ಕೊಚ್ಚಿಹೋದ 31 ವರ್ಷದ ಮಳೆ ದಾಖಲೆ!

| Published : Sep 25 2024, 12:58 AM IST

ಸಾರಾಂಶ

ಶಶಿಕಾಂತ ಮೆಂಡೆಗಾರ ಕನ್ನಡಪ್ರಭ ವಾರ್ತೆ ವಿಜಯಪುರಗುಮ್ಮಟ ನಗರಿ ವಿಜಯಪುರದಲ್ಲಿ ಒಂದೇ ದಿನದಲ್ಲಿ 199 ಮಿಮೀ ಮಳೆಯಾಗಿದೆ. ಇದು ಕಳೆದ 31 ವರ್ಷಗಳಲ್ಲಿಯೇ ಅತ್ಯಧಿಕ ಮಳೆ. ಜನಜೀವನ ತತ್ತರಿಸಿದೆ. ಮಳೆಗೆ ಜಿಲ್ಲೆಯ ವಿವಿಧ ಭಾಗಗಳು ಜಲಾವೃತವಾಗಿವೆ. ಜನರು ತತ್ತರಿಸಿ ಹೋಗಿದ್ದಾರೆ. ನಗರ ಜಲಾವೃತವಾಗಿರುವ ದೃಶ್ಯ ಡ್ರೋಣ್‌ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವರುಣನ ರೌದ್ರನರ್ತನ ಅಲ್ಲಿ ಪ್ರದರ್ಶನವಾಗಿದೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರಗುಮ್ಮಟ ನಗರಿ ವಿಜಯಪುರದಲ್ಲಿ ಒಂದೇ ದಿನದಲ್ಲಿ 199 ಮಿಮೀ ಮಳೆಯಾಗಿದೆ. ಇದು ಕಳೆದ 34 ವರ್ಷಗಳಲ್ಲಿಯೇ ಅತ್ಯಧಿಕ ಮಳೆ. ಜನಜೀವನ ತತ್ತರಿಸಿದೆ. ಮಳೆಗೆ ಜಿಲ್ಲೆಯ ವಿವಿಧ ಭಾಗಗಳು ಜಲಾವೃತವಾಗಿವೆ. ಜನರು ತತ್ತರಿಸಿ ಹೋಗಿದ್ದಾರೆ. ನಗರ ಜಲಾವೃತವಾಗಿರುವ ದೃಶ್ಯ ಡ್ರೋಣ್‌ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವರುಣನ ರೌದ್ರನರ್ತನ ಅಲ್ಲಿ ಪ್ರದರ್ಶನವಾಗಿದೆ.

31 ವರ್ಷದಲ್ಲೇ ದಾಖಲೆ ಮಳೆ:

ವಿಜಯಪುರದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಹವಾಮಾನ ವೀಕ್ಷಣಾಲಯದಲ್ಲಿ ದಾಖಲಾದ ಮಳೆಯ ಪ್ರಮಾಣ ಇಡಿ ರಾಜ್ಯವನ್ನೇ ಹುಬ್ಬೇರಿಸುವಂತೆ ಮಾಡಿದೆ. ಕಾರಣ, 1993ರಿಂದ ಇದುವರೆಗೂ ಒಂದೇ ದಿನದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದು ಇದೆ ಮೊದಲು. 31 ವರ್ಷಗಳಲ್ಲಿ ಕೇವಲ ಆರು ಬಾರಿ ಮಾತ್ರ 100 ಮಿಮೀ ಮಳೆಯಾಗಿತ್ತು. ಅದು ಕೂಡ ಆಗಿನ ಸಂದರ್ಭದಲ್ಲಿ ದಾಖಲೆಯಾಗಿತ್ತು. ಈಗ ಆ ಮಳೆ ದಾಖಲೆಯನ್ನು ಮುರಿದಿದೆ. ಒಂದೇ ದಿನದಲ್ಲಿ ದಾಖಲಾದ ಮಳೆಯ ಪ್ರಮಾಣ ಹಿಂದೆಂದೂ ದಾಖಲಾಗಿಲ್ಲ ಎನ್ನುತ್ತಾರೆ ವಿಜಯಪುರದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಕೃಷಿ ಹವಾಮಾನ ಶಾಸ್ತ್ರ ವಿಭಾಗದ ಹಿರಿಯ ಸಂಶೋಧನಾರ್ಥಿ ಜಗದೀಶ ಹಿರೇಮಠ.

ಯಾವ ವರ್ಷದಲ್ಲಿ ಎಷ್ಟು ಮಳೆ ಸುರಿದಿತ್ತು?:

ಕಳೆದ 1993 ಆಗಸ್ಟ್ 29ರಂದು 120.5 ಮಿ.ಮೀ ಮಳೆಯಾಗಿತ್ತು. 1998 ಜೂನ್ 21ರಂದು 100.5 ಮಿಮೀ ಮಳೆಯಾಗಿತ್ತು. 2001 ಅಕ್ಟೋಬರ್ 7ರಂದು 100.2 ಮಿ.ಮೀ ಮಳೆ, 2007 ಜೂ.23ಕ್ಕೆ 180.8 ಮಿಮೀ ಮಳೆ, 2013 ಜು.8ಕ್ಕೆ 110 ಮಿಮೀ ಸುರಿದಿದೆ. ಇದನ್ನು ಬಿಟ್ಟರೆ 2024 ಸೋಮವಾರ ಒಂದೇ ರಾತ್ರಿ 199 ಮಿ.ಮೀ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ.

ಎಡೆಬಿಡದೆ ಆರ್ಭಟ:

ಸೋಮವಾರ ರಾತ್ರಿ 8ಗಂಟೆ ಸುಮಾರಿಗೆ ಶುರುವಾದ ವರುಣನ ಆರ್ಭಟ ತಡರಾತ್ರಿಯವರೆಗೂ ಮುಂದುವರೆದಿತ್ತು. ನಿರಂತರ ನಾಲ್ಕು ತಾಸುಗಳ ಕಾಲ ಸುರಿದಿದೆ. ಇದರಿಂದಾಗಿ ನಗರದಲ್ಲಿನ ಜನಜೀವನವೇ ಅಸ್ತವ್ಯಸ್ಥವಾಗಿದೆ. ನಗರದಲ್ಲಿನ ರಸ್ತೆಗಳು, ಮನೆಗಳು, ಅಂಗಡಿಗಳು ಅಷ್ಟೆ ಅಲ್ಲದೆ ರಸ್ತೆ ಹಾಗೂ ಮನೆಗಳ ಮುಂದೆ ನಿಂತಿದ್ದ ವಾಹನಗಳು ಸಹ ಮುಳುಗಡೆಯಾಗಿವೆ.

ಕೋಟ್

ಕಳೆದ 34 ವರ್ಷಗಳಲ್ಲಿಯೇ ಇದು ದಾಖಲೆಯ ಮಳೆ. ಅತಿ ಹೆಚ್ಚಿನ ಮಳೆಯ ಪ್ರಮಾಣ 199 ಎಂ.ಎಂ. ಇದಕ್ಕು ಮೊದಲು 2007ರಲ್ಲಿ 180.8 ಮಿ.ಮಿ ಮಳೆ ಪ್ರಮಾಣ ದಾಖಲಾಗಿತ್ತು. ಇಲ್ಲಿನ ಸಂಶೋಧನಾ ಕೇಂದ್ರದಲ್ಲಿ ಹವಾಗುಣ, ಕನಿಷ್ಠ ಹಾಗೂ ಗರಿಷ್ಠ ಉಷ್ಣತೆ, ಮಳೆಯ ಪ್ರಮಾಣ, ಆದ್ರತೆ, ಬಿಸಿಲಿನ ಪ್ರಮಾಣ, ಗಾಳಿಯ ದಿಕ್ಕು, ಗಾಳಿಯ ವೇಗ ಇತ್ಯಾದಿ ಮಾಹಿತಿಗಳು ದಾಖಲಾಗುತ್ತವೆ. ಅದರಂತೆ ಮಳೆಯ ಪ್ರಮಾಣವೂ ದಾಖಲಾಗಿದ್ದು, ಎಲ್ಲರನ್ನೂ ಅಚ್ಚರಿಗೊಳಿಸಿದೆ.

ಡಾ.ಜಿ.ಎಸ್.ಯಡಹಳ್ಳಿ, ಕೃಷಿ ಹವಾಮಾನ ಶಾಸ್ತ್ರಜ್ಞರು.