ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯ ಭೂಸ್ವಾಧೀನಕ್ಕೆ ಇಲ್ಲಿವರೆಗೆ ಒಪ್ಪಿಗೆ ಸೂಚಿಸಿದ 27 ಮಂದಿ ರೈತರಿಗೆ 32.70 ಕೋಟಿ ರುಪಾಯಿ ಭೂ ಪರಿಹಾರ ವಿತರಣೆ ಮಾಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್ ತಿಳಿಸಿದರು.
ನಗರದ ಕಂದಾಯ ಭವನದಲ್ಲಿರುವ ಪ್ರಾಧಿಕಾರದ ಕಚೇರಿಯಲ್ಲಿ ಗುರುವಾರ ಭೂಸ್ವಾಧೀನಕ್ಕೆ ಒಪ್ಪಿಗೆ ಸೂಚಿಸಿದ 10 ರೈತರಿಗೆ 19,69,72,342 ರುಪಾಯಿ ಭೂ ಪರಿಹಾರದ ಚೆಕ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಈಗ 409 ರೈತರು ಪರಿಹಾರ ಬೇಕೆಂದು ಕೇಳಿದ್ದು, ಅದರಲ್ಲಿ 169 ರೈತರು ಭೂ ಪಾಲುದಾರಿಕೆ ಕೇಳಿದ್ದಾರೆ. ಅಂತಿಮ ಭೂಸ್ವಾಧೀನ ಅಧಿಸೂಚನೆ ಹೊರಡಿಸಿರುವ ಹಾರೋಹಳ್ಳಿ ತಾಲೂಕಿನ ವಡೇರಹಳ್ಳಿಯ 3 ಮತ್ತು ಬಿಡದಿ ಹೋಬಳಿಯ ಕೆಂಪಯ್ಯನಪಾಳ್ಯ ಗ್ರಾಮದ 7 ರೈತರು ಸೇರಿ ಒಟ್ಟು 10 ಭೂ ಮಾಲೀಕರು ತಮ್ಮ ಭೂಮಿಯನ್ನು ಸ್ವಾಧೀನಕ್ಕೆ ಒಳಪಡಿಸಲು ಒಪ್ಪಿಗೆ ಸೂಚಿಸಿದ್ದಾರೆ. ಇವರಿಗೆ ಇಡುಗಂಟು 5 ಲಕ್ಷ, ಮರಗಳ ಪರಿಹಾರವೂ ಸೇರಿ ಒಟ್ಟು 19,69,72,342 ರು. ಭೂ ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದರು.ಕಳೆದ ವಾರ ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಸಾಂಕೇತಿಕವಾಗಿ 7 ರೈತರಿಗೆ ಒಟ್ಟು 2.9 ಎಕರೆ ಜಮೀನಿಗೆ ಭೂ ಪರಿಹಾರವಾಗಿ 4.14 ಕೋಟಿ ರು., ಇಡಗಂಡು 5 ಲಕ್ಷ ಹಾಗೂ ಮರಗಳ ಪರಿಹಾರ ಸೇರಿ ಒಟ್ಟು 5,23,70,18 ರು. ಪರಿಹಾರ ಚೆಕ್‌ಗಳನ್ನು ವಿತರಿಸಲಾಗಿತ್ತು. ಯೋಜನೆ ಅನುಷ್ಠಾನ ಮಾಡಲು ಬೇಕಾದ ಹಣಕಾಸು ಪ್ರಾಧಿಕಾರದಲ್ಲಿ ಲಭ್ಯವಿದೆ. ರೈತರು ವದಂತಿಗಳಿಗೆ ಕಿವಿಗೊಡಬಾರದು. ನಿಗದಿತ ಸಮಯದಲ್ಲಿ ಭೂಸ್ವಾಧೀನಕ್ಕೆ ಒಪ್ಪಿಗೆ ಸೂಚಿಸುವ ಎಲ್ಲರಿಗೂ ಪರಿಹಾರ ಮೊತ್ತ ಒಂದೇ ಕಂತಿನಲ್ಲಿ ವಿತರಿಸುತ್ತೇವೆ ಎಂದರು.
ಭೂ ಪರಿಹಾರ ವಿತರಣೆ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಜೆಡಿಎಸ್ ನಡೆಸುತ್ತಿರುವ ಅಪಪ್ರಚಾರಗಳನ್ನು ನಂಬಬೇಡಿ. ರೈತರು ಭೂ ಪರಿಹಾರಕ್ಕೆ ಬದಲು ಭೂ ಪಾಲುದಾರಿಕೆ ಪಡೆಯುವುದು ಉತ್ತಮ ನಿರ್ಧಾರ. ಭವಿಷ್ಯದಲ್ಲಿ ನಿಮ್ಮ ಉಳಿದ ಭೂಮಿಯ ಬೆಲೆ 10 ಪಟ್ಟು ಹೆಚ್ಚಾಗಲಿದೆ ಎಂದು ಗಾಣಕಲ್ ನಟರಾಜ್ ಹೇಳಿದರು.ಬಾಕ್ಸ್ ...
ಅಪಪ್ರಚಾರ ಮಾಡುವವರ ವಿರುದ್ಧ ದೂರು
ರಾಮನಗರ: ಜಿಬಿಡಿಎ ನೀಡಿದ ಭೂಸ್ವಾಧೀನ ಪರಿಹಾರದ ಚೆಕ್ ಅನ್ನು ಸುಳ್ಳು ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ರೈತ ಹೋರಾಟಗಾರರೆಂದು ಹೇಳಿಕೊಳ್ಳುತ್ತಿರುವ ಕೆಲವರು ಹಾಗೂ ಜೆಡಿಎಸ್ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನು ಹಾಕಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ದಿನ 7 ರೈತರಿಗೆ ಸಾಂಕೇತಿಕವಾಗಿ ಚೆಕ್ ವಿತರಣೆ ಮಾಡಲಾಯಿತು. ಅದರಲ್ಲಿ ದಿನಾಂಕ 19.06.2026 ಎಂದು ನಮೂದಾಗಿದೆ. ಆ ದಿನಾಂಕವನ್ನು 19.06.2024 ಎಂದು ತಿದ್ದಲಾಗಿದೆ. ಇಂತಹ ಕೀಳುಮಟ್ಟದ ಅಪಪ್ರಚಾರಕ್ಕೆ ಯಾರೂ ಇಳಿಯಬಾರದು ಎಂದರು.ಜೆಡಿಎಸ್ ನಾಯಕರು ಪ್ರಧಾನಮಂತ್ರಿ, ಮುಖ್ಯಮಂತ್ರಿ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಇಂತಹ ಪಕ್ಷದ ಜೆಡಿಎಸ್ ಕರ್ನಾಟಕ ಅಧಿಕೃತ ಪೇಜ್‌ನಲ್ಲಿ ಈ ರೀತಿ ಸುಳ್ಳು ಅಪಪ್ರಚಾರ ಮಾಡುತ್ತಿರುವುದು ಎಷ್ಟು ಸರಿ. ನಾಯಕರು ಜನರಿಗೆ ಉತ್ತಮ ಸಂದೇಶ ನೀಡಬೇಕೇ ಹೊರತು ಗೊಂದಲ ಸೃಷ್ಟಿಸುವ ಕೆಲಸ ಮಾಡಬೇಡಿ ಎಂದರು.
ಈ ಬಗ್ಗೆ ರಾಮನಗರ ಪೊಲೀಸ್ ಕ್ರೈಮ್ ವಿಭಾಗ ಹಾಗೂ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಈ ಪೋಸ್ಟ್ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿರುವುದಾಗಿ ಗಾಣಕಲ್ ನಟರಾಜ್ ತಿಳಿಸಿದರು.25ಕೆಆರ್ ಎಂಎನ್ 10.ಜೆಪಿಜಿ
ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜ್ ರೈತರಿಗೆ ಭೂ ಪರಿಹಾರದ ಚೆಕ್ ವಿತರಿಸಿದರು.