ಶೀಘ್ರವೇ ಘಟಪ್ರಭಾ ನದಿಗೆ 3500 ಕ್ಯೂಸೆಕ್‌ ನೀರು: ಜಿಲ್ಲಾಧಿಕಾರಿ ಜಾನಕಿ ಕೆ.ಎಂ.

| Published : Feb 16 2024, 01:46 AM IST

ಶೀಘ್ರವೇ ಘಟಪ್ರಭಾ ನದಿಗೆ 3500 ಕ್ಯೂಸೆಕ್‌ ನೀರು: ಜಿಲ್ಲಾಧಿಕಾರಿ ಜಾನಕಿ ಕೆ.ಎಂ.
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ: ಜಿಲ್ಲೆಯ ಘಟಪ್ರಭಾ ನದಿಯ ಪಾತ್ರದಲ್ಲಿ ನೀರು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ 3500 ಕ್ಯೂಸೆಕ್ ನೀರು ಬಿಡುಗಡೆಯಾಗಲಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ತಿಳಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಬರ ಪರಿಸ್ಥಿತಿ ನಿರ್ವಹಣೆ ಕುರಿತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಡಕಲ್ ಜಲಾಶಯದಿಂದ ಫೆ.19ರಂದು ನೀರು ಬಿಡುಗಡೆ ಮಾಡುವುದಾಗಿ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ತಿಳಿಸಿದ್ದಾರೆ. ನೀರು ಬಿಡುಗಡೆಯಾದಾಗ ಯಾವುದೇ ಕಾರಣಕ್ಕೂ ನದಿ ಪಾತ್ರದಲ್ಲಿ ಜಮೀನುಗಳಿಗೆ ನೀರು ಬಳಸಿಕೊಳ್ಳುವಂತಿಲ್ಲ ಎಂದು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯ ಘಟಪ್ರಭಾ ನದಿಯ ಪಾತ್ರದಲ್ಲಿ ನೀರು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ 3500 ಕ್ಯೂಸೆಕ್ ನೀರು ಬಿಡುಗಡೆಯಾಗಲಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಬರ ಪರಿಸ್ಥಿತಿ ನಿರ್ವಹಣೆ ಕುರಿತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಡಕಲ್ ಜಲಾಶಯದಿಂದ ಫೆ.19ರಂದು ನೀರು ಬಿಡುಗಡೆ ಮಾಡುವುದಾಗಿ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ತಿಳಿಸಿದ್ದಾರೆ. ನೀರು ಬಿಡುಗಡೆಯಾದಾಗ ಯಾವುದೇ ಕಾರಣಕ್ಕೂ ನದಿ ಪಾತ್ರದಲ್ಲಿ ಜಮೀನುಗಳಿಗೆ ನೀರು ಬಳಸಿಕೊಳ್ಳುವಂತಿಲ್ಲ. ಪ್ರಾರಂಭದಿಂದ ಬಾಗಲಕೋಟೆ ತಾಲೂಕಿನ ಆನದಿನ್ನಿ ಬ್ಯಾರೇಜ್‌ವರೆಗೆ ನೀರು ತಲುಪಬೇಕು. ಈ ಸಮಯದಲ್ಲಿ ಹೆಸ್ಕಾಂನವರು ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು. ಅಲ್ಲದೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಬಿಡುಗಡೆಯಾದ ನೀರನ್ನು ಸಂಗ್ರಹ ಮಾಡಿಕೊಳ್ಳಲು ಯೊಜನೆ ರೂಪಿಸಲು ಸೂಚಿಸಿದರು.

ಸಮಸ್ಯಾತ್ಮಕ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಮೊದಲು ಖಾಸಗಿ ಕೊಳವೆ ಬಾವಿಯಿಂದ ನೀರು ಪೂರೈಸಲು ಕ್ರಮವಹಿಸಿ, ಇಲ್ಲವಾದರೆ ಹೊಸ ಕೊಳವೆಬಾವಿ ಕೊರೆಯಲು ಕ್ರಿಯಾಯೋಜನೆ ರೂಪಿಸಿ ಅನುಮೋದನೆ ಪಡೆಯಬೇಕು. ಕೊಳವೆ ಬಾಯಿ ಇದ್ದು, ನೀರು ಬರೆದಿದ್ದಲ್ಲಿ ದುರಸ್ತಿ ಮಾಡಿ ನೀರು ಬರುವಂತೆ ಮಾಡಬೇಕು. ಜುಲೈ ಮಾಹೆಯವರೆಗೆ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಮುನ್ನಚ್ಚರಿಕೆ ಕ್ರಮವಹಿಸಬೇಕು. ಈ ಬಗ್ಗೆ ಕ್ರಿಯಾಯೋಜನೆ ಮಾಡಿದಲ್ಲಿ ಮಾಹಿತಿ ನೀಡಲು ತಿಳಿಸಿದ ಅವರು, ಈ ನಿಟ್ಟಿನಲ್ಲಿ ಗ್ರಾಪಂ ಅಧಿಕಾರಿಗಳಿಂದ ಹಿಡಿದು ಎಲ್ಲ ಅಧಿಕಾರಿಗಳು ಕೆಲಸ ನಿರ್ವಹಿಸಲು ಸೂಚಿಸಿದರು.

ಫೆಬ್ರವರಿ ತಿಂಗಳಲ್ಲಿ ಆಯಾ ತಾಲೂಕಿನಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆಸಲಾದ ಟಾಸ್ಕ್‌ಫೋರ್ಸ್‌ ಸಭೆಯ ವರದಿ ಸಲ್ಲಿಸಬೇಕು. ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯವರು ಗುರುತಿಸಿರುವ 11 ಎಕರೆ ಜಮೀನಿನಲ್ಲಿ ಮೇವು ಬೆಳೆಸಲು ಕ್ರಮವಹಿಸಬೇಕು. ಜಿಲ್ಲೆಯಲ್ಲಿ ಮಾರ್ಚ್‌ವರೆಗೂ ಕುಡಿಯುವ ನೀರಿನ ಸಮಸ್ಯೆ ಇರಲ್ಲ. ಮುಂದೆ ತೊಂದರೆಯಾಗದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮವಹಿಸಲು ಸೂಚನೆ ನೀಡಿದರು.

ಜಿಪಂ ಸಿಇಒ ಶಶಿಧರ ಕುರೇರ್ ಮಾತನಾಡಿ, ಕುಡಿಯುವ ನೀರಿಗಾಗಿ ಅವಶ್ಯಕತೆ ಇದ್ದಲ್ಲಿ ಮಾತ್ರ ಕಾಮಗಾರಿ ಕೈಗೊಳ್ಳಬೇಕು. ಈಗಾಗಲೇ ಕೊರೆದ ಕೊಳವೆಬಾವಿ ದುರಸ್ತಿ ಕೈಗೊಂಡು ಪೈಪ್‌ ಹಾಗೂ ಮೋಟಾರ್ ಖರೀದಿಗೂ ಸಹ ಬಿಡುಗಡೆ ಮಾಡಿದ ಅನುದಾನ ಬಳಕೆ ಮಾಡುವಂತೆ ಗ್ರಾಮೀಣ ಕುಡಿಯುವ ನೀರು ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಗೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಸೇರಿ ಬರ ನಿರ್ವಹಣೆಗಾಗಿ ನೇಮಿಸಲಾದ ನೋಡಲ್ ಅಧಿಕಾರಿಗಳಾದ ಕೃಷಿ ಇಲಾಖೆ ಜಂಟಿ ನಿದೇಶಕ ಕೋಳೆನ್ನವರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ನಂದಾ ಹಣಮರಟ್ಟಿ, ಪಶು ಇಲಾಖೆ ಉಪನಿರ್ದೇಶಕ ಎಸ್.ಎಚ್. ಕರಡಿಗುಡ್ಡ, ಗ್ರಾಮೀಣ ಕುಡಿಯುವ ನೀರು ಯೋಜನೆಯ ಅಭಿಯಂತರ ಪುರೋಹಿತ, ರೇಷ್ಮೆ ಇಲಾಖೆ ಉಪನಿರ್ದೇಶಕ ಎಸ್.ಎಂ.ಕೋರೆ ಇತರರು ಉಪಸ್ಥಿತರಿದ್ದರು.