ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ವತಿಯಿಂದ 50:50 ಅನುಪಾತದಲ್ಲಿ ಸೈಟ್ ಪಡೆದವರಿಗೆ ಸಿಎಂ ಸಿದ್ದರಾಮಯ್ಯ ಶಾಕ್ ನೀಡಿದ್ದಾರೆ.50:50 ಅನುಪಾತದ ಎಲ್ಲಾ ಅಕ್ರಮ ಸೈಟ್ ಹಿಂದಕ್ಕೆ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಅವರು ಲಿಖಿತ ಸೂಚನೆ ನೀಡಿದ್ದಾರೆ.
ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ಅವರು ಬರದೆ ಪತ್ರ ಆಧಾರಿಸಿ ಅಗತ್ಯ ಕ್ರಮಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ.ಈವರೆಗೆ ಒಟ್ಟು 1500ಕ್ಕೂ ಹೆಚ್ಚು ನಿವೇಶನಗಳನ್ನು 50:50 ಅನುಪಾತದಲ್ಲಿ ವಿತರಿಸಲಾಗಿದೆ. 2020 ರಿಂದ 2024 ಅವಧಿಯಲ್ಲಿ 50:50 ಅನುಪಾತದಲ್ಲಿ ನಿವೇಶನ ಹಂಚಿಕೆಯಾಗಿದ್ದು, ಈ ಅವಧಿಯ ನಿವೇಶನಗಳನ್ನು ಹಿಂಪಡೆಯಲು ಅವರು ಸೂಚಿಸಿದ್ದಾರೆ.
ಇಡಿ ದಾಳಿಯ ಒತ್ತಡದ ನಡುವೆ ಸಿಎಂ ಸಿದ್ದರಾಮಯ್ಯ ನಿವೇಶನ ಮಾಲೀಕರಿಗೆ ಮತ್ತೊಂದು ಶಾಕ್ ನೀಡಿದ್ದಾರೆ.ನಿವೇಶನ ಹಿಂದಕ್ಕೆ ಪಡೆದದ್ದು ಸಂತೋಷವಾಗಿದೆ: ಟಿ.ಎಸ್. ಶ್ರೀವತ್ಸಮುಡಾ 50:50 ನಿವೇಶನ ರದ್ದು ಮಾಡುವಂತೆ ತಾವು ಸಲ್ಲಿಸಿದ್ದ ಮನವಿಗೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿರುವುದಕ್ಕೆ ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ಸಂತಸ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗಳು ನನ್ನ ಮನವಿಯನ್ನು ಧನಾತ್ಮಕವಾಗಿ ಪರಿಗಣಿಸಿ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಎಲ್ಲಾ 50:50 ನಿವೇಶನಗಳನ್ನು ರದ್ದು ಮಾಡುವಂತೆ ಮನವಿ ಮಾಡಿದ್ದೆ. ಎಲ್ಲವನ್ನು ರದ್ದು ಮಾಡಿ, ತದ ನಂತರ ಅರ್ಹರಿಗೆ ಕೊಡಲಿ ಎಂಬುದು ನನ್ನ ಉದ್ದೇಶ. ನಿವೇಶನ ಪಡೆದವರಲ್ಲಿ ಬಹುತೇಕರು ಅನರ್ಹರಿದ್ದಾರೆ ಎಂದರು.50:50 ಅನುಪಾತದಲ್ಲಿ ನಿವೇಶನ ಪಡೆದವರು ಈಗ ಅದನ್ನು ಅರ್ಧ ದರಕ್ಕೆ ಮಾರಾಟ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಆದ್ದರಿಂದ ಉಪ ನೋಂದಣಾಧಿಕಾರಿಗಳಿಗೆ ಸೂಚಿಸಬೇಕು. ಬಿಲ್ಡರ್ ಗಳೂ 50;50 ನಿವೇಶನ ತೆಗೆದುಕೊಂಡಿದ್ದಾರೆ ಎಂದರೆ ಮೋಸವಲ್ಲವೇ? ಈ ಮೋಸವನ್ನು ಮಟ್ಟ ಹಾಕಬೇಕು ಎಂದು ಅವರು ಹೇಳಿದರು.
ಮೊದಲು 50:50 ಅನುಪಾತ ತಪ್ಪು ಅಂತ ಇದೆ. ಅದರ ಬಗ್ಗೆಯು ತೀರ್ಮಾನ ಮಾಡಬೇಕು. ನಿವೇಶನ ಪಡೆದವರು ಈ ಹಿಂದೆ ಮುಖ್ಯಮಂತ್ರಿ ಮುಂದಿಟ್ಟುಕೊಂಡ ಆಟ ಆಡುತ್ತಿದ್ದರು. ಈಗ ಅವರೇ ಹಿಂದಕ್ಕೆ ಕೊಟ್ಟಿದ್ದಾರೆ. ಈಗ ಸಿಎಂ ಸೇರಿದಂತೆ ಉಳಿದವರ ಮೇಲೂ ತನಿಖೆ ನಡೆಯಬೇಕು ಎಂದು ಅವರು ಹೇಳಿದರು.ಮುಡಾದಲ್ಲಿ ನಡೆದಿರುವ ಎಲ್ಲಾ ಅಕ್ರಮ ಬರಬೇಕು. ಈ ಮಧ್ಯೆ ಮುಡಾ ಸಭೆ ನಡೆಸಿದರೂ ಅಜೆಂಡಾವನ್ನೇ ಕೊಟ್ಟಿಲ್ಲ. ಈ ಬಗ್ಗೆ ಮುಖ್ಯ ಕಾರ್ಯದರ್ಶಿಗು ಮನವಿ ಮಾಡಿದ್ದೇವೆ. ಸೋಮವಾರ ಅಜೆಂಡ ಕೊಡುತ್ತೇವೆ ಎಂದಿದ್ದಾರೆ ಎಂದು ಅವರು ತಿಳಿಸಿದರು.