30 ಲಕ್ಷ ಮನೆಗಳಿಗೆ ರಾಮಮಂದಿರದ ಮಂತ್ರಾಕ್ಷತೆ

| Published : Dec 09 2023, 01:15 AM IST

30 ಲಕ್ಷ ಮನೆಗಳಿಗೆ ರಾಮಮಂದಿರದ ಮಂತ್ರಾಕ್ಷತೆ
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಾಗೂ ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತ ವತಿಯಿಂದ ಉತ್ತರ ಕರ್ನಾಟಕ ಭಾಗದ 14 ಜಿಲ್ಲೆಗಳ 11,080 ಗ್ರಾಮಗಳ 30 ಲಕ್ಷ ಮನೆಗಳಿಗೆ ರಾಮ ಮಂದಿರ ಮಂತ್ರಾಕ್ಷತೆ, ಭಾವಚಿತ್ರ ಹಾಗೂ ಆಮಂತ್ರಣ ಪತ್ರ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಾಗೂ ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತ ವತಿಯಿಂದ ಉತ್ತರ ಕರ್ನಾಟಕ ಭಾಗದ 14 ಜಿಲ್ಲೆಗಳ 11,080 ಗ್ರಾಮಗಳ 30 ಲಕ್ಷ ಮನೆಗಳಿಗೆ ರಾಮ ಮಂದಿರ ಮಂತ್ರಾಕ್ಷತೆ, ಭಾವಚಿತ್ರ ಹಾಗೂ ಆಮಂತ್ರಣ ಪತ್ರ ನೀಡಲಾಗುವುದು.

ವಿದ್ಯಾನಗರದಲ್ಲಿನ ವಿಶ್ವ ಹಿಂದೂ ಪರಿಷತ್ ಧರ್ಮಸಿರಿಯಲ್ಲಿ ಅಭಿಯಾನದ ಪ್ರಾಂತ ಸಂಯೋಜಕ ಕೃಷ್ಣಾ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ರಾಮ ಮಂದಿರ ನಿರ್ಮಾಣಕ್ಕೆ ಉತ್ತರ ಕರ್ನಾಟಕ ಭಾಗದ ಎಲ್ಲ ಗ್ರಾಮದ ಜನರು ದೇಣಿಗೆ ನೀಡಿದ್ದರು. ಅವರಿಗೆ ಕೃತಜ್ಞತೆ ಸಲ್ಲಿಸುವ ಮನೋಭಾವದಿಂದ ಆಮಂತ್ರಣ ಪತ್ರ ನೀಡಲಾಗುತ್ತಿದೆ ಎಂದು ತಿಳಿಸಿದರು.

ಈ ಅಭಿಯಾನದ ಸಿದ್ಧತೆ ಆರಂಭವಾಗಿದ್ದು, ಜ.1ರಿಂದ 15ರ ವರೆಗೆ ನಡೆಯಲಿದೆ. ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಪ್ರಮುಖ ಹಾಗೂ ಸಹ ಪ್ರಮುಖರಿಗೆ ಅಭಿಯಾನದ ಜವಾಬ್ದಾರಿ ನೀಡಲಾಗಿದೆ ಎಂದರು.

ಜ. 22ರಂದು ಬೆಳಗ್ಗೆ 11ಗಂಟೆಗೆ ಅಯೋಧ್ಯೆ ರಾಮ ಮಂದಿರ ನೆಲ ಮಹಡಿಯಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ನಿವಾಸ ಹತ್ತಿರದ ದೇವಸ್ಥಾನಗಳಲ್ಲಿ ರಾಮನ ಭಕ್ತಿ ಗೀತೆ, ಭಜನೆ, ರಾಮಾಯಣ, ರಾಮ ಮಂದಿರ ಹೋರಾಟದ ಬಗೆಗಿನ ವಿಚಾರಗಳ ಚರ್ಚೆ ನಡೆಸಬೇಕು ಎಂದು ಮನವಿ ಮಾಡಿದರು.

ಅಯೋಧ್ಯೆಯಲ್ಲಿ ನಡೆಯುವ ಮೂರ್ತಿ ಪ್ರತಿಷ್ಠಾಪನೆಯ ನೇರ ಪ್ರಸಾರ ವೀಕ್ಷಣೆಗೆ ದೇವಸ್ಥಾನಗಳಲ್ಲಿ ವ್ಯವಸ್ಥೆ ಮಾಡಿಕೊಳ್ಳಬೇಕು. ಅಂದು ಸಂಜೆ ಪ್ರತಿಯೊಂದು ಮನೆಯ ಮುಂದೆ ಐದು ದೀಪ ಹಚ್ಚಬೇಕು. ಯಾರೂ ಸಹ ರ‍್ಯಾಲಿ, ಪಟಾಕಿ ಸಿಡಿಸದೆ ಭಕ್ತಿ, ಆರಾಧನ ರೂಪಕವಾಗಿ ಸಂಭ್ರಮಿಸಬೇಕು. ಡಿ. 22ರಂದು ಕೇಶ್ವಾಪುರದಲ್ಲಿ ವಿಶ್ವ ಹಿಂದೂ ಪರಿಷತ್‌ನಿಂದ ರಾಮಮಂದಿರ ಮಂತ್ರಾಕ್ಷತೆ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.

ದೇಶದ 4ಸಾವಿರ ಸಂತರು ಭಾಗಿ:

ರಾಮಮಂದಿರ ಮೂರ್ತಿ ಪ್ರತಿಷ್ಠಾಪನೆಯ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ಹಾಗೂ ದೇಶದ 4 ಸಾವಿರ ಸಂತರು, 4 ಸಾವಿರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರು, ರಾಮಮಂದಿರ ಹೋರಾಟದಲ್ಲಿ ಹಾಗೂ ದೇಶದ ಹುತ್ಮಾತ್ಮ ಸೈನಿಕರ ಕುಟುಂಬದವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ರಾಮಮಂದಿರ ನಿರ್ಮಾಣಕ್ಕೆ ದೇಶದ 8 ಕೋಟಿ ಮನೆಗಳಿಂದ ದೇಣಿಗೆ ಸಂಗ್ರಹಿಸಲಾಗಿದೆ. ಇದು ₹3500 ಕೋಟಿ ಆಗಿದೆ. ಆದರೆ ಈಗ ನಡೆಸುಯತ್ತಿರುವ ಮಂತ್ರಾಕ್ಷತೆ ಅಭಿಯಾನಕ್ಕೆ ನಾವು ಯಾವುದೇ ದೇಣಿಗೆ ಸಂಗ್ರಹ ಮಾಡುತ್ತಿಲ್ಲ. ಆದರೆ, ಆಮಂತ್ರಣ ನೀಡಲು ಹೋದಾಗ ಭಕ್ತರು ದೇಣಿಗೆ ನೀಡಿದರೆ ಅದನ್ನು ಸಂಗ್ರಹಿಸಿ ಟ್ರಸ್ಟ್ ಬ್ಯಾಂಕ್ ಖಾತೆಗೆ ಹಾಕಲಾಗುವುದು. ಆಕಸ್ಮಾತ ರಾಮಮಂದಿರ ಹೆಸರಿನಲ್ಲಿ ಯಾರಾದರೂ ಹಣ ಸಂಗ್ರಹಿಸಿ ದುರುಪಯೋಗ ಪಡಿಸಿಕೊಂಡರೆ ಅವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತ ಉಪಾಧ್ಯಕ್ಷ ಗಂಗಾಧರ ಹೆಗಡೆ, ಕ್ಷೇತ್ರಿಯ ಧಾರ್ಮಿಕ ವಿಭಾಗ ಪ್ರಮುಖ ಬಸವರಾಜ, ಸುಭಾಸಸಿಂಗ್‌ ಜಮಾದಾರ, ರಮೇಶ್ ಕದಮ, ವಿಜಯ ಕ್ಷೀರಸಾಗರ ಇದ್ದರು.

ಚಾಲನೆ:

ಇದಕ್ಕೂ ಮೊದಲು ಮಂತ್ರಾಕ್ಷತೆ ಅಭಿಯಾನಕ್ಕೆ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು, ಮಾದಾರ ಚನ್ನಯ್ಯ ಸ್ವಾಮೀಜಿ ಚಾಲನೆ ನೀಡಿದರು. ಹುಬ್ಬಳ್ಳಿ ಮಾತಾಶ್ರಮದ ಮಾತಾ ತೇಜೋಮಯಿ ಮಾತೋಶ್ರೀ, ಹೊಸಪೇಟೆಯ ಚಿಂತಾಮಣಿ ಮಠದ ಶಿವಾನಂದ ಭಾರತಿ ಚಿಂತಾಮಣಿ ಸ್ವಾಮೀಜಿ, ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಗದಗದ ಶಿವಾನಂದ ಬೃಹನ್ಮಠದ ಸದಾಶಿವಾನಂದ ಸ್ವಾಮೀಜಿ ಇದ್ದರು.