ನಿವೇಶನ ರಹಿತರಿಂದ ಚೇರಳ ಶ್ರೀಮಂಗಲ ಗ್ರಾಮದ ಪೈಸಾರಿ ಜಾಗದಲ್ಲಿ 30 ಶೆಡ್ ಗಳು!

| Published : Apr 03 2025, 12:34 AM IST

ನಿವೇಶನ ರಹಿತರಿಂದ ಚೇರಳ ಶ್ರೀಮಂಗಲ ಗ್ರಾಮದ ಪೈಸಾರಿ ಜಾಗದಲ್ಲಿ 30 ಶೆಡ್ ಗಳು!
Share this Article
  • FB
  • TW
  • Linkdin
  • Email

ಸಾರಾಂಶ

ಪೈಸಾರಿ ಜಾಗದಲ್ಲಿ ನಿವೇಶನ ರಹಿತರು ಏಕಾಏಕಿ ಸುಮಾರು 30ಕ್ಕೂ ಅಧಿಕ ಶೆಡ್‌ಗಳನ್ನು ನಿರ್ಮಿಸಿಕೊಂಡು ತಮಗೆ ನಿವೇಶನ ನೀಡುವಂತೆ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇರಳ ಶ್ರೀಮಂಗಲ ಗ್ರಾಮದ ಪೈಸಾರಿ ಜಾಗದಲ್ಲಿ ನಿವೇಶನ ರಹಿತರು ಮಂಗಳವಾರ ಏಕಾಏಕಿ ಸುಮಾರು 30ಕ್ಕೂ ಅಧಿಕ ಶೆಡ್ ಗಳನ್ನು ನಿರ್ಮಿಸಿಕೊಂಡು ತಮಗೆ ನಿವೇಶನ ನೀಡುವಂತೆ ಆಗ್ರಹಿಸಿದ್ದಾರೆ.

ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯಿಂದ ಕಳೆದ ಏಳು ವರ್ಷದಿಂದಲೂ ಕೂಡ ನಿವೇಶನ ರಹಿತರಿಗೆ ಹಾಗೂ ಸಂತ್ರಸ್ತರಿಗೆ ಜಾಗ ನೀಡುವುದಾಗಿ ಹೇಳಿ ಈ ವರೆಗೂ ಜಾಗ ನೀಡಿಲ್ಲ. ಇದರಿಂದ ನಾವು ಈ ಜಾಗದಲ್ಲಿ ಶೆಡ್ ಗಳನ್ನು ನಿರ್ಮಿಸಿಕೊಂಡಿದ್ದೇವೆ. ನಮಗೆ ಜಾಗ ಹಂಚಿಕೆ ಮಾಡುವ ವರೆಗೂ ಇಲ್ಲೇ ಶೆಡ್ ನಿರ್ಮಿಸಿಕೊಂಡು ವಾಸ ಮಾಡುತ್ತೇವೆ ಎಂದು ನಿವೇಶನ ರಹಿತರು ಆರೋಪಿಸಿದ್ದಾರೆ.

ಸ್ಥಳಕ್ಕೆ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಪಿಡಿಒ, ಅಧ್ಯಕ್ಷರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ನಿವೇಶನ ರಹಿತರೊಂದಿಗೆ ಮಾತನಾಡಿದ ಅವರು, ಈ ಜಾಗ ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯ ಹೆಸರಿನಲ್ಲಿದೆ. 50 ಸೆಂಟ್ ಜಾಗ ಚೆಟ್ಟಳ್ಳಿ ಗ್ರಾಪಂ ಕಸ ವಿಲೇವಾರಿ ಘಟಕಕ್ಕೆ ಗುರುತು ಮಾಡಲಾಗಿದೆ ಎಂದು ಹೇಳಿದ್ದಾರೆ.

ಪ್ರಕೃತಿ ವಿಕೋಪ ಸಂತ್ರಸ್ತರ 8 ಕುಟುಂಬಗಳು ಸೇರಿದಂತೆ 30ಕ್ಕೂ ಅಧಿಕ ಮಂದಿ ಈಗ ಜಾಗದಲ್ಲಿ ಶೆಡ್ ಗಳನ್ನು ನಿರ್ಮಿಸಿಕೊಂಡಿದ್ದು, ಆದಷ್ಟು ಬೇಗ ನಮಗೆ ನಿವೇಶನ ನೀಡುವಂತೆ ಆಗ್ರಹಿಸಿದ್ದಾರೆ.