ಪಟಾಕಿ ಕಿಡಿ ಸಿಡಿದು, ಹತ್ತಿಕೊಂಡ ಬೆಂಕಿಯಿಂದ, ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 300 ಕ್ವಿಂಟಲ್‌ಗೂ ಹೆಚ್ಚು ಹತ್ತಿ ಸುಟ್ಟು ಕರಕಲಾದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ದೀಪಾವಳಿ ಅಂಗಡಿ ಪೂಜೆ ವೇಳೆ ಸಿಡಿಸಿದ ಪಟಾಕಿಯಿಂದ ತಗುಲಿದ ಈ ಬೆಂಕಿ ತಗುಲಿದೆ.

ಕನ್ನಡಪ್ರಭ ವಾರ್ತೆ ಕೆಂಭಾವಿ

ಪಟಾಕಿ ಕಿಡಿ ಸಿಡಿದು, ಹತ್ತಿಕೊಂಡ ಬೆಂಕಿಯಿಂದ, ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 300 ಕ್ವಿಂಟಲ್‌ಗೂ ಹೆಚ್ಚು ಹತ್ತಿ ಸುಟ್ಟು ಕರಕಲಾದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ದೀಪಾವಳಿ ಅಂಗಡಿ ಪೂಜೆ ವೇಳೆ ಸಿಡಿಸಿದ ಪಟಾಕಿಯಿಂದ ತಗುಲಿದ ಈ ಬೆಂಕಿ ತಗುಲಿದೆ.

ಕೆಂಭಾವಿ ಪಟ್ಟಣದ ಮಲ್ಲಯ್ಯ ಚನ್ನೂರ ಎಂಬುವವರಿಗೆ ಸೇರಿದ ಗೋದಾಮಿನಲ್ಲಿ, ಮುದಿಗೌಡ ಮಾಲಿಪಾಟೀಲ ಎಂಬ ರೈತರಿಗೆ ಸೇರಿದ ₹28 ಲಕ್ಷ ಮೌಲ್ಯದ, ಸುಮಾರು 300 ಕ್ವಿಂಟಾಲ್‌ನಷ್ಟು ಅಧಿಕ ಹತ್ತಿ ದಾಸ್ತಾನು ಶೇಖರಿಸಿಡಲಾಗಿತ್ತು. ದೀಪಾವಳಿಯ ಲಕ್ಷ್ಮೀ ಪೂಜೆಯ ಸಂದರ್ಭ ಹಲವು ಅಂಗಡಿಗಳಲ್ಲಿ ಪೂಜೆ ನಡೆಯುತ್ತಿದ್ದ ವೇಳೆ ಹಚ್ಚಿದ್ದ ಪಟಾಕಿ ಕಿಡಿಯೊಂದು ಗೋದಾಮಿಗೆ ತಗುಲಿ ಈ ಅವಘಢ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಸುದ್ದಿ ತಿಳಿಯುತ್ತಲೆ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳ ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಅಷ್ಟೊತ್ತಿಗೆ ಬೆಂಕಿಯ ಕೆನ್ನಾಲಿಗೆ ಹತ್ತಿಯನ್ನು ಸಂಪೂರ್ಣ ಆಹುತಿ ಪಡೆದಿತ್ತು. ಸುದ್ದಿ ತಿಳಿಯುತ್ತಲೆ ಪಟ್ಟಣದ ಅಡತ್ ವ್ಯಾಪಾರಸ್ಥರು, ಎಲ್ಲ ಅಂಗಡಿಗಗಳ ಮಾಲೀಕರು ಸೇರಿದಂತೆ ನೂರಾರು ಜನತೆ ಜಮಾವಣೆಗೊಂಡು ಬೆಂಕಿ ನಂದಿಸಲು ಸಹಕರಿಸಿದರು. ಬರದ ಬವಣೆಯ ಮಧ್ಯೆ, ಕಷ್ಟಪಟ್ಟು ಬೆಳೆದಿದ್ದ ನೂರಾರು ಕ್ವಿಂಟಲ್ ಹತ್ತಿ, ಕಣ್ಣೆದುರೇ ಸುಟ್ಟ ಹಿನ್ನೆಲೆ ರೈತರು ಕಣ್ಣೀರು ಹಾಕಿದರು. ಸ್ಥಳಕ್ಕೆ ಅಗ್ನಿಶಾಮಕ ದಳ ತಂಡ ಭೇಟಿ ಬೆಂಕಿ ನಂದಿಸುವ ಕಾರ್ಯ ನಡೆಸಿತು. ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಬರಗಾಲದ ನಡುವೆಯೂ ರೈತ ಕಷ್ಟಪಟ್ಟು ಬೆಳೆದ ಹತ್ತಿ ಆಕಸ್ಮಿಕ ಬೆಂಕಿಯಿಂದ ಸರ್ವನಾಶವಾಗಿದ್ದು, ಕೂಡಲೇ ಸರ್ಕಾರ ನೊಂದ ರೈತನ ನೆರವಿಗೆ ಧಾವಿಸಬೇಕೆಂಬ ಕೂಗುಗಳು ಕೇಳಿಬರುತ್ತಿವೆ.

ಪ್ರಸ್ತುತ ಹತ್ತಿ ದರ ಕ್ವಿಂಟಾಲ್‌ಗೆ ಒಂಬತ್ತು ಸಾವಿರಕ್ಕೂ ಅಧಿಕ ಇದ್ದು, ಭಾನುವಾರ ಸಂಭವಿಸಿದ ಈ ಘಟನೆಯಿಂದ ಸುಮಾರು 27 ಲಕ್ಷ ರು.ಗೂ ಅಧಿಕ ನಷ್ಟವಾಗಿದೆ. ಇದರಿಂದ ರೈತನ ಬದುಕೇ ಬರ್ಬಾದ್‌ ಆಗಿದ್ದು, ಬಿಳಿ ಬಂಗಾರ ಬೆಳೆದಿದ್ದ ರೈತನಲ್ಲಿ ಈಗ ದುಃಖ ಮನೆ ಮಾಡಿದೆ. ಕೂಡಲೆ ಸರ್ಕಾರ ನೆರವಿಗೆ ಧಾವಿಸಿ ನೊಂದ ರೈತನಿಗೆ ಆರ್ಥಿಕ ನೆರವು ನೀಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಎಚ್. ಆರ್. ಬಡಿಗೇರ ಹೇಳಿದರು.