ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಬ್ರಹ್ಮಾವರ ತಾಲೂಕು ಕೋಟ ಹೋಬಳಿಯ 32 ಗ್ರಾಮಗಳನ್ನು ಉಡುಪಿಯ ನ್ಯಾಯಾಲಯಗಳ ವ್ಯಾಪ್ತಿಗೆ ಒಳಪಡಿಸಿ ಕರ್ನಾಟಕ ಸರ್ಕಾರ ಅಧಿಸೂಚನೆ ಹೊರಡಿಸಿರುವುದಾಗಿ ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ತಿಳಿಸಿದ್ದಾರೆ. ಬ್ರಹ್ಮಾವರದಲ್ಲಿ ಇತ್ತೀಚೆಗೆ ಆರಂಭಗೊಂಡ ಸಂಚಾರಿ ಸಿವಿಲ್ ಮತ್ತು ಜೆಎಮ್‌ಎಫ್‌ಸಿ ನ್ಯಾಯಾಲಯದ ವ್ಯಾಪ್ತಿಗೆ ಬ್ರಹ್ಮಾವರ ಹೋಬಳಿಯ 19 ಗ್ರಾಮಗಳು ಮತ್ತು ಕೋಟ ಹೋಬಳಿಯ 32 ಗ್ರಾಮಗಳನ್ನೊಳಗೊಂಡ ಇಡೀ ಬ್ರಹ್ಮಾವರ ತಾಲೂಕು ಸೇರ್ಪಡೆಯಾಗಿರುತ್ತದೆ. ಹಾಗೆಯೇ ಕೋಟ ಹೋಬಳಿಯ 32 ಗ್ರಾಮಗಳ ಮೂಲದಾವೆ ಹಾಗೂ ಮೇಲ್ಮನವಿ ವ್ಯಾಪ್ತಿಯು ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ವ್ಯಾಪ್ತಿಗೂ, ಬ್ರಹ್ಮಾವರ ಹೋಬಳಿಯ 19 ಗ್ರಾಮಗಳ ಮೂಲದಾವೆ ಹಾಗೂ ಮೇಲ್ಮನವಿ ವ್ಯಾಪ್ತಿಯು ಉಡುಪಿಯ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ವ್ಯಾಪ್ತಿಗೂ ಒಳಪಟ್ಟಿತ್ತು.
ಇದೀಗ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಬ್ರಹ್ಮಾವರ ತಾಲೂಕು ಕೋಟ ಹೋಬಳಿಗೆ ಸಂಬಂಧಿಸಿದ ಮಣೂರು, ಗಿಳಿಯಾರ್, ಬನ್ನಾಡಿ, ಚಿತ್ರಪಾಡಿ, ಕೋಟತಟ್ಟು, ಪಾರಂಪಳ್ಳಿ, ಕಾರ್ಕಡ, ಗುಂಡ್ಮಿ, ಕೋಡಿ, ಐರೋಡಿ, ಬಾಳೆಕುದ್ರು, ಪಾಂಡೇಶ್ವರ, ಮೂಡಹಡು, ಹೊಸಾಳ, ಕಚ್ಚೂರು, ಹನೆಹಳ್ಳಿ, ಹೆರಾಡಿ, ಕಾವಾಡಿ, ವಡ್ಡರ್ಸೆ, ಅಚ್ಲಾಡಿ, ಶಿರಿಯಾರ, ಯಡ್ತಾಡಿ, ನಡೂರು, ಕಾಡೂರು, ಹೆಗ್ಗುಂಜೆ, ಬಿಲ್ಲಾಡಿ, ಕಕ್ಕುಂಜೆ, ವಂಡಾರು, ಆವರ್ಸೆ, ಹಿಲಿಯಾಣ, ಶಿರೂರು ಮತ್ತು ನಂಚಾರು ಈ 32 ಗ್ರಾಮಗಳ ಮೂಲದಾವೆ ಹಾಗೂ ಮೇಲ್ಮನವಿಯನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ಶಿಫಾರಸಿನ ಮೇರೆಗೆ ಉಡುಪಿಯ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವ್ಯಾಪ್ತಿಗೆ ಒಳಪಡಿಸಿ ಕರ್ನಾಟಕ ಸರ್ಕಾರವು ಫೆ. 27 ರಂದು ಅಧಿಸೂಚನೆ ಹೊರಡಿಸಿರುತ್ತದೆ.ಇದರಿಂದಾಗಿ ಇಡೀ ಬ್ರಹ್ಮಾವರ ತಾಲೂಕಿಗೆ ಸಂಬಂಧಿಸಿದ ಮೂಲದಾವೆ ಹಾಗೂ ಮೇಲ್ಮನವಿಗಳು ಉಡುಪಿಯ ನ್ಯಾಯಾಲಯಗಳ ವ್ಯಾಪ್ತಿಗೆ ಒಳಪಟ್ಟಂತಾಗಿದೆ ಎಂದು ರೆನೋಲ್ಡ್ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.