ರಾಜ್ಯದ 45 ಲಕ್ಷ ರೈತರಿಗೆ ₹ 350 ಕೋಟಿ ಕೃಷಿ ಸಮ್ಮಾನ ಹಣ ಬಿಡುಗಡೆ

| Published : Jun 19 2024, 01:05 AM IST

ರಾಜ್ಯದ 45 ಲಕ್ಷ ರೈತರಿಗೆ ₹ 350 ಕೋಟಿ ಕೃಷಿ ಸಮ್ಮಾನ ಹಣ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಗಾರು ಹಂಗಾಮು ಹಿನ್ನೆಲೆಯಲ್ಲಿ ರೈತರಿಗೆ ಬಿತ್ತನೆ ಬೀಜ, ಗೊಬ್ಬರ, ಕೃಷಿ ಉಪಕರಣಗಳ ಬಾಡಿಗೆ ಸೇರಿದಂತೆ ಕೃಷಿ ಕಾರ್ಯಕ್ಕೆ ಈ ಹಣ ತುಂಬ ಅನುಕೂಲ ಆಗಲಿದೆ.

ಧಾರವಾಡ:ಕೃಷಿ ಸಮ್ಮಾನ ಯೋಜನೆ ಅಡಿ ದೇಶದ 9.58 ಕೋಟಿ ರೈತರಿಗೆ ಕೇಂದ್ರ ಸರ್ಕಾರವು ₹ 20 ಸಾವಿರ ಕೋಟಿ ಬಿಡುಗಡೆ ಮಾಡಿದರೆ, ಈ ಪೈಕಿ ರಾಜ್ಯದ 45 ಲಕ್ಷ ರೈತರಿಗೆ ₹ 350 ಕೋಟಿ ಹಣ ನೇರವಾಗಿ ಅವರ ಬ್ಯಾಂಕ್‌ಗಳಿಗೆ ವಿತರಣೆಯಾಗಿದೆ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಸ್ಟಿಲ್‌ ಉದ್ಯಮ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಉತ್ತರ ಪ್ರದೇಶದ ವಾರಾಣಸಿಯಲ್ಲಿ ಮಂಗಳವಾರ ಪಿಎಂ-ಕಿಸಾನ್‌ ಸಮ್ಮಾನ ಯೋಜನೆ ಅಡಿ 17ನೇ ಕಂತಿನ ನಿಧಿ ಬಿಡುಗಡೆಯ ನೇರ ಪ್ರಸಾರ ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ಸಚಿವರು, 3ನೇ ಬಾರಿ ದೇಶದ ಪ್ರಧಾನಿಯಾದ ನರೇಂದ್ರ ಮೋದಿ ಅವರು ತಮ್ಮ ಪ್ರಥಮ ಕ್ಯಾಬಿನೆಟ್‌ನಲ್ಲಿ ತೆಗೆದುಕೊಂಡ ನಿರ್ಧಾರದಂತೆ ನಿಧಿ ಬಿಡುಗಡೆ ಮಾಡಿದ್ದಾರೆ. ಧಾರವಾಡದ ಜಿಲ್ಲೆಯ ಒಂದು ಲಕ್ಷಕ್ಕೂ ಹೆಚ್ಚು ರೈತರ ಅಕೌಂಟ್‌ಗಳಿಗೆ ₹ 20 ಕೋಟಿ ಹಣ ಈಗಾಗಲೇ ಜಮೆಯಾಗಿದೆ ಎಂದರು.ಮುಂಗಾರು ಹಂಗಾಮು ಹಿನ್ನೆಲೆಯಲ್ಲಿ ರೈತರಿಗೆ ಬಿತ್ತನೆ ಬೀಜ, ಗೊಬ್ಬರ, ಕೃಷಿ ಉಪಕರಣಗಳ ಬಾಡಿಗೆ ಸೇರಿದಂತೆ ಕೃಷಿ ಕಾರ್ಯಕ್ಕೆ ಈ ಹಣ ತುಂಬ ಅನುಕೂಲ ಆಗಲಿದೆ. 2019ರಿಂದ ಈ ಯೋಜನೆ ಮೂಲಕ ಪ್ರಧಾನ ಮಂತ್ರಿಗಳು ರೈತರಿಗೆ ನಾಲ್ಕು ತಿಂಗಳಿಗೊಮ್ಮೆ ₹ 2 ಸಾವಿರ ನೀಡುತ್ತಿದ್ದು, ಇಲ್ಲಿಯ ವರೆಗೆ ₹ 3.2 ಲಕ್ಷ ಕೋಟಿ ನಿಧಿಯನ್ನು ರೈತರಿಗೆ ನೀಡಿದ್ದಾರೆ. ಇದಲ್ಲದೇ, ರಾಜ್ಯದ ಇಬ್ಬರು ಮಹಿಳೆಯರಿಗೆ ಕೃಷಿ ಸಖಿ ಪ್ರಶಸ್ತಿಯನ್ನು ಸಹ ಇದೇ ಕಾರ್ಯಕ್ರಮದಲ್ಲಿ ನೀಡಿದ್ದು ರಾಜ್ಯದ ಹೆಮ್ಮೆಯೇ ಸರಿ. ರೈತರ ಕಷ್ಟ-ಸುಖದಲ್ಲಿ ನಾವಿದ್ದೇವೆ ಎಂಬುದನ್ನು ಪ್ರಧಾನ ಮಂತ್ರಿಗಳು ತೋರಿದ್ದಾರೆ ಎಂದು ಹೇಳಿದರು.

ನಂತರ ಸಂಜೆ 5ರಿಂದ 6ರ ವರೆಗೆ ನಡೆದ ಪ್ರಧಾನ ಮಂತ್ರಿಗಳ ಪಿಎಂ-ಕಿಸಾನ್‌ ಸಮ್ಮಾನ ಕಾರ್ಯಕ್ರಮದ ನೇರ ಪ್ರಸಾರವನ್ನು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವೀಕ್ಷಿಸಿದರು. ಕೃಷಿ ವಿವಿ ಕುಲಪತಿ ಡಾ. ಪಿ.ಎಲ್‌. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿಸ್ತರಣಾ ನಿರ್ದೇಶಕ ಡಾ. ಅಂಗಡಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ರೈತ ಮುಖಂಡ ಮಲ್ಲಿಕಾರ್ಜುನ ಬಾಳನಗೌಡರ, ರಾಜ್ಯದಲ್ಲಿ ಬರ ಪರಿಹಾರ ಎಲ್ಲ ರೈತರಿಗೆ ತಲುಪಿಲ್ಲ. ಎಫ್ಐಡಿ ಸೇರಿದಂತೆ ಇನ್ನಿತರೆ ಕಾರಣ ನೀಡುತ್ತಿದ್ದಾರೆ. ಜತೆಗೆ ಬಿತ್ತನೆ ಬೀಜ, ಗೊಬ್ಬರ ದರ ಏರಿಕೆ ಮಾಡಲಾಗಿದೆ. ಜಿಲ್ಲೆಗೆ ಕಳಸಾ-ಬಂಡೂರಿ ನಾಲಾ ಜೋಡಣೆಗೆ ಕೇಂದ್ರ ಸಚಿವರಾದ ತಾವು ಕ್ರಮ ವಹಿಸಬೇಕೆಂಬ ಬೇಡಿಕೆಗಳನ್ನು ವೇದಿಕೆ ಮೂಲಕ ಇಟ್ಟರು.