ಸಾರಾಂಶ
ಲಿಂಗರಾಜು ಕೋರ
ಬೆಂಗಳೂರು : ಕಳೆದ ಐದು ದಶಕಗಳಿಂದ ರಾಜ್ಯದಲ್ಲಿ ಅಧಿಕಾರ ನಡೆಸಿದ ಹಲವು ಸರ್ಕಾರಗಳು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ ಭೂಮಿಯನ್ನು ಬೇರೆ ಬೇರೆ ಸಂಸ್ಥೆಗಳಿಗೆ ಹರಿದು ಹಂಚುತ್ತಾ ಬರುತ್ತಿರುವುದರಿಂದ ವಿಶ್ವವಿದ್ಯಾಲಯದ ಕೈತಪ್ಪಿದ ಜಾಗದ ವಿಸ್ತೀರ್ಣ ಇದೀಗ 300 ಎಕರೆ ಗಡಿ ದಾಟಿದೆ. ಅಲ್ಲದೆ ಇನ್ನೂ 75 ಎಕರೆಯಷ್ಟು ಜಾಗ ಖಾಸಗಿಯವರಿಂದ ಒತ್ತುವರಿಗೆ ಒಳಗಾಗಿದೆ.
1964ರಲ್ಲಿ ಅಸ್ಥಿತ್ವಕ್ಕೆ ಬಂದ ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ 1973ರಲ್ಲಿ ನಗರದ ಮೈಸೂರು ರಸ್ತೆಯ ಪಕ್ಕದಲ್ಲೇ ಸುಮಾರು 1100 ಎಕರೆಯಷ್ಟು ವಿಸ್ತಾರವಾದ ಜಾಗ ಒದಗಿಸಿ ಅದಕ್ಕೆ ಜ್ಞಾನಭಾರತಿ ಕ್ಯಾಂಪಸ್ ಎಂದು ನಾಮಕರಣ ಮಾಡಿ ಅಂದಿನ ಸರ್ಕಾರ ಸ್ಥಳಾಂತರಿಸಿತ್ತು. ಆ ನಂತರ ಬಂದ ಹಲವು ಸರ್ಕಾರಗಳು ಬೆಂ.ವಿವಿಯ ಕ್ಯಾಂಪಸ್ ಜಾಗವನ್ನು ಬೇರೆ ಬೇರೆ ಶಿಕ್ಷಣ ಸಂಸ್ಥೆಗಳಿಗೆ ನೀಡುತ್ತಲೇ ಬರುತ್ತಿವೆ.
ಈ ರೀತಿ ನೀಡಿದ ಜಾಗ ಇದುವರೆಗೆ 297 ಎಕರೆಯಷ್ಟಿತ್ತು. ಇದೀಗ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಗೆ ಈ ಹಿಂದೆ ನೀಡಿದ್ದ 23 ಎಕರೆ ಜೊತೆಗೆ ಹಾಲಿ ಸರ್ಕಾರ ಕೂಡ ಇನ್ನೂ 7 ಎಕರೆ ಹೆಚ್ಚುವರಿ ಭೂಮಿ ನೀಡಲು ತೀರ್ಮಾನಿಸಿದೆ. ಇದರಿಂದ ಬೆಂಗಳೂರು ವಿಶ್ವವಿದ್ಯಾಲಯದಿಂದ ಕೈತಪ್ಪಿದ ಕ್ಯಾಂಪಸ್ ಜಾಗದ ವಿಸ್ತೀರ್ಣ 304 ಎಕರೆಗೆ ಏರಿದೆ.
ವಿಶ್ವವಿದ್ಯಾಲಯದ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, 1200 ಎಕರೆ ಕ್ಯಾಂಪಸ್‌ನಲ್ಲಿ ಈಗಾಗಲೇ ಸಾಯಿ ಸಂಸ್ಥೆಗೆ 81.2 ಎಕರೆ, ಐಸೆಕ್ ಸಂಸ್ಥೆಗೆ-38.2 ಎಕರೆ, ಅಂಬೇಡ್ಕರ್ ಸ್ಕೂಲ್ ಆಪ್ ಎಕನಾಮಿಕ್ಸ್ ವಿಶ್ವವಿದ್ಯಾಲಯಕ್ಕೆ(ಬೇಸ್)-40 ಎಕರೆ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಗೆ 31 ಎಕರೆ (ಈಗ ತೀರ್ಮಾನಿಸಿರುವ 7 ಎಕರೆಯೂ ಸೇರಿ), ಕಲಾಗ್ರಾಮಕ್ಕೆ 20 ಎಕರೆ, ಆಟೋಮ್ಯಾಟಿಕ್ ಎನರ್ಜಿ ಸಂಸ್ಥೆಗೆ -15 ಎಕರೆ ಸೇರಿದಂತೆ ಇನ್ನೂ ಹಲವು ಸಂಸ್ಥೆಗಳಿಗೆ ಎರಕೆಗಟ್ಟಲೆ ಭೂಮಿಯನ್ನು ಸರ್ಕಾರ ನೀಡಿದೆ.
ಈ ರೀತಿ ಬೇರೆ ಸಂಸ್ಥೆಗಳಿಗೆ ನೀಡಿರುವ ಭೂಮಿಯ ಒಟ್ಟು ವಿಸ್ತೀರ್ಣ 304 ಎಕರೆಯಷ್ಟಾಗಿದೆ. ಇದರಿಂದ ಬೆಂಗಳೂರು ವಿವಿಯ ಜಾಗ 800 ಎಕರೆಗಿಂತ ಕಡಿಮೆಯಾಗಿದೆ.ಆರಂಭದಿಂದಲೂ ವಿರೋಧಬೆಂಗಳೂರು ವಿಶ್ವವಿದ್ಯಾಲಯಕ್ಕೆಂದು ನೀಡಿದ ಕ್ಯಾಂಪಸ್ ಜಾಗವನ್ನು ಹೀಗೆ ಬೇರೆ ಬೇರೆ ಸಂಸ್ಥೆಗಳಿಗೆ ನೀಡುತ್ತಾ ಬರುತ್ತಿರುವ ಸರ್ಕಾರಗಳ ಧೋರಣೆಗೆ ಆರಂಭದಿಂದಲೂ ವಿಶ್ವವಿದ್ಯಾಲಯದ ಆಡಳಿತ, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಂದ ವಿರೋಧ, ಪ್ರತಿಭಟನೆ ಆಗಾಗ ವ್ಯಕ್ತವಾಗುತ್ತಲೇ ಇದೆ. ಆದರೆ, ಈ ವಿರೋಧವನ್ನು ಲೆಕ್ಕಿಸದ ಸರ್ಕಾರಗಳು ಬೇರೆಯವರಿಗೆ ಜಾಗ ನೀಡಲು ವಿಶ್ವವಿದ್ಯಾಲಯಕ್ಕೆ ಸೂಚಿಸುತ್ತಲೇ ಬರುತ್ತಿವೆ. ಸರ್ಕಾರದ ನಿರ್ದೇಶನ ವಿರೋಧಿಸಲಾಗದ ಅಧಿಕಾರಿಗಳು ಸಿಂಡಿಕೇಟ್ ಸಭೆಯಲ್ಲಿ ಈ ಸಂಬಂಧ ಪ್ರಸ್ತಾವನೆಗಳಿಗೆ ಅನಿವಾರ್ಯವಾಗಿ ಅನುಮೋದನೆ ಪಡೆದು ಅಣತಿಯಂತೆ ಕಾರ್ಯನಿರ್ವಹಿಸುವಂತಾಗಿದೆ.
75 ಎಕರೆ ಕ್ಯಾಂಪಸ್ ಜಾಗ ಒತ್ತವರಿ:
ಅಲ್ಲದೆ, 75 ಎಕರೆಯಷ್ಟು ಕ್ಯಾಂಪಸ್ ಜಾಗವನ್ನು ವಿವಿಧ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ವಿಶ್ವವಿದ್ಯಾಲಯವೇ ಬೆಂಗಳೂರು ನಗರ ಜಿಲ್ಲಾಡಳಿತಕ್ಕೆ ಈ ಹಿಂದೆ ಸಲ್ಲಿಸಿರುವ ಆಂತರಿಕ ವರದಿಯಲ್ಲಿ ಹೇಳಲಾಗಿದೆ. ಈ ಒತ್ತವರಿ ಹಿಂಪಡೆಯುವ ಸಂಬಂಧ ವಿಶ್ವವಿದ್ಯಾಲಯ ಕಾನೂನು ಹೋರಾಟ ನಡೆಸುತ್ತಿದೆ. ನ್ಯಾಯಾಲಯಕ್ಕೆ ಸಲ್ಲಿಸಲು ಮತ್ತೊಮ್ಮೆ ಜಿಲ್ಲಾಡಳಿತದ ನೆರವಿನೊಂದಿಗೆ ಹೊಸ ಸರ್ವೆ ನಡೆಸುವುದಾಗಿಯೂ ಇತ್ತೀಚೆಗೆ ವಿವಿ ಹೇಳಿತ್ತು. ಕ್ಯಾಂಪಸ್‌ಗೆ ಹೊಂದಿಕೊಂಡಂತಿರುವ ಪಂತರಪಾಳ್ಯ, ನಾಯಂಡಹಳ್ಳಿ, ಕೆಂಚೇನಹಳ್ಳಿ, ಮಲ್ಲತ್ತಹಳ್ಳಿ ಮತ್ತು ನಾಗರಭಾವಿ ಗ್ರಾಮಗಳ ಭಾಗಗಳಲ್ಲಿ ಅತಿ ಹೆಚ್ಚು ಅತಿಕ್ರಮಣವಾಗಿದೆ.
ಅತಿ ಹೆಚ್ಚು 35.20 ಎಕರೆಯಷ್ಟು ಒತ್ತುವರಿ ಸರ್ವೆ ನಂಬರ್ 23ರಲ್ಲಿ ಖಾಸಗಿ ಬಿಲ್ಡರ್ ಒಬ್ಬರಿಂದ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅದೇ ರೀತಿ ಇನ್ನಿತರೆ ಖಾಸಗಿ ವ್ಯಕ್ತಿಗಳು, ಸಂಸ್ಥೆಗಳು ಕ್ಯಾಂಪಸ್ ಜಾಗ ಒತ್ತುವರಿ ಮಾಡಿಕೊಂಡಿರುವುದಾಗಿ ವಿವಿ ಹೇಳಿದೆ. ನ್ಯಾಯಾಲಯದ ಮೂಲಕ ಈ ಜಾಗ ವಿವಿಗೆ ವಾಪಸ್ ಸಿಗದೆ ಹೋದರೆ ಕ್ಯಾಂಪಸ್ ಜಾಗ ಸುಮಾರು 720 ಎಕರೆ ಆಸುಪಾಸಿಗೆ ಬಂದು ನಿಲ್ಲುವ ಆತಂಕವಿದೆ.