ಸಾರಾಂಶ
ಕನ್ನಡ ಪ್ರಭವಾರ್ತೆ,ಮಾಲೂರು
ರಾಜ್ಯ ಸಂಪುಟ ಸಭೆಯಲ್ಲಿ ಮಾಲೂರಿಗೆ 3190 ಕೋಟಿ ರು.ಗಳ ಕಾಮಗಾರಿಗಳಿಗೆ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಬ್ಲಾಕ್ ಅಧ್ಯಕ್ಷ ವಿಜಯನಾರಸಿಂಹ ನೇತೃತ್ವದಲ್ಲಿ ಜಗಜ್ಯೋತಿ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಅಧ್ಯಕ್ಷ ವಿಜಯನಾರಸಿಂಹ ಅವರು, ಶಾಸಕರ ಸತತ ಪ್ರಯತ್ನದಿಂದ ಪಟ್ಟಣದಲ್ಲಿ 3600 ಮೀ.ಉದ್ದದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ರಾಜ್ಯ ಸರ್ಕಾರವು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ ಎಂದರು.
ಕಾರಿಡಾರ್ ರಸ್ತೆ ಕಾಮಗಾರಿರಾಜ್ಯ ಸರ್ಕಾರದ ಸಂಪುಟ ಸಭೆಯಲ್ಲಿ ಕಳೆದ ಬಜೆಟ್‌ನಲ್ಲಿ ಘೋಷಿಸಿದಂತೆ 1860 ಕೋಟಿ ರು.ಗಳ ಕೈಗಾರಿಕಾ ಕಾರಿಡಾರ್ ರಸ್ತೆ ಕಾಮಗಾರಿಯನ್ನು 3190 ಕೋಟಿಗೆ ಹೆಚ್ಚಿಸಿ ಅನುಮೋದನೆ ನೀಡಿದೆ, ಇದರಿಂದ ಪಟ್ಟಣದಲ್ಲಿ ಮೇಲ್ಸೇತುವೆ ಸೇರಿದಂತೆ ಹೊಸಕೋಟೆ ವರೆಗೆ ಸಿಮೆಂಟ್ ರಸ್ತೆ ನಿರ್ಮಾಣ ವಾಗಲಿದೆ. ದೇನವಹಳ್ಳಿ ಕೈಗಾರಿಕಾ ಪ್ರದೇಶದಿಂದ ವಿಜಿಪುರ,ಹೆಚ್.ಕ್ರಾಸ್,ವೇಮಗಲ್ ನರಸಾಪುರ ಮೂಲಕ ಮಾಲೂರು ತಾಲೂಕು ಪ್ರವೇಶಿಸುವ ನಾಲ್ಕು ಫಥಗಳ ರಸ್ತೆಯು ತಮಿಳುನಾಡಿನ ಹೊಸೂರು ವರೆಗೆ ನಾಲ್ಕು ಪಥದ ರಸ್ತೆಯಾಗಿ ನಿರ್ಮಾಣ ವಾಗಲಿದೆ ಎಂದರು.
ಈ ಯೋಜನೆಯ ಅತಿ ಹೆಚ್ಚು ಅನುದಾನದ ಕಾಮಗಾರಿ ಮಾಲೂರು ತಾಲೂಕಿನಲ್ಲಿ ನಡೆಯಲಿದೆ. ಈ ಅನುದಾನದಲ್ಲಿ ಭೂ ಸ್ವಾಧೀನಕ್ಕಾಗಿ 1128 ಕೋಟಿ ಮೀಸಲಿಟ್ಟಿದ್ದರೆ 2032 ಕೋಟಿ ರು.ಗಳನ್ನು ಸಿವಿಲ್ ವರ್ಕ್ ಗಳಿಗಾಗಿ ವಿನಿಯೋಗಿಸಲಾಗುತ್ತದೆ ಎಂದರು.ಸಿಎಂ, ಡಿಸಿಎಂ, ಶಾಸಕರಿಗೆ ಅಭಿನಂದನೆ
ಕ್ಷೇತ್ರದ ಜನರ ಆಶಯದಂತೆ ಶಾಸಕರ ಕಂಡ ಕನಸು ನನಸಾಗುತ್ತಿದ್ದು, ಅನುದಾನ ಅನುಮೋದನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳೆ ಹಾಗೂ ಶಾಸಕ ನಂಜೇಗೌಡರಿಗೆ ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ಅಭಿನಂದನೆ ಸಲ್ಲಿಸಲಾಗುವುದು ಎಂದರು.ಪುರಸಭೆ ಅಧ್ಯಕ್ಷೆ ಕೋಮಲ ನಾರಾಯಣ್ ,ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ ,ಪ್ರಾಧಿಕಾರದ ಅಧ್ಯಕ್ಷ ನಯೀಮ್ ,ಆಂಜಿನಪ್ಪ ,ಪುರಸಭೆ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಕೃಷ್ಣಪ್ಪ , ವಿಜಯಲಕ್ಷ್ಮಿ ಲಕ್ಷ್ಮಿನಾರಾಯಣ್ ,ಜಾಕೀರ್ ಖಾನ್, ಭಾರತಮ್ಮ ಶಂಕರಪ್ಪ,ಸಂತೇಹಳ್ಳಿ ನಾರಾಯಣಸ್ವಾಮಿ ,ನವೀನ್,ಜಾಕಿ ಮಂಜು,ಚಾಕನಹಳ್ಳಿ ನಾಗರಾಜ್,ತನ್ವೀರ್ ,ಹುಂಗೇನಹಳ್ಳಿ ನಾಗೇಶ್ ಇನ್ನಿತರರು ಇದ್ದರು.