ಸಾರಾಂಶ
ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಪರಿಕಲ್ಪನೆಯ ‘ಬ್ಯಾಕ್ ಟು ಊರು’ ಭಾಗವಾಗಿ ಜರ್ಮನಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಇಟ್ಯಾಗ್ ಎನರ್ಜಿಟೆಕ್ನಿಕ್ ಪ್ರೈವೆಟ್ ಲಿಮಿಟೆಡ್ (ಯುರೋಪಿಯನ್ ಟೆಕ್ನಾಲಜಿ ಅಲೆಯೆನ್ಸ್ ಗ್ರೂಪ್), ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ 300 ಕೋಟಿ ರು. ಹೂಡಿಕೆ ಮಾಡುವ ಮೂಲಕ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಇಟ್ಯಾಗ್ ಗ್ರೂಪ್ ಹಾಗೂ ಮಂಗಳೂರು ಎಸ್ಇಝಡ್ ನಡುವೆ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಪರಿಕಲ್ಪನೆಯ ‘ಬ್ಯಾಕ್ ಟು ಊರು’ ಭಾಗವಾಗಿ ಜರ್ಮನಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಇಟ್ಯಾಗ್ ಎನರ್ಜಿಟೆಕ್ನಿಕ್ ಪ್ರೈವೆಟ್ ಲಿಮಿಟೆಡ್ (ಯುರೋಪಿಯನ್ ಟೆಕ್ನಾಲಜಿ ಅಲೆಯೆನ್ಸ್ ಗ್ರೂಪ್), ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ 300 ಕೋಟಿ ರು. ಹೂಡಿಕೆ ಮಾಡುವ ಮೂಲಕ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಇಟ್ಯಾಗ್ ಗ್ರೂಪ್ ಹಾಗೂ ಮಂಗಳೂರು ಎಸ್ಇಝಡ್ ನಡುವೆ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಯಿತು.ಇಟ್ಯಾಗ್ ಕಂಪನಿಯ ನಿರ್ದೇಶಕ ಪ್ರಕಾಶ್ ಪಿರೇರ ಹಾಗೂ ಎಸ್ಇಝಡ್‌ನ ಸಿಇಒ ಸೂರ್ಯನಾರಾಯಣ ಅವರು ಸಂಸದ ಕ್ಯಾ. ಬ್ರಿಜೇಶ್ ಚೌಟ ಸಮ್ಮುಖದಲ್ಲಿ ಈ ಬಂಡವಾಳ ಹೂಡಿಕೆಗೆ ಪೂರಕ ಒಡಂಬಡಿಕೆಗೆ ಪರಸ್ಪರ ಸಹಿ ಹಾಕಿದರು.
ಈ ಸಂದರ್ಭ ಮಾತನಾಡಿದ ಕ್ಯಾ. ಚೌಟ, ದೇಶ- ವಿದೇಶದಲ್ಲಿರುವ ಮಂಗಳೂರು ಮೂಲದ ಉದ್ಯಮಿಗಳನ್ನು ನಮ್ಮೂರಿಗೆ ಕರೆತರುವ ಭಾಗವಾಗಿ ‘ಬ್ಯಾಕ್ ಟು ಊರು’ ಪರಿಕಲ್ಪನೆ ಆರಂಭಿಸಲಾಗಿದೆ. ಇದಕ್ಕೆ ಇಷ್ಟು ಬೇಗ ದೊಡ್ಡ ಮಟ್ಟದ ಯಶಸ್ಸು ಸಿಗುತ್ತದೆಂದು ಭಾವಿಸಿರಲಿಲ್ಲ. ಈ ಕಲ್ಪನೆಯಡಿ ಮಂಗಳೂರಿನ ವಿಶೇಷ ಆರ್ಥಿಕ ವಲಯದಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಿರುವ ಎರಡನೇ ಕಂಪನಿ ಇದು. ಇಟ್ಯಾಗ್ ಕಂಪನಿಯು ಸುಸ್ಥಿರ ಇಂಧನ ಹಾಗೂ ಇವಿ ತಂತ್ರಜ್ಞಾನ ಅಭಿವೃದ್ಧಿಗೆ ಮಂಗಳೂರಿನಲ್ಲಿ 300 ಕೋಟಿ ರು. ಬಂಡವಾಳ ಹೂಡಿಕೆ ಮಾಡುವ ಜತೆಗೆ ಜಾಗತಿಕ ಕಚೇರಿಯನ್ನೂ ಮಂಗಳೂರಿಗೆ ಶಿಫ್ಟ್ ಮಾಡಲು ಆಸಕ್ತಿ ತೋರಿಸಿದೆ ಎಂದರು.ಬಜೆಟ್ ಅಧಿವೇಶ ಮುಗಿದ ಕೂಡಲೆ ಬೆಂಗಳೂರು, ಪುಣೆ, ಮುಂಬೈ ಹಾಗೂ ಗಲ್ಫ್ ದೇಶಗಳಲ್ಲಿರುವ ಕರಾವಳಿ ಪ್ರದೇಶದ ಉದ್ಯಮಿಗಳ ಜತೆ ಸಂಪರ್ಕ ಸಾಧಿಸಿ ಬ್ಯಾಕ್ ಟು ಊರು ಅಭಿಯಾನದಡಿ ಮಂಗಳೂರಿನಲ್ಲಿ ಬಂಡವಾಳ ಹೂಡಿಕೆಗೆ ಪ್ರೋತ್ಸಾಹಿಸಲಾಗುವುದು ಎಂದು ಕ್ಯಾ. ಚೌಟ ತಿಳಿಸಿದರು.
ಇಟ್ಯಾಗ್ ಕಂಪೆನಿ ನಿರ್ದೇಶಕ ಪ್ರಕಾಶ್ ಪಿರೇರ ಮಾತನಾಡಿ, ಕಂಪನಿಯು ಮಂಗಳೂರಿನ ಎಸ್ಇಝಡ್‌ನಲ್ಲಿ ಸುಸ್ಥಿರ ಇಂಧನ ಮತ್ತು ಇವಿ ಕ್ಷೇತ್ರಗಳಿಗೆ ಅತ್ಯಾಧುನಿಕ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಸಂಶೋಧನೆ ಹಾಗೂ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ. ಮಂಗಳೂರಿನಲ್ಲಿ ಜಾಗತಿಕ ಕಚೇರಿ ಪ್ರಾರಂಭಿಸುವ ಮೂಲಕ 2026ರ ವೇಳೆಗೆ ಉತ್ಪಾದನಾ ಘಟಕ ಪ್ರಾರಂಭಿಸಲಾಗುವುದು. ಇಲ್ಲಿಂದ ವಾರ್ಷಿಕ 110 ಮಿಲಿಯನ್ ಡಾಲರ್ ಮೌಲ್ಯದ ಉತ್ಪನ್ನವನ್ನು ರಫ್ತು ಮಾಡುವ ಗುರಿ ಇದೆ. ಅಲ್ಲದೆ ಘಟಕದಲ್ಲಿ ವಿಶೇಷ ಚೇತನರಿಗೆ ಶೇ.10ರಷ್ಟು ಉದ್ಯೋಗಾವಕಾಶ ನೀಡಲಿದ್ದು, ಅದರಲ್ಲಿಯೂ ಮೂಗ-ಕಿವುಡರಿಗೆ ತರಬೇತಿ ಕೊಟ್ಟು ಉದ್ಯೋಗ ನೀಡಲಾಗುವುದು. ಇತರ ಉದ್ಯೋಗವಕಾಶಗಳನ್ನು ಸ್ಥಳೀಯರಿಗೆ ನೀಡಲಾಗುವುದು ಎಂದರು.ಎಸ್ಇಝಡ್ ಸಿಇಒ ಸೂರ್ಯನಾರಾಯಣ, ಇಟ್ಯಾಗ್ ಕಂಪೆನಿ ಸಿಇಒ ಜ್ಯೋತಿ ಪಿರೇರ, ಎಸ್ಇಝಡ್ ಸಿಎಫ್ಒ ರಮೇಶ್ ಕುಮಾರ್ ಮತ್ತು ಸಿಎ ನಿತಿನ್ ಜೆ. ಶೆಟ್ಟಿ ಇದ್ದರು.