ಸಂಘಟಕರ ನಿರೀಕ್ಷೆ ಹುಸಿಯಾಗಿಸಿದ ಶೋಷಿತರ ಜಾಗೃತಿ ಸಮಾವೇಶ

| Published : Jan 29 2024, 01:32 AM IST

ಸಂಘಟಕರ ನಿರೀಕ್ಷೆ ಹುಸಿಯಾಗಿಸಿದ ಶೋಷಿತರ ಜಾಗೃತಿ ಸಮಾವೇಶ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗದಲ್ಲಿ ಭಾನುವಾರ ಆಯೋಜಿಸಿದ್ದ ಶೋಷಿತರ ಜಾಗೃತಿ ಸಮಾವೇಶ ಸಂಘಟಕರ ನಿರೀಕ್ಷೆಗಳ ಹುಸಿಯಾಗಿಸಿತ್ತು. ಐದು ಲಕ್ಷ ಮಂದಿ ಜಮಾವಣೆಗೊಳ್ಳುವರೆಂಬ ಅಂದಾಜು ಒಂದುವರೆ ಲಕ್ಷ ದಾಟಲಿಲ್ಲ. ಕಳೆದ ಒಂದು ತಿಂಗಳಿಂದ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಹೆಸರಲ್ಲಿ ಸಮಾವೇಶ ಸಂಘಟಿಸಲಾಗಿತ್ತಾದರೂ ನೋಡುಗರಿಗೆ ಕಾಂಗ್ರೆಸ್ ಸಮಾವೇಶದಂತೆ ಕಂಡು ಬಂತು.

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಭಾನುವಾರ ಆಯೋಜಿಸಿದ್ದ ಶೋಷಿತರ ಜಾಗೃತಿ ಸಮಾವೇಶ ಸಂಘಟಕರ ನಿರೀಕ್ಷೆಗಳ ಹುಸಿಯಾಗಿಸಿತ್ತು. ಐದು ಲಕ್ಷ ಮಂದಿ ಜಮಾವಣೆಗೊಳ್ಳುವರೆಂಬ ಅಂದಾಜು ಒಂದುವರೆ ಲಕ್ಷ ದಾಟಲಿಲ್ಲ. ಕಳೆದ ಒಂದು ತಿಂಗಳಿಂದ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಹೆಸರಲ್ಲಿ ಸಮಾವೇಶ ಸಂಘಟಿಸಲಾಗಿತ್ತಾದರೂ ನೋಡುಗರಿಗೆ ಕಾಂಗ್ರೆಸ್ ಸಮಾವೇಶದಂತೆ ಕಂಡು ಬಂತು. ಆಮ್ ಆದ್ಮಿಪಕ್ಷದ ಮುಖ್ಯಮಂತ್ರಿ ಚಂದ್ರು ಹೊರತು ಪಡಿಸಿ ವೇದಿಕೆ ಹಾಗೂ ವೇದಿಕೆ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ತುಂಬಿ ತುಳುಕಾಡಿದರು.

ಬೆಳಗ್ಗೆ 11 ಗಂಟೆಗೆ ಸಿಎಂ ಸಿದ್ದರಾಮಯ್ಯ ಸಮಾವೇಶಕ್ಕೆ ಚಾಲನೆ ನೀಡಬೇಕಿತ್ತು. ಆದರೆ ಅವರು ಬರೋಬ್ಬರಿ 2 ತಾಸು ತಡವಾಗಿ ಬಂದರು. ಸಿದ್ದರಾಮಯ್ಯ ವೇದಿಕೆ ಏರಿದಾಗ ಸಮಯ 1.10 ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡಾ 12.40ಕ್ಕೆ ಆಗಮಿಸಿದರು. ಇದರಿಂದಾಗಿ ರಾಜ್ಯದ ವಿವಿದ ಮೂಲೆಗಳಿಂದ ಆಗಮಿಸಿದ್ದ ಜನರು ನಾಯಕರ ಕಾದು ಸುಸ್ತಾದರು. ಒಂದು ಗಂಟೆ ಸುಮಾರಿಗೆ ಕಾರ್ಯಕ್ರಮ ಸಂಘಟಕರು ಸಿಎಂ ಸಿದ್ದರಾಮಯ್ಯ ಬರುವುದರ ಒಳಗೆ ಎಲ್ಲರೂ ಊಟ ಮಾಡಿಕೊಂಡು ಬನ್ನಿ. ಚಿಕನ್ ಬಿರಿಯಾನಿ ಇದೆ, ವೆಜ್ ಇದೆ. ಸಮಾಧಾನವಾಗಿ ಊಟ ಮಾಡಿ ಬನ್ನಿ ಎಂಬ ಸಂದೇಶ ರವಾನಿಸಿದ್ದರಿಂದ ಜನರ ಚಿತ್ತ ಬಿರಿಯಾನಿಯತ್ತ ಹೊರಳಿತು.

ಇದು ಪಕ್ಷದ ಸಮಾವೇಶವಲ್ಲ, ಶೋಷಿತ ಸಮುದಾಯದವರಿಗೆ ಸಂಬಂಧಿಸಿದ್ದೆಂತು ಸಿಎಂ ಸೇರಿದಂತೆ ಹಲವರು ಸ್ಫಷ್ಟನೆ ನೀಡಿದರೂ ಭಾಷಣ ಮಾಡಿದ ಪ್ರಮುಖರೆಲ್ಲರೂ ಗ್ಯಾರಂಟಿಗಳ ಬಗ್ಗೆ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವಂತೆ ಮನವಿ ಮಾಡಿದ್ದು ಕಾಂಗ್ರೆಸ್ ಶೋಷಿತರ ಸಮಾವೇಶವಾಗಿ ಗೋಚರಿಸಿತು.

ಕೋಟೆನಾಡು ಚಿತ್ರದುರ್ಗದಲ್ಲಿ ಇಂದು ಶೋಷಿತರ ಸಮಾವೇಶ

ಸಮಾವೇಶದಲ್ಲಿ 5ಲಕ್ಷ ಜನ ಸೇರುವ ನಿರೀಕ್ಷೆ ಇಟ್ಟುಕೊಂಡಿದ್ದ ಸಂಘಟಕರು 150 ಎಕರೆ ಪ್ರದೇಶದಲ್ಲಿ ವೇದಿಕೆ ಸಿದ್ಧತೆಗೊಳಿಸಿದ್ದರು. ಮುಖ್ಯ ವೇದಿಕೆಯಲ್ಲಿ 270 ಆಸನ ವ್ಯವಸ್ಥೆ ಮಾಡಿದ್ದರು. ಇದಲ್ಲದೇ ಎಡ ಮತ್ತು ಬಲ‌ ಬದಿಯ ವೇದಿಕೆಯಲ್ಲಿ ತಲಾ 150 ಆಸನ ವ್ಯವಸ್ಥೆ ಮಾಡಲಾಗಿತ್ತು. ಅಚ್ಚರಿ ಎಂದರೆ ಆರಂಭದಲ್ಲಿ ವೇದಿಕೆಯ ಎಡ ಮತ್ತು ಬಲಭಾಗದಲ್ಲಿ ಕುಳಿತವರು ಸಿದ್ದರಾಮಯ್ಯ ಬಂದ ತಕ್ಷಣ ಎದ್ದು ಬಂದು ಪ್ರಮುಖ ವೇದಿಕೆಯಲ್ಲಿ ಆಸೀನರಾದರು. ಇದರಿಂದಾಗಿ ಎರಡೂ ಭಾಗದಲ್ಲಿದ್ದ ವೇದಿಕೆ ತುಸು ಹೊತ್ತು ಖಾಲಿಯಾಗಿದ್ದವು.ಜನ ವೀಕ್ಷಣೆಗೆ 22 ಎಲ್ ಇಡಿ ಪರದೆ,ಸಮಾವೇಶಕ್ಕೆ ಬರುವ ಜನರಿಗೆ ಆಹಾರ, ನೀರಿನ ವ್ಯವಸ್ಥೆ ಅಚ್ಚುಕಟ್ಟಾಗಿತ್ತಾದರೂ ಜನ, ವಾಹನ ಓಡಾಡಿದಾಗ ಮೇಲೆಳುತ್ತಿದ್ದ ಧೂಳು ಅಸಹನೀಯ ಸೃಷ್ಟಿಸಿತ್ತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಐದು ನೂರಕ್ಕೂ ಹೆಚ್ಚು ಬಸ್ಸುಗಳು ಬಂದಿದ್ದರಿಂದ ಅವುಗಳ ನಿಲುಗಡೆ ಸಮಸ್ಯೆಯಾಗಿತ್ತು. ಜಿಲ್ಲಾಡಳಿತ ಮಾರ್ಗ ಬದಲಾವಣೆ ಮಾಡಿ ಮುರುಘಾಮಠದಿಂದ ಸೀಬಾರ ಅಂಡರ್ ಬ್ರಿಡ್ಜ್ ವರೆಗೆ ವಾಹನ ಸಂಚಾರ ನಿಷೇಧ ಮಾಡಿ್ದ್ದರಿಂದ ವೇದಿಕೆಗೆ ಬರುವವರು ಒಂದು ಕಿಮೀ ಹೆಚ್ಚು ಹಾದಿ ಸವೆಸಬೇಕಾಗಿತ್ತು.

32 ಸಾವಿರ ಕೆಜಿ ಚಿಕನ್: ಸಮಾವೇಶಕ್ಕೆ ಆಗಮಿಸುವವರಿಗೆ ಭರ್ಜರಿ ಬಾಡೂಟ ವ್ಯವಸ್ಥೆ ಇದೆ ಎಂದು ಸಂಘಟಕರು ಮೊದಲೇ ಪ್ರಕಟಿಸಿದ್ದರು ಇದಕ್ಕಾಗಿ

32ಸಾವಿರ ಕೆಜಿ ಚಿಕನ್ ಬಿರಿಯಾನಿ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕಾಗಿ 600ಕ್ಕೂ ಹೆಚ್ಚು ಜನ ಬಾಣಸಿಗರಿಂದ ಬಿರಿಯಾನಿ ತಯಾರಿಸಿದ್ದರು. ಒಂದು ಸಾವಿರ ಕೌಂಟರ್ ಗಳಲ್ಲಿ ಬಿರಿಯಾನಿ, ಪಲಾವ್ ವಿತರಣೆ ಮಾಡಲಾಯಿತು.ಸಮಾವೇಶಕ್ಕೆ ಬಂದು ಕುರ್ಚಿಯಲ್ಲಿ ಆಸೀನರಾದವರು, ಬಿರಿಯಾನಿ ವಾಸನೆಗೆ ಮೇಲೆದ್ದು ಹೋಗಿ ಮತ್ತೆ ವಾಪಸ್ಸು ಮರಳಲೇ ಇಲ್ಲ. ಹಾಗೆಯೇ ಬಸ್ಸುಗಳ ಹತ್ತಿಕೊಂಡು ಊರುಗಳಿಗೆ ವಾಪಾಸ್ಸಾದರು.

ಮನವಿ ಸ್ವೀಕರಿಸದ ಸಿಎಂ: ಮುಖ್ಯಮಂತ್ರಿ ಬರುತ್ತಾರೆಂಬ ಕಾರಣಕ್ಕೆ ಹಲವು ಸಂಘಟನೆಗಳು ಮನವಿ ನೀಡಿ ಸಮಸ್ಯೆ ನಿವೇದಿಸಿಕೊಳ್ಳಲು ಮುಂದಾಗಿದ್ದರು. ಇದಕ್ಕಾಗಿ ಹೆಲಿಪ್ಯಾಡ್ ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಎರಡು ತಾಸು ತಡವಾಗಿ ಆಗಮಿಸಿದ ಸಿಎಂ ಸಿದ್ದರಾಮಯ್ಯ ಮಾಧ್ಯಮದವರ ಜೊತೆ ಮಾತನಾಡಿದ ನಂತರ ನೇರವಾಗಿ ವೇದಿಕೆಯತ್ತ ತೆರಳಿದರು. ಮನವಿ ಸ್ವೀಕರಿಸಲಿಲ್ಲ. ಇದರಿಂದ ಸಿಟ್ಟಿಗೆದ್ದ ಸಂಘಟನೆಗಳ ವಕ್ತಾರರು ಧಿಕ್ಕಾರದ ಘೋಷಣೆ ಕೂಗಿದರು.

ಶೋಷಿತರ ಸಮಾವೇಶಕ್ಕೆ ಬಂದು ಶೋಷಿತರ ಮನವಿ‌ ಸ್ವೀಕರಿಸಿಲ್ಲ‌. ಸಿಎಂಗೆ ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಶಾಸಕರಿಗೆ ಕಳಕಳಿಯೇ ಇಲ್ಲ.

ಕಳೆದ ಮೂರು ದಿನಗಳ ಹಿಂದೆ ಸಿಎಂಗೆ ಅರ್ಜಿ ಸಲ್ಲಿಸಲು ಹೆಸರು‌ ಪಡೆದು ಅರ್ಜಿ ಪಡೆಯಲಿಲ್ಲ ಎಂದು ಸಂಘಟಕರು ದೂರಿದರು. ಸುಮಾರು 23 ಸಂಘಟನೆಯ ನೂರಕ್ಕೂ ಹೆಚ್ಚು ಜನರಿಂದ ಧಿಕ್ಕಾರದ ಘೋಷಣೆ ಕೂಗಿದರು.