ಕನ್ನಡಪ್ರಭ ವಾರ್ತೆ ಬೆಂಗಳೂರು

ಕ್ಷೇತ್ರಗಳ ಮರುವಿಂಗಡಣೆ (ಡಿಲಿಮಿಟೇಶನ್‌) ಎಲ್ಲವೂ ಸುಗಮವಾಗಿ ನಡೆದರೆ ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ಬರಬಹುದು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.

ಜೆಡಿಎಸ್‌ ಮಹಿಳಾ ಘಟಕ ಭಾನುವಾರ ನಗರದ ಡಾ.ಬಾಬು ಜಗಜೀವನ ರಾಮ್‌ ಭವನದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಶೇ.33ರಷ್ಟು ಮೀಸಲಾತಿ ಜಾರಿಯಾದರೆ, 75-80 ಮಂದಿ ಮಹಿಳೆಯರು ವಿಧಾನಸಭೆಗೆ ಸ್ಪರ್ಧಿಸಬೇಕಾಗುತ್ತದೆ ಎಂದರು.

ಮಹಿಳೆಯರಿಗೆ ಹೆಚ್ಚು ಅವಕಾಶ:

ಮುಂಬರುವ ಜಿಬಿಎ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಹೆಚ್ಚು ಮಹಿಳೆಯರು ಸ್ಪರ್ಧೆ ಮಾಡಬೇಕು. ಜಿಬಿಎ ಪಂಚ ನಗರ ಪಾಲಿಕೆಗಳ 369 ವಾರ್ಡುಗಳಲ್ಲಿ ಜೆಡಿಎಸ್‌ಗೆ ಎಷ್ಟು ವಾರ್ಡ್‌ಗಳಲ್ಲಿ ಸ್ಪರ್ಧಿಸುವ ಶಕ್ತಿ ಇದೆ ಎಂಬುದನ್ನು ಗಮನಿಸಿ. ಬಳಿಕ ಮಹಿಳೆಯರಿಗೆ ಎಷ್ಟು ಜನರಿಗೆ ಅವಕಾಶ ನೀಡಬಹುದು ಎಂದು ತೀರ್ಮಾನ ಮಾಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸ್ಪರ್ಧೆ ಮಾಡಿದಾಗ ಮಾತ್ರ ಮಹಿಳಾ ಮೀಸಲಿಗೆ ಅರ್ಥ ಬರುತ್ತದೆ ಎಂದು ದೇವೇಗೌಡರು ಅಭಿಪ್ರಾಯಪಟ್ಟರು.


ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಶೇ.33ರಷ್ಟು ಮಹಿಳಾ‌ ಮೀಸಲಾತಿ ಕೊಟ್ಟಿದ್ದು ನಾವು. ಈ ಶೇ.33ರಷ್ಟು ಮಹಿಳಾ ಮೀಸಲಾತಿ ಕೊಡಲು ತೀರ್ಮಾನ ಮಾಡಿದ್ದು ನಾವು. ನಮ್ಮ ಮುಖಂಡರು, ಕಾರ್ಯಕರ್ತರು ಜನರಿಗೆ ಈ ವಿಷಯ ತಿಳಿಸಬೇಕು ಎಂದು ಅವರು ಹೇಳಿದರು.

ಮಹಿಳೆಯರಿಗೆ ಜೆಡಿಎಸ್‌ ದೊಡ್ಡ ಕೊಡುಗೆ:

ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ಮಹಿಳೆಯರಿಗಾಗಿ ಜೆಡಿಎಸ್ ಪಕ್ಷ ದೊಡ್ಡ ಕೊಡುಗೆ ನೀಡಿದೆ. ದೇವೇಗೌಡರು ಶೇ.33ರಷ್ಟು ಮಹಿಳಾ ಮೀಸಲು ನೀಡಲು ನಾಂದಿ ಹಾಡಿದರು. ಕುಮಾರಸ್ವಾಮಿ ಅವರು ಲಾಟರಿ, ಸರಾಯಿ ನಿಷೇಧ ಮಾಡಿ ಎಷ್ಟೋ ಹೆಣ್ಣು ಮಕ್ಕಳ ಜೀವನ ಉಳಿಸಿದರು ಎಂದು ಸ್ಮರಿಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಂಚರತ್ನ ಯೋಜನೆ ಭರವಸೆ ನೀಡಿದ್ದರು. ಉಚಿತ ಆರೋಗ್ಯ, ಉಚಿತ ಶಿಕ್ಷಣ, ಉಚಿತ ಆರೋಗ್ಯ ಕೊಡುತ್ತೇನೆ ಎಂದು ಹೇಳಿದ್ದರು. ಆದರೂ ಮಹಿಳೆಯರು ಎರಡು ಸಾವಿರ ರು.ಗೆ ಮಾರು ಹೋದರು. ಪಂಚರತ್ನದಂಥ ಉತ್ತಮ ಕಾರ್ಯಕ್ರಮಗಳು ಜನರಿಗೆ ಅರ್ಥ ಆಗಲಿಲ್ಲ. ಗ್ಯಾರಂಟಿ ಯೋಜನೆಗಳಿಂದ ತಾತ್ಕಾಲಿಕ ಉಪಯೋಗ ಸಿಗಬಹುದು. ಇದರಿಂದ ಜೀವನ ರೂಪಿಸಿಕೊಳ್ಳಲು ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.