ಮೋದಿ ಗ್ಯಾರಂಟಿ ಬೇಕೆಂದು ಜನ ನಿರ್ಧರಿಸಿದ್ದಾರೆ: ಬಿ.ವೈ. ವಿಜಯೇಂದ್ರ

| Published : Jan 29 2024, 01:32 AM IST

ಮೋದಿ ಗ್ಯಾರಂಟಿ ಬೇಕೆಂದು ಜನ ನಿರ್ಧರಿಸಿದ್ದಾರೆ: ಬಿ.ವೈ. ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ 28 ಸ್ಥಾನಗಳಲ್ಲಿ ಬಿಜೆಪಿ ಗೆಲವು ಸಾಧಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಸ್ಥಳೀಯ ರಾಜೇಂದ್ರ ಗಂಜ್ ಕಲ್ಯಾಣ ಮಂಟಪದಲ್ಲಿ ಭಾನುವಾರ ಪಕ್ಷದ ಜಿಲ್ಲಾಮಟ್ಟದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಕಾಂಗ್ರೆಸ್‌ ಮೋಸದ ಐದು ಗ್ಯಾರಂಟಿಗಿಂತಲೂ ಮೋದಿ ಗ್ಯಾರಂಟಿ ಬೇಕು ಎನ್ನುವ ನಿರ್ಧಾರಕ್ಕೆ ಜನರು ಬಂದಿದ್ದಾರೆ. ಇದು ಬಿಜೆಪಿಯಲ್ಲಿ ರಣೋತ್ಸಾಹವನ್ನು ಹೆಚ್ಚಿಸಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿನ ಎಲ್ಲ 28 ಸ್ಥಾನಗಳಲ್ಲಿ ಬಿಜೆಪಿ ಗೆಲವು ಸಾಧಿಸುವ ವಿಶ್ವಾಸವಿದ್ದು, ಆ ನಿಟ್ಟಿನಲ್ಲಿ ಕಾರ್ಯಕರ್ತರು ಜವಾಬ್ದಾರಿಯುತವಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಸ್ಥಳೀಯ ರಾಜೇಂದ್ರ ಗಂಜ್ ಕಲ್ಯಾಣ ಮಂಟಪದಲ್ಲಿ ಭಾನುವಾರ ಪಕ್ಷದ ಜಿಲ್ಲಾಮಟ್ಟದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ನಾಲ್ಕು ದಶಕಕ್ಕು ಹೆಚ್ಚು ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ದೇಶದ ಅಭಿವೃದ್ಧಿ ಮಾಡದೇ ಕುಟುಂಬ ರಾಜಕರಣ ಮಾಡಿದೆ. ನರೇಂದ್ರ ಮೋದಿಯವರು 9 ವರ್ಷದ ಅವಧಿಯಲ್ಲಿ ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದ್ದಾರೆ. ಮೂರನೇ ಬಾರಿಗೆ ಪ್ರಧಾನಿಯಾಗಲು ಕಾರ್ಯಕರ್ತರು ಹಗಲಿರುಳು ಕೆಲಸ ಮಾಡಬೇಕು ಎಂದು ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಆಸೆ ತೋರಿಸಿ ಅಧಿಕಾರ ಪಡೆದಿದ್ದಾರೆ. ಆದರೆ ಅದನ್ನು ಸಮರ್ಪಕ ಜಾರಿ ಮಾಡಿಲ್ಲ. ಕಾಂಗ್ರೆಸ್‌ನ ಮೋಸದ ಗ್ಯಾರಂಟಿಗಳನ್ನು ಜನ ಅರಿತಿದ್ದು, ಇಂತಹ ಸಮಯದಲ್ಲಿ ಪಕ್ಷದ ಕಾರ್ಯಕರ್ತರ ಜವಾಬ್ದಾರಿ ಹೆಚ್ಚಿದ್ದು, ಕಾಂಗ್ರೆಸ್‌ನ ಮೋಸ, ಮೋದಿಯ ಸಾಧನೆಗಳನ್ನು ಮನೆ ಮನೆಗೆ ತಿಳಿಸಿ ಜನರನ್ನು ಜಾಗೃತಿಗೊಳಿಸುವ ಕೆಲಸವನ್ನು ಮಾಡಬೇಕು ಎಂದರು.

ಮೋಸದ ಗ್ಯಾರಂಟಿಗಳಿಂದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ನಾಯಕರು ಭ್ರಮೆಯಲ್ಲಿದ್ದು, ಪಂಚರಾಜ್ಯ ಚುನಾವಣೆ ಫಲಿತಾಂಶದಿಂದ ದಂಗಾಗಿದ್ದಾರೆ. ಕೇಂದ್ರದಲ್ಲಿ ಮೋದಿ ಗ್ಯಾರಂಟಿಗೆ ಜನ ಮರಳಾಗಿದ್ದು ಮತ್ತೊಮ್ಮೆ ಅವರು ಪ್ರಧಾನಿಯಾಗಲಿದ್ದಾರೆ. ಕಾರ್ಯಕರ್ತರು ಉತ್ಸಾಹದಿಂದ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು. ಸಿದ್ದರಾಮಯ್ಯ ಅಹಿಂದ ನಾಯಕರಾಗಿ ಉಳಿದಿಲ್ಲ

ಸಿಎಂ ಸಿದ್ದರಾಮಯ್ಯ ಅಹಿಂದವನ್ನು ಪಕ್ಕಕ್ಕಿಟ್ಟು, ಅಲ್ಪಸಂಖ್ಯಾತರ ಹಿಂದೆ ಬಿದಿದ್ದಾರೆ. ಕಳೆದ ಚುನಾವಣೆಯಲ್ಲಿ ಅಹಿಂದ ವರ್ಗದಿಂದ ಅವರು ಗೆದಿದ್ದಲ್ಲ, ಅಲ್ಪಸಂಖ್ಯಾತರ ವೋಟುಗಳಿಂದ ಅಧಿಕಾರ ಹಿಡಿದಿದ್ದಾರೆ. ಅಹಿಂದ ನಾಯಕ ಪಟ್ಟವನ್ನು ಅವರು ಕಳಚಿಕೊಂಡು ಬಹಳ ದಿನಗಳಾಗಿದ್ದು, ಇದೀಗ ಸಿದ್ದರಾಮಯ್ಯ ಕೇವಲ ಅಲ್ಪಸಂಖ್ಯಾತರ ನಾಯಕರಾಗಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ 8 ತಿಂಗಳಾದರೂ ಒಂದು ಹೊಸ ಯೋಜನೆ ಜಾರಿಯಾಗಿಲ್ಲ. ವಿಧಾನಸಭಾ ಕ್ಷೇತ್ರಗಳಿಗೆ ನಯಾ ಪೈಸೆ ಅನುದಾನ ಬಿಡುಗಡೆ ಮಾಡಿಲ್ಲ. ಬರ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ. ಹಿಂದು ಕಾರ್ಯಕರ್ತರ ಮೇಲೆ ದರ್ಪ ತೋರಿಸುತ್ತಿದೆ. ಶಾಂತಿ ಸುವ್ಯವಸ್ಥೆ ಕಾಪಾಡದೇ ಅರಾಜಕತೆ ಸೃಷ್ಠಿಯಾಗಿದೆ ಎಂದು ಆರೋಪಿಸಿದರು.

ಸಮಾವೇಶದಲ್ಲಿ ಸಂಸದರಾದ ರಾಜಾ ಅಮರೇಶ್ವರ ನಾಯಕ, ಕರಡಿ ಸಂಗಣ್ಣ, ಪ್ರತಾಪಗೌಡ ಪಾಟೀಲ್,ಬಿ.ವಿ ನಾಯಕ ಅವರು ಮಾತನಾಡಿದರು.

ಮಾಜಿ ಶಾಸಕರಾದ ರಾಜುಗೌಡ, ಮುಖಂಡರಾದ ಪಿ.ರಾಜು, ಎ.ಪಾಪಾರೆಡ್ಡಿ, ರವೀಂದ್ರ ಜಲ್ದಾರ್‌, ಪಿ.ಗೋವಿಂದ, ಎ.ಚಂದ್ರಶೇಖರ ಸೇರಿದಂತೆ ಪಕ್ಷದ ವಿವಿಧ ಮೋರ್ಚಾಗಳ ಪ್ರಮುಖರು, ಪದಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು ಇದ್ದರು. ಶಾಸಕ ಡಾ.ಶಿವರಾಜ ಪಾಟೀಲ ಸ್ವಾಗತಿಸಿದರು. ಶಂಕರರೆಡ್ಡಿ ನಿರೂಪಿಸಿದರು.