ಸಿಎಂ ಕಾರ್ಯಕ್ರಮಕ್ಕೆ ೩೦ ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ

| Published : Jan 29 2024, 01:33 AM IST

ಸಿಎಂ ಕಾರ್ಯಕ್ರಮಕ್ಕೆ ೩೦ ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಅಂದಾಜು ₹200 ಕೋಟಿಗೂ ಅಧಿಕ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ ಶಾಸಕ ಸಿ.ಎಸ್‌. ನಾಡಗೌಡ (ಅಪ್ಪಾಜಿ) ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ.2ರಂದು ಮುದ್ದೇಬಿಹಾಳಕ್ಕೆ ಆಗಮಿಸುತ್ತಿದ್ದು, ಮತಕ್ಷೇತ್ರದಿಂದ ಸುಮಾರು ೩೦ ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇಟ್ಟುಕೊಂಡು ಕಾರ್ಯಕ್ರಮದ ರೂಪುರೇಶೆಗಳನ್ನು ತಯಾರಿಸಲಾಗುತ್ತಿದೆ ಎಂದು ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಮತಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಆಗಮಿಸುತ್ತಿದ್ದಾರೆ. ಕವಡಿಮಟ್ಟಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣ, ₹೨೦೦ ಕೋಟಿಗೂ ಅಧಿಕ ಮೊತ್ತದ ರಸ್ತೆಗಳ ಅಭಿವೃದ್ಧಿ, ನೀರಾವರಿ ಇಲಾಖೆಯಿಂದ ವಿವಿಧ ಕೆಲಸಗಳು, ನೂತನ ಕೆಪಿಟಿಸಿಎಲ್ ಕಚೇರಿ ಕಟ್ಟಡ ಲೋಕಾರ್ಪಣೆ, ಸೋಷಿಯಲ್ ವೆಲ್ಪೇರ್ ಹಾಸ್ಟೆಲ್‌ಗಳ ಕಟ್ಟಡ, ಐಟಿಐ ಕಾಲೇಜು ಒಳಗೊಂಡು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.

ತಾಳಿಕೋಟೆ ತಾಲೂಕಿಗೆ ಸಂಬಂಧಿಸಿದ ಯಾವುದೇ ಅಭಿವೃದ್ದಿ ಕಾರ್ಯಕ್ರಮದ ಚಾಲನೆಯನ್ನು ಇದರಲ್ಲಿ ಅಳವಡಿಸಿಲ್ಲ. ಮುಂದಿನ ದಿನಗಳಲ್ಲಿ ತಾಳಿಕೋಟೆ ತಾಲೂಕಿಗೆ ಮತ್ತೇ ಪ್ರತ್ಯೇಕವಾಗಿ ಮುಖ್ಯಮಂತ್ರಿಗಳನ್ನು ಕರೆಸಿ ಬೂದಿಹಾಳ-ಪೀರಾಪೂರ ನೀರಾವರಿ ಯೋಜನೆ ವಿಸ್ತರಣೆ ಕಾಮಗಾರಿ, ನಾಗರಬೆಟ್ಟ ಏತ ನೀರಾವರಿ ಯೋಜನೆ, ತಾಳಿಕೋಟೆಗೆ ಕುಡಿಯುವ ನೀರು ಪೂರೈಸುವ ಮಾಳನೂರ ಕೆರೆ ಆಳ ಹೆಚ್ಚಿಸುವುದು, ಡೋಣಿ ನದಿ ಬ್ರಿಡ್ಜ್‌ ನಿರ್ಮಾಣ ಕಾಮಗಾರಿ ಒಳಗೊಂಡಂತೆ ಸಬ್ ರಿಜಿಸ್ಟರ್ ಕಚೇರಿ ಒಳಗೊಂಡಂತೆ ವಿವಿಧ ಕಚೇರಿಗಳ ಸ್ಥಾಪನೆ ಜೊತೆಗೆ ₹೧ ಸಾವಿರ ಕೋಟಿಗೂ ಅಧಿಕ ಅನೇಕ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.

ಗ್ಯಾರಂಟಿಯಿಂದ ಕ್ಷೇತ್ರದ ಲಕ್ಷಾಂತರ ಜನರಿಗೆ ಲಾಭ:

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಜಾರಿಗೆ ತಂದಿರುವ ೫ ಗ್ಯಾರಂಟಿ ಯೋಜನೆಗಳಿಂದ ಮುದ್ದೇಬಿಹಾಳ ಮತಕ್ಷೇತ್ರದ ಲಕ್ಷಾಂತರ ಜನರಿಗೆ ಇದರ ಲಾಭವಾಗಿದೆ ಎಂದರು. ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮಿಗೆ ಸಂಬಂಧಿಸಿ ೪೦,೯೨೪ ಕುಟುಂಬಗಳು, ಶಕ್ತಿಯೋಜನೆಗೆ ಬಸ್‌ನಲ್ಲಿ ಸಂಚಾರ ಮಾಡುವವರು ನನ್ನ ಕ್ಷೇತ್ರದಿಂದ ವರ್ಷಕ್ಕೆ ಸರಾಸರಿ ಸುಮಾರು ೯ ಲಕ್ಷ ಜನರು ಲಾಭ ಪಡೆದುಕೊಳ್ಳಲಿದ್ದಾರೆ. ಅನ್ನ ಭಾಗ್ಯ ಯೋಜನೆ, ನಿರುದ್ಯೋಗಿ ಯುವಕರಿಗೆ ಯುವನಿಧಿ ಯೋಜನೆಯ ಮೂಲಕ ಅವರಿಗೆ ಕೆಲಸ ಸಿಗುವವರೆಗೂ ಸಹಾಯಕ್ಕೆ ನಿಲ್ಲುವಂತಹ ಕೆಲಸಗಳನ್ನು ಮಾಡಲಾಗಿದೆ. ಇದರಿಂದ ಕ್ಷೇತ್ರದ ಲಕ್ಷಾಂತರ ಜನರಿಗೆ ಇಂತಹ ಬರಗಾಲದ ಸಮಯದಲ್ಲಿಯೂ ಮುಖದ ಮೇಲೆ ಮಂದಹಾಸವನ್ನು ಕಾಣುವಂತೆ ಸರ್ಕಾರದ ಕಾರ್ಯಕ್ರಮಗಳು ಮಾಡಿವೆ ಎಂದು ಹೇಳಿದರು.

ಈ ಸಮಯದಲ್ಲಿ ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಶರಣುಧನಿ ದೇಶಮುಖ, ಪ್ರಭುಗೌಡ ಮದರಕಲ್ಲ, ಅಕ್ಕಮಹಾದೇವಿ ಕಟ್ಟಿಮನಿ, ಸಿದ್ದನಗೌಡ ಪಾಟೀಲ(ನಾವದಗಿ), ಬಸನಗೌಡ ಜೈನಾಪೂರ, ಮೈಹಿಬೂಬ ಕೇಂಭಾವಿ, ಶಿವನಗೌಡ ತಾಳಿಕೋಟಿ, ವಿರೇಶಗೌಡ ಅಸ್ಕಿ, ಸಂಗನಗೌಡ ಅಸ್ಕಿ, ಎ.ಡಿ.ಏಕೀನ್, ಮುಸ್ತಫಾ ಚೌದ್ರಿ, ಮೊದಲಾದವರು ಉಪಸ್ಥಿತರಿದ್ದರು.

-------

ವರ್ತಕರಲ್ಲಿ ಶಾಸಕರ ಮನವಿ

ಪಟ್ಟಣದ ಎಪಿಎಂಸಿ ವರ್ತಕರ ಸಭಾಭವನದಲ್ಲಿ ಕರೆಯಲಾದ ಸಭೆಯಲ್ಲಿ ಶಾಸಕ ಸಿ.ಎಸ್.ನಾಡಗೌಡ ಅವರು ಎಲ್ಲ ಎಪಿಎಂಸಿ ವರ್ತಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುದ್ದೇಬಿಹಾಳಕ್ಕೆ ಆಗಮಿಸುತ್ತಿರುವ ವಿಷಯವನ್ನು ಪ್ರಸ್ತಾಪಿಸಿದರು. ಅಲ್ಲದೇ ಅಂದಿನ ಕಾರ್ಯಕ್ರಮಕ್ಕೆ ಎಲ್ಲ ವರ್ತಕ ಬಂದುಗಳು ಪಕ್ಷ ಬೇಧ ಮರೆತು ಆಗಮಿಸಬೇಕೆಂದು ಮನವಿ ಮಾಡಿದರು.

--------

ಕೋಟ್‌....

ಚುನಾವಣೆ ವೇಳೆ ಮಾತ್ರ ರಾಜಕಾರಣ ಚುನಾವಣೆ. ನಂತರ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವಂತಹ ಕೆಲಸ ನಾನು ಯಾವತ್ತಿಗೂ ಮಾಡುತ್ತಾ ಬಂದಿದ್ದೇನೆ. ಯಾವುದೇ ಪಕ್ಷದಲ್ಲಿ ಯಾರೇ ಓಡಾಡಿದರೂ ಅವರು ನನ್ನವರಲ್ಲ ಎಂದು ಹೇಳಲ್ಲ. ಎಲ್ಲರೂ ನಮ್ಮವರೇ ಆಗಿದ್ದಾರೆ. ನನಗೆ ಯಾರ ಮೇಲೂ ಅಸೂಯೆ ಭಾವನೆ ಇಲ್ಲ. ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಪಕ್ಷಬೇಧ ಮರೆತು ಎಲ್ಲರೂ ಆಗಮಿಸಬೇಕು.

- ಸಿ.ಎಸ್‌.ನಾಡಗೌಡ (ಅಪ್ಪಾಜಿ), ಶಾಸಕರು