ಅಳ್ವೆಕೋಡಿ ಮೀನುಗಾರರ ಸಹಕಾರಿ ಸಂಘಕ್ಕೆ ₹30 ಲಕ್ಷ ನಿವ್ವಳ ಲಾಭ

| Published : Jul 25 2024, 01:15 AM IST

ಸಾರಾಂಶ

ಸಂಘವು 2023- 24ನೇ ಸಾಲಿಗೆ ₹30.91 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ವಿಠ್ಠಲ್ ದೈಮನೆ ಹೇಳಿದರು.

ಕನ್ನಡಪ್ರಭ ವಾರ್ತೆ ಭಟ್ಕಳ

ಶಿರಾಲಿಯ ಅಳ್ವೆಕೋಡಿ ಮೀನುಗಾರರ ಸಹಕಾರಿ ಸಂಘದ 55ನೇ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ವಿಠ್ಠಲ್ ದೈಮನೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಅಧ್ಯಕ್ಷರು, ಸಂಘವು 2023- 24ನೇ ಸಾಲಿಗೆ ₹30.91 ಲಕ್ಷ ನಿವ್ವಳ ಲಾಭ ಗಳಿಸಿದೆ. ಸಂಘವು ₹98.22 ಲಕ್ಷ ಷೇರು ಬಂಡವಾಳ, ಕಾಯ್ದಿಟ್ಟ ಮತ್ತು ಇತರೆ ನಿಧಿಗಳು ₹307.27 ಲಕ್ಷ, ₹103.94 ಲಕ್ಷ ಠೇವಣಿ ಹೊಂದಿದ್ದು, ಸದಸ್ಯರಿಂದ ಬರತಕ್ಕೆ ಸಾಲ ₹872.61 ಲಕ್ಷ ಇದೆ. ಸಂಘವು ₹1455.17 ಲಕ್ಷ ದುಡಿಯವ ಬಂಡವಾಳ ಹೊಂದಿದ್ದು, ಷೇರುದಾರ ಸದಸ್ಯರಿಗೆ ಶೇ. 10ರಷ್ಟು ಲಾಭಾಂಶ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂದರು.

ಅಳ್ವೆಕೋಡಿ ಮೀನುಗಾರಿಕೆ ಬಂದರಿನಲ್ಲಿ ಮಂಜುಗಡ್ಡೆ ಘಟಕ ನಿರ್ಮಾಣ ನಡೆಯುತ್ತಿದ್ದು, ಮುಂದಿನ ತಿಂಗಳು ಇದು ಕಾರ್ಯಾರಂಭ ಮಾಡಲಿದೆ. ಅದರಂತೆ ಅಳ್ವೆಕೋಡಿ ಬಂದರಿನಲ್ಲಿರುವ ಸಂಘದ ಜಾಗದಲ್ಲಿ ಡೀಸೆಲ್ ಪಂಪ್ ಕೂಡ ನಿರ್ಮಿಸಲಾಗುತ್ತಿದ್ದು, ಸಂಘದ ಮತ್ತಷ್ಟು ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದರು.

ಸಭೆಯಲ್ಲಿ ಉಪಾಧ್ಯಕ್ಷ ಮಂಜು ಕೆ ಹರಿಕಂತ್ರ, ನಿರ್ದೇಶಕರಾದ ಭಾಸ್ಕರ ದೈಮನೆ, ಮಂಜುನಾಥ ಬಿ. ಮೊಗೇರ, ಜೈರಾಮ ಮೊಗೇರ, ಮಂಜುನಾಥ ಮೊಗೇರ, ದುರ್ಗಾದಾಸ ಮೊಗೇರ, ಕೇಶವ ಎಸ್. ಮೊಗೇರ, ಮೀನಾಕ್ಷಿ ಮೊಗೇರ, ರತ್ನಾ ಮೊಗೇರ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಾಹಕ ನಾರಾಯಣ ಮೊಗೇರ ಸ್ವಾಗತಿಸಿದರು. ಸಿಬ್ಬಂದಿ ರಾಮ ಎನ್ ಮೊಗೇರ ವಂದಿಸಿದರು.