ ಕಾಮಗಾರಿ ವಿಳಂಭದ ಬಗ್ಗೆ ಹಲವಾರು ಬಾರಿ ಗುತ್ತಿಗೆದಾರ ರೊಂದಿಗೆ ಮಾತನಾಡಲಾಗಿದೆ. ಸೇತುವೆ ಪೂರ್ಣಗೊಳಿಸಲು ಭದ್ರಾನದಿ ಸೇತುವೆ ಪಕ್ಕದ ಮನೆಗಳನ್ನು ತೆರವುಗೊಳಿಸಬೇಕಿದೆ. ಅಲ್ಲಿರುವ ಕುಟುಂಬಗಳ ಸ್ಥಳಾಂತರಕ್ಕೆ ಈಗಾಗಲೇ ಕ್ರಮಕೈಗೊಂಡಿದ್ದು, ಅಕ್ಷರ ನಗರದ ಬಳಿಯಲ್ಲಿ ಜಾಗ ಗುರುತಿಸಿದೆ. ಶೀಘ್ರದಲ್ಲಿ ಅವರಿಗೆ ಹಕ್ಕುಪತ್ರ ನೀಡಿ ಸ್ಥಳಾಂತರ ಮಾಡಲು ಕ್ರಮವಹಿಸಲಾಗುವುದು.ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿರುವಲ್ಲಿ ಜಿಪಂ, ತಾಪಂ ಹಾಗೂ ಮುಖ್ಯಮಂತ್ರಿಗಳ ವಿಶೇಷ ಅನುದಾನ ಪಡೆದು ಅಭಿವೃದ್ಧಿಗೊಳಿಸಲಾಗುವುದು. ಗ್ರಾಮೀಣ ಭಾಗದಲ್ಲೂ ಗುಂಡಿ ಮುಚ್ಚುವ ಕೆಲಸ, ಜಂಗಲ್ ಕ್ಲಿಯರ್ ಮುಂತಾದವನ್ನು ಆದ್ಯತೆ ಮೇರೆಗೆ ನಡೆಸಲಾಗುವುದು. ಶೀಘ್ರದಲ್ಲಿ ನಡೆಯುವ ವಿಶೇಷ ಅಧಿವೇಶನದ ಸಂದರ್ಭದಲ್ಲಿ ಕಂದಾಯ, ಲೋಕೋಪಯೋಗಿ ಸಚಿವರನ್ನು ಭೇಟಿ ನೀಡಿ ಇಲ್ಲಿನ ರಸ್ತೆ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ಅಭಿವೃದ್ಧಿಗೆ ಅನುದಾನ ಕೋರಲಾಗುವುದು. ಹಲವು ಕಡೆಗಳಲ್ಲಿ ಜಲ ಜೀವನ್ ಮಿಷನ್ ಕಾಮಗಾರಿಯಲ್ಲಿ ಗುಣಮಟ್ಟವಿಲ್ಲ ಎಂಬ ದೂರು ಬಂದಿದ್ದು, ಈ ಬಗ್ಗೆ ಜಿಪಂ ಸಿಇಓ ಅವರಿಗೆ ತಿಳಿಸಿದ್ದು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಸೂಚಿಸ ಲಾಗಿದೆ. ಎನ್.ಆರ್.ಪುರ, ಕೊಪ್ಪ ತಾಲೂಕಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂ ರಾತಿ ಹಂತದಲ್ಲಿದ್ದು, ಶೀಘ್ರದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ, ಸದಸ್ಯರಾದ ಎಂ.ಎಸ್.ಅರುಣೇಶ್, ಅಂಬುಜಾ, ಬಿ.ಕೆ. ಮಧುಸೂದನ್, ಸಂತೋಷ್‌ಕುಮಾರ್, ಶಿವಪ್ಪ, ಶೇಖರ್, ಫಿಲೋಮಿನಾ, ಜಾನಕಿ ಪ್ರಮುಖರಾದ ಜಿ.ಎಂ.ನಟರಾಜ್, ಎಂ.ಎಸ್.ಜಯಪ್ರಕಾಶ್, ಜಾನ್ ಡಿಸೋಜಾ, ಚಂದ್ರಮ್ಮ, ಅರುಣ್‌ಕುಮಾರ್, ಕೌಶಿಕ್ ಪಟೇಲ್, ಕಾಫಿ ಗಿರೀಶ್ ಮತ್ತಿತರರು ಹಾಜರಿದ್ದರು.೨೦ಬಿಹೆಚ್‌ಆರ್ ೨:

ಬಾಳೆಹೊನ್ನೂರು ಪಟ್ಟಣದ ಪೇಟೆಕೆರೆ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಗುದ್ದಲಿ ಪೂಜೆ ನೆರವೇರಿಸಿದರು. ಶಾಸಕ ಟಿ.ಡಿ.ರಾಜೇಗೌಡ, ಎಂ.ಎಸ್.ಅರುಣೇಶ್, ಅಂಬುಜಾ, ಮಧುಸೂದನ್, ಸಂತೋಷ್, ಜಯಪ್ರಕಾಶ್, ಚಂದ್ರಮ್ಮ ಇದ್ದರು.