ಅನುಮತಿ ಇಲ್ಲದೆ 303 ಮರ ಕಡಿತ: ಬಿಬಿಎಂಪಿಯಿಂದ ₹25 ಲಕ್ಷ ದಂಡ

| Published : Jan 18 2024, 02:01 AM IST

ಸಾರಾಂಶ

ಅನುಮತಿ ಇಲ್ಲದೆ 303 ಮರ ಕಡಿತ: ಬಿಬಿಎಂಪಿಯಿಂದ ₹25 ಲಕ್ಷ ದಂಡ. ಮಲ್ಲಸಂದ್ರದ 17 ಎಕರೆ ಜಾಗದಲ್ಲಿ ಮರಗಳಿಗೆ ಕೊಡಲಿ । -ಭೂ ಮಾಲೀಕ, ಮರ ಕಡಿದ ವ್ಯಕ್ತಿ, ಸಂಸ್ಥೆ ವಿರುದ್ಧ ಕೇಸ್‌. ಲೇಔಟ್ ನಿರ್ಮಿಸಲು ಯೋಜಿಸಿ ಮರಗಳನ್ನು ಕಡಿಸಿದ್ದ ಮಾಲೀಕಬಿಬಿಎಂಪಿ ವ್ಯಾಪ್ತಿಯಲ್ಲಿ ಮರ ಕಡಿಯಲು ಪಾಲಿಕೆ ಒಪ್ಪಿಗೆ ಕಡ್ಡಾಯಒಪ್ಪಿಗೆ ಇಲ್ಲದೆ ಮರಕ್ಕೆ ಕೊಡಲಿ, ಮರ ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ ವಶ

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೊಮ್ಮನಹಳ್ಳಿಯ ಮಲ್ಲಸಂದ್ರ ಗ್ರಾಮದ 17 ಎಕರೆ ಖಾಸಗಿ ಜಮೀನಿನಲ್ಲಿ ಪಾಲಿಕೆ ಅನುಮತಿ ಪಡೆಯದೇ 303 ಕತ್ತರಿಸಿದ ಜಮೀನ ಮಾಲೀಕ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿರುವ ಬಿಬಿಎಂಪಿ ಅರಣ್ಯ ವಿಭಾಗ ₹25 ಲಕ್ಷ ದಂಡ ವಿಧಿಸಿದೆ.

ಮಲ್ಲಸಂದ್ರದ 17 ಎಕರೆ ಖಾಸಗಿ ಜಮೀನಿನಲ್ಲಿ ನೂರಾರು ಸಂಖ್ಯೆಯ ಮರಗಳು ಬೆಳೆದು ನಿಂತಿದ್ದು, ಜಮೀನನಲ್ಲಿ ಲೇಔಟ್‌ ಅಭಿವೃದ್ಧಿ ಪಡಿಸಲು ಮಾಲೀಕ ಸತೀಶ್‌ ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಜಮೀನಲ್ಲಿ ಇರುವ ಮರಗಳನ್ನು ಕತ್ತರಿಸುವಂತೆ ಪುಟ್ಟಸ್ವಾಮಿ ಎಂಬುವವರಿಗೆ ಸೂಚಿಸಿದ್ದಾರೆ. ಅದರಂತೆ ಪುಟ್ಟಸ್ವಾಮಿ ಈವರೆಗೆ 303 ವಿವಿಧ ಜಾತಿಯ ಮರಗಳನ್ನು ಕಡಿದು ಹಾಕಿದ್ದರು.

ಈ ಕುರಿತು ಸ್ಥಳೀಯರ ದೂರು ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಬಿಬಿಎಂಪಿ ಅರಣ್ಯ ಅಧಿಕಾರಿಗಳು ಜಮೀನಿನ ಮಾಲೀಕ, ಮರ ಕಡಿದ ಪುಟ್ಟಸ್ವಾಮಿ ಹಾಗೂ ಲೇಔಟ್‌ ಅಭಿವೃದ್ಧಿ ಪಡಿಸಲು ಮುಂದಾದ ಖಾಸಗಿ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಾಮಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾಸಗಿ ಜಮೀನಿನಲ್ಲಿ ಒಂದು ಮರ ಕಡಿಯಬೇಕಾದರೂ ಪಾಲಿಕೆ ಅರಣ್ಯ ವಿಭಾಗದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಆದರೆ, ಅನುಮತಿ ಪಡೆಯದೇ 303 ವಿವಿಧ ಜಾತಿಯ ಮರಗಳನ್ನು ಕಡಿದು ಹಾಕಲಾಗಿದೆ. ಹಾಗಾಗಿ, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಾಗಿದೆ. ಜತೆಗೆ, ₹25 ಲಕ್ಷ ದಂಡ ವಿಧಿಸಲಾಗಿದೆ. ಜತೆಗೆ, ಕಡಿದ ಮರ ರಂಬೆ, ಕೊಂಬೆ ಹಾಗೂ ಕಡಿದ ಮರಗಳನ್ನು ಸಾಗಾಣಿಕೆಗೆ ಬಳಕೆ ಮಾಡಲಾದ ಟ್ರ್ಯಾಕ್ಟರ್‌ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಮರಕ್ಕೆ ಆ್ಯಸಿಡ್‌: ನಿವೃತ್ತ ಅಧಿಕಾರಿ ವಿರುದ್ಧ ಕೇಸ್‌

ಕಲಾಸಿಪಾಳ್ಯದ ಕೋಟೆ ಬಡಾವಣೆಯಲ್ಲಿ ರಾತ್ರಿ ವೇಳೆ ಮರಗಳಿಗೆ ಆ್ಯಸಿಡ್‌ ಹಾಕಿ ಮೂರು ಮರಗಳನ್ನು ನಾಶ ಪಡಿಸಿದ ನಿವೃತ್ತ ಎಂಜಿನಿಯರ್‌ ವಿರುದ್ಧ ಸಹ ಪ್ರಕರಣ ದಾಖಲು ಮಾಡಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಾಮಿ ಮಾಹಿತಿ ನೀಡಿದರು.