ಸಾರಾಂಶ
ಕನ್ನಡಪ್ರಭ ವಾರ್ತೆ ಕವಿತಾಳ
ಸಮೀಪದ ಉಟಕನೂರು ಅಡವಿ ಸಿದ್ದೇಶ್ವರ ಮಠದಲ್ಲಿ ಮರಿಬಸವಲಿಂಗ ತಾತನವರ 33ನೇ ಜಾತ್ರಾ ಮಹೋತ್ಸವ ಫೆ.3ರಂದು ಸಡಗರ ಸಂಭ್ರಮದಿಂದ ಜರುಗಲಿದೆ ಜಾತ್ರಾ ಮಹೋತ್ಸವದಲ್ಲಿ ಉಟಕನೂರು ಸೇರಿದಂತೆ ಸುತ್ತಮುತ್ತಲಿನ ಸಹಸ್ರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ.ಬಸವಲಿಂಗ ತಾತನವರ ಪುಣ್ಯಸ್ಮರಣೆ ಅಂಗವಾಗಿ ಜ.15 ರಿಂದ ಆಂಭವಾದ ಪುರಾಣ ಪ್ರವಚನದ ಮಹಾಮಂಗಲ ಶುಕ್ರವಾರ ನಡೆಯಲಿದ್ದು, ಕತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಮಹಾಮಂಗಳಾರತಿ ಸೇರಿದಂತೆ ವಿಶೇಷ ಪೂಜೆಗಳು ಮತ್ತು ಪಲ್ಲಕ್ಕಿ ಉತ್ಸವ ಜರುಗಲಿದೆ. ಧೀಡ್ ನಮಸ್ಕಾರ ಹಾಕುವ ಮೂಲಕ ಭಕ್ತರು ಹರಕೆ ತೀರಿಸಲಿದ್ದಾರೆ.
ಉಟಕನೂರು ಗ್ರಾಮದ ಅಡವಿ ಸಿದ್ದೇಶ್ವರ ಮಠವು ತನ್ನದೇ ಆದ ಇತಿಹಾಸ ಹೊಂದಿದ್ದು, ಮಠದಲ್ಲಿ ಇಂದಿಗೂ ಅಡವಿ ಸಿದ್ದೇಶ್ವರ ಸ್ವಾಮಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರಿಂದ ಶ್ರೀಮಠವು ಬೈಲಹೊಂಗಲ ತಾಲ್ಲೂಕಿನ ಅಡವಿಸಿದ್ದೇಶ್ವರ ಮಠದ ಪರಂಪರೆ ಹೊಂದಿದೆ ಎನ್ನುವುದನ್ನು ಬಿಂಬಿಸುತ್ತದೆ.ಜಗದ್ಗುರುಗಳ ಆಶೀರ್ವಾದ ಪಡೆದ ಮರಿಬಸವಲಿಂಗ ಎನ್ನುವ ಬಾಲಕ ದಿನಗಳು ಗತಿಸಿದಂತೆ ಬಾಲಚಂದ್ರನಂತೆ ಕಂಗೊಳಿಸಿದರು ಮತ್ತು ಶಿವಧ್ಯಾನಾಸಕ್ತರಾಗಿ ಅನ್ಯರ ಕಷ್ಟ, ನಷ್ಟ ಗಳಿಗೆ ಸ್ಪಂದಿಸುತ್ತ, ಶಾಪಾನುಗ್ರಹ ಸಮರ್ಥರು ಎನಿಸಿಕೊಂಡು ಹಸಿವು, ತೃಷೆಗಳ ಕಡೆ ಗಮನ ನೀಡದೆ ಯೋಗಾವಸ್ಥೆಯಲ್ಲಿಯೇ ರಿಬಸವ ಲಿಂಗ ಶರಣರು ಕಾಲವನ್ನು ಕಳೆದರು ಅವರು ಬಾಲಕನಂತೆ ಆಡಿದ ಆಟಗಳೆಲ್ಲಾ ಲೀಲೆಗಳಾಗಿವೆ.
1992ರಲ್ಲಿ ತಾತನವರು ಪರಬ್ರಹ್ಮ ಸ್ವರೂಪದಲ್ಲಿ ಲೀನರಾದರು. ನಂತರ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಪ್ರತಿ ಗ್ರಾಮಗಳಲ್ಲಿ ಹಾವಿನ ರೂಪದಲ್ಲಿ ಭಕ್ತರಿಗೆ ಕಂಡು ಬಂದರು. ಈಗಲೂ ಜಿಲ್ಲೆಯಾದ್ಯಂತ ಅವರ ಗದ್ದುಗೆಗಳನ್ನು ಸ್ಥಾಪಿಸಲಾಗಿದ್ದು, ಭಕ್ತರು ನಿತ್ಯಪೂಜಿಸುತ್ತಾರೆ ಮತ್ತು ಗ್ರಾಮಗಳಲ್ಲಿ ಜಾತ್ರೆಗಳು ನಡೆಯುತ್ತವೆ.ತಾತನವರು ಲಿಂಗೈಕ್ಯರಾದ ನಂತರ ಮರಿಬಸವರಾಜ ದೇಶಿಕರನ್ನು ಮಠದ ಪೀಠಾಧಿಪತಿಗಳನ್ನಾಗಿ ನೇಮಿಸಿದ್ದು, ಅವರು ಮಠದ ಪರಂಪರೆಯನ್ನು ಮುನ್ನಡೆಸಿದ್ದಾರೆ. ಈ ರೀತಿ ನಡೆದಾಡುವ ದೇವರೆಂದೇ ಖ್ಯಾತಿ ಹೊಂದಿದ್ದ ಲಿಂಗೈಕ್ಯ ಮರಿಬಸವಲಿಂಗ ತಾತನವರ ಜಾತ್ರೆಯಲ್ಲಿ ಸಾವಿರಾರು ಜನ ಭಕ್ತರು ಭಾಗವಹಿಸಲಿದ್ದು, ಈಗಾಗಲೇ ಜಾತ್ರೆಗೆ ಅಗತ್ಯ ಸಿದ್ಧತೆಗಳನ್ನು ಮಠದ ಆಡಳಿತ ಮಂಡಳಿ ಮಾಡಿಕೊಂಡಿದೆ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಹುಸಿಯಾಗದ ಜಗದ್ಗುರು ಭವಿಷ್ಯ!
ಅತ್ಯಂತ ಭವ್ಯ ಪರಂಪರೆಯನ್ನು ಹೊಂದಿರುವ ಉಟಕನೂರು ಮಠವು ಶರಣರ ಸಂತತಿಯಿಂದಾಗಿ ಆಚಾರ ಮಠವಾಗಿದೆ. 20ನೇ ಶತಮಾನದಲ್ಲಿ ಗುರುಪಾದಯ್ಯ ಸ್ವಾಮಿ ಎನ್ನುವವರ ಮೂರನೇ ಹೆಂಡತಿಗೆ ಜನಿಸಿದ ಗಂಡು ಮಗು, ಸಂಸಾರದ ಕಡೆಗೆ ಗಮನ ಕೊಡದೆ ಹುಚ್ಚನಂತೆ ವರ್ತಿಸತೊಡಗಿದಾಗ ಚಿಂತೆಗೊಳಗಾದ ಗುರುಪಾದಯ್ಯನವರು ಕೇದಾರದ ಜಗದ್ಗುರುಗಳ ಬಳಿ ತಮ್ಮ ನೋವನ್ನು ತೋಡಿಕೊಂಡರು ಎನ್ನಲಾಗಿದೆ. ಆಗ ಅವರು ಇವನಿಗೆ ಕಾಲಲ್ಲಿ ಗೆರೆಗಳಿಲ್ಲ ತಲೆಯಲ್ಲಿ ಸುಳಿಯಿಲ್ಲ ಈ ಬಾಲಕ ದಿವ್ಯ ತೇಜಸ್ಸನ್ನು ಹೊಂದಿದ್ದು, ಇವನು ಹುಚ್ಚನಲ್ಲ ಜಗವನ್ನೇ ಮೆಚ್ಚಿಸುವ ಯೋಗಿಯಾಗುತ್ತಾನೆಂದು ಆಶೀರ್ವಾದ ಮಾಡಿದರು ಎಂದು ಹೇಳಲಾಗುತ್ತದೆ.