ಅಭಿವೃದ್ಧಿಯ ಅಡಿಪಾಯ ಹಾಕುವಾಗ ಸ್ವಲ್ಪ ಧೂಳು, ಗದ್ದಲ ಸಹಜ. ಆದರೆ ಕಟ್ಟಡ ನಿರ್ಮಾಣವಾದ ಮೇಲೆ ಅದು ಎಲ್ಲರಿಗೂ ಭದ್ರ ಸೂರು ನೀಡುತ್ತದೆ.

ಕರಾವಳಿ ಅಭಿವೃದ್ಧಿಗೆ ಸರ್ಕಾರ ಬದ್ಧ: ಡಿ.ಕೆ. ಶಿವಕುಮಾರ

ಕನ್ನಡಪ್ರಭ ವಾರ್ತೆ ​ಕಾರವಾರ

ಅಭಿವೃದ್ಧಿಯ ಅಡಿಪಾಯ ಹಾಕುವಾಗ ಸ್ವಲ್ಪ ಧೂಳು, ಗದ್ದಲ ಸಹಜ. ಆದರೆ ಕಟ್ಟಡ ನಿರ್ಮಾಣವಾದ ಮೇಲೆ ಅದು ಎಲ್ಲರಿಗೂ ಭದ್ರ ಸೂರು ನೀಡುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.ನಗರದಲ್ಲಿ ನಡೆಯುತ್ತಿರುವ ಕರಾವಳಿ ಉತ್ಸವಕ್ಕೆ ಆಗಮಿಸಿದ್ದ ಅವರು, ಕಾರ್ಯಕ್ರಮಕ್ಕೂ ಮುನ್ನ ಶಾಸಕರ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಮಂಗಳೂರು, ಉಡುಪಿ ಮತ್ತು ಕಾರವಾರವನ್ನೊಳಗೊಂಡ ಸುಮಾರು 300 ಕಿಮೀಗೂ ಹೆಚ್ಚು ಉದ್ದದ ಕರಾವಳಿ ತೀರದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸರ್ಕಾರ ಹೊಸ ನೀತಿ ಜಾರಿಗೆ ತರಲಿದೆ. ಈ ನಿಟ್ಟಿನಲ್ಲಿ ಜನವರಿ 10ರಂದು ಮಂಗಳೂರಿನಲ್ಲಿ ಮಲೆನಾಡು ಮತ್ತು ಕರಾವಳಿ ಭಾಗದ ಶಾಸಕರು ಹಾಗೂ ವಿದೇಶಿ ಹೂಡಿಕೆದಾರರೊಂದಿಗೆ ಮಹತ್ವದ ಸಭೆ ನಡೆಸಲಾಗುವುದು. ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಬೆಳೆಸಿ, ಸ್ಥಳೀಯ ಯುವಜನತೆಗೆ ಉದ್ಯೋಗ ಒದಗಿಸುವುದು ನಮ್ಮ ಗುರಿ ಎಂದು ಡಿಸಿಎಂ ತಿಳಿಸಿದರು.​ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ಬಲ ತುಂಬಲು, ಕಾರವಾರದಲ್ಲಿ ಸುಮಾರು ₹110ರಿಂದ 210 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗುವುದು. ಹಳೆಯ ಮತ್ತು ಶಿಥಿಲಗೊಂಡ ಕಟ್ಟಡ ತೆರವುಗೊಳಿಸಿ, ಸುಸಜ್ಜಿತ ಸಂಕೀರ್ಣಗಳನ್ನು ನಿರ್ಮಿಸುವ ಪ್ರಸ್ತಾವನೆ ಸಿದ್ಧವಾಗಿದೆ ಎಂದರು.

​ಕರಾವಳಿ ಜನರ ಪ್ರಮುಖ ಸಮಸ್ಯೆಯಾದ ಸಿಆರ್‌ಜೆಡ್ ನಿಯಮಗಳ ಸಡಿಲಿಕೆ ಬಗ್ಗೆಯೂ ಮಾತನಾಡಿದ ಡಿಸಿಎಂ, ಗೋವಾ ಮತ್ತು ಕೇರಳ ಮಾದರಿಯನ್ನು ಇಲ್ಲಿಯೂ ಅಳವಡಿಸಲು ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು. ಅರಣ್ಯ ಭೂಮಿ ಅತಿಕ್ರಮಣಕ್ಕೆ ಸಂಬಂಧಿಸಿದಂತೆ, ಪಂಚಾಯಿತಿ ದಾಖಲೆ ಹೊಂದಿರುವ, ಮೂರು ತಲೆಮಾರುಗಳಿಂದ ವಾಸಿಸುತ್ತಿರುವ ಬಡವರನ್ನು ಮತ್ತು 3 ಎಕರೆ ವರೆಗೆ ಜಮೀನು ಹೊಂದಿರುವ ಸಣ್ಣ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲ ಎಂದು ಭರವಸೆ ನೀಡಿದರು.​ರಾಜ್ಯದ ನೀರಿನ ಸದ್ಬಳಕೆಗಾಗಿ ನದಿ ಜೋಡಣೆ ಯೋಜನೆಗೆ ಡಿಪಿಆರ್ ಸಿದ್ಧಪಡಿಸಲು ಮುಖ್ಯ ಎಂಜಿನಿಯರ್‌ಗೆ ಸೂಚಿಸಲಾಗಿದೆ. ಕೇಂದ್ರ (ಶೇ. 90) ಮತ್ತು ರಾಜ್ಯ (ಶೇ. 10) ಅನುದಾನದಡಿ ಈ ಯೋಜನೆ ಜಾರಿಯಾಗಲಿದೆ. ಇನ್ನು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ರಾಜ್ಯದ ಆಸ್ತಿಯಾಗಿದ್ದು, ಕೇವಲ 100-200 ಎಕರೆ ಜಮೀನಿನಲ್ಲಿ ನಡೆಯುವ ಈ ಯೋಜನೆಯಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕರಾದ ಸತೀಶ್ ಸೈಲ್, ಭೀಮಣ್ಣ ನಾಯ್ಕ ಹಾಗೂ ಶಿವರಾಮ ಹೆಬ್ಬಾರ್ ಇದ್ದರು.