ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದ ಬಸವೇಶ್ವರ ಸರ್ಕಾರಿ ಪಪೂ ಕಾಲೇಜು ಆವರಣದಲ್ಲಿ ಕಂದಾಯ ಇಲಾಖೆಯು ಗಣರಾಜ್ಯೋತ್ಸವದ ಅಂಗವಾಗಿ ಎರಡು ದಿನಗಳ ಕಾಲ ವಿವಿಧ ಇಲಾಖೆಗಳ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಹಣಾಹಣಿಯಲ್ಲಿ ಹೆಸ್ಕಾಂ ತಂಡವನ್ನು ಮಣಿಸಿ ಪೊಲೀಸ್ ಇಲಾಖೆಯು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು.ಫೈನಲ್ ಪಂದ್ಯವು ಪೊಲೀಸ್ ಇಲಾಖೆ ತಂಡ ಹಾಗೂ ಹೆಸ್ಕಾಂ ಇಲಾಖೆಯ ತಂಡದೊಂದಿಗೆ ರೋಚಕವಾಗಿ ಜರುಗಿತು. ಅಂತಿಮವಾಗಿ ಪೊಲೀಸ್ ಇಲಾಖೆಯ ತಂಡ ೯ ರನ್‌ಗಳಿಂದ ಜಯಭೇರಿ ಸಾಧಿಸಿ ವಿಜಯದ ನಗೆ ಬೀರಿತು. ಪೊಲೀಸ್ ಇಲಾಖೆಯ ತಂಡ ಗೆಲುವು ಸಾಧಿಸುತ್ತಿದ್ದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿ ಕೇಕೇ ಹಾಕಿ ಕುಣಿದು ಕುಪ್ಪಳಿಸಿ ಪಟಾಕ್ಷಿ ಸಿಡಿಸಿ ಸಂಭ್ರಮ ಪಟ್ಟರು.
ಸೆಮಿ-ಫೈನಲ್ ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆ ಹೋರಾಟ ನಡೆದಿತ್ತು. ಇನ್ನೊಂದು ಸೆಮಿಫೈನಲ್‌ದಲ್ಲಿ ಹೆಸ್ಕಾಂ ಇಲಾಖೆ ಮತ್ತು ಕೆಎಸ್‌ಆರ್‌ಟಿಸಿ ನಡುವೆ ಹೋರಾಟದಲ್ಲಿ ಹೆಸ್ಕಾಂ ವಿಜಯಶಾಲಿಯಾಗಿತ್ತು.ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರು ಫೈನಲ್ ಪಂದ್ಯದಲ್ಲಿ ವಿಜೇತ ತಂಡಗಳಿಗೆ ಟ್ರೋಫಿ ವಿತರಿಸಿದರು. ಈ ಸಂದರ್ಭದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ಆದರ್ಶ ಶಿಕ್ಷಕರ ವೇದಿಕೆಯ ಜಿಲ್ಲಾಧ್ಯಕ್ಷ ಉಮೇಶ ಕವಲಗಿ, ಮುಖ್ಯಗುರುಗಳ ಸಂಘದ ಅಧ್ಯಕ್ಷ ಎಂ.ಬಿ.ತೋಟದ, ಸೇವಾದಳದ ಎಸ್.ಬಿ.ಗುಡದಿನ್ನಿ, ಶಿಕ್ಷಕರ ಸೊಸೈಟಿ ನಿರ್ದೇಶಕ ಹೊನ್ನಪ್ಪ ಗೊಳಸಂಗಿ, ಶಿವಾನಂದ ಮಡಿಕೇಶ್ವರ, ಪಂದ್ಯ ಆಯೋಜಕರಾದ ಶಿರಸ್ತೇದಾರ ಮಹೇಶ ಬಳಗಾನೂರ, ವಿಠ್ಠಲ ಅಥರ್ಗಾ, ನಿರ್ಣಾಯಕರಾಗಿ ಪ್ರಶಾಂತ ಪಾಟೀಲ, ಶ್ರೀಶೈಲ ಮಾನೆ, ರಾಹುಲ ಪಾಟೀಲ, ಸರ್ಕಾರಿ ಅಭಿಯೋಜಕ ಸದಾನಂದ ಬಶೆಟ್ಟಿ, ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ, ಆರೋಗ್ಯ ಇಲಾಖೆಯ ರಾಜಶೇಖರ ಚಿಂಚೋಳಿ ಇತರರು ಇದ್ದರು. ಶಿವಾನಂದ ಮಡಿಕೇಶ್ವರ ಸ್ವಾಗತಿಸಿ, ನಿರೂಪಿಸಿದರು.